ನಾಯಿಗಳ ಗುಂಪಿನ ದಾಳಿಗೆ ಬಲಿಯಾದ ಬಾಲಕಿ

ಕುಣಿಗಲ್.

          ಇತ್ತೀಚೆಗೆ ರಾಜ್ಯದ ವಿವಿಧೆಡೆ ಮಕ್ಕಳ ಮೇಲೆ ನಾಯಿಗಳ ಗುಂಪಿನ ಹಾವಳಿ ಹೆಚ್ಚುತ್ತಿರುವ ಬೆನ್ನಲ್ಲೇ ತಾಲ್ಲೂಕಿನ ಕೊತ್ತಗೆರೆ ಹೋಬಳಿಯ ಮಾವಿನಕಟ್ಟೆ-ನಿಂಗಯ್ಯನಪಾಳ್ಯ ಗ್ರಾಮದ ತೇಜಸ್ವಿನಿ (13) ಎಂಬ ಬಾಲಕಿ ನಾಯಿಗಳ ದಾಳಿಗೆ ತುತ್ತಾಗಿ ಸಾವನ್ನಪ್ಪಿದ್ದ ಹೃದಯ ವಿದ್ರಾವಕ ಘಟನೆ ನಡೆದಿತ್ತು.

       ಅಂದು ಭಾನುವಾರ ಶಾಲೆಗೆ ರಜೆ ಇತ್ತು, ತೇಜಸ್ವಿನಿ ಮೂಡಲ್ ಕುಣಿಗಲ್ ಕೆರೆಯ ಹಿನ್ನೀರಿನ ದಡದಲ್ಲಿ ಅಣಬೆಯನ್ನು ಕಿತ್ತು ತರಲು ಹೋಗಿದ್ದಳು. ಆಗ ಪಟ್ಟಣದ ಹೌಸಿಂಗ್‍ಬೋರ್ಡ್ ಕಡೆಯಿಂದ ಹತ್ತಕ್ಕೂ ಹೆಚ್ಚು ನಾಯಿಗಳು ಒಬ್ಬಳೇ ಇದ್ದ ತೇಜಸ್ವಿನಿ ಮೇಲೆ ದಾಳಿಮಾಡಿ ಆಕೆಯ ಎರಡು ಕೈಗಳನ್ನು ಕಚ್ಚಿ ತಿಂದು ಹಾಕಿ, ತಲೆಯ ಭಾಗ ಮತ್ತು ಎರಡು ಕಾಲುಗಳಿಗೆ ತೀವ್ರ ಗಾಯಗಳಿಂದ ರಕ್ತ ಸ್ರಾವವಾಗಿ ರಕ್ತದ ಮಡುವಿನಲ್ಲಿ ಬಿದ್ದು ಮೃತಪಟ್ಟಿದ್ದಳು. ಈಕೆ ಕುಣಿಗಲ್‍ನ ಸೈಂಟ್ ರೀಟಾ ಶಾಲೆಯಲ್ಲಿ 6ನೇ ತರಗತಿಯನ್ನು ಓದುತ್ತಿದ್ದಳು.
ನಿಂಗಯ್ಯನಪಾಳ್ಯ ಗ್ರಾಮದಲ್ಲಿ ವಾಸವಾಗಿರುವ ಗಂಗಾಧರಯ್ಯ ಮತ್ತು ಗಂಗಮ್ಮ ಎಂಬ ದಂಪತಿಗಳು ತಮ್ಮ ಮಗಳು ಬೆಳಗ್ಗೆ ಹೋಗಿದ್ದು ಇನ್ನೂ ಮನೆಗೆ ಬರಲಿಲ್ಲ ಎಂಬ ಆತಂಕದಿಂದ ಮಗಳನ್ನು ಹುಡುಕಲು ಹೋದಾಗ ಕೆರೆಯ ಅಂಗಳದಲ್ಲಿ ನಾಯಿಗಳ ಗುಂಪಿನ ಮಧ್ಯ ತೇಜಸ್ವಿನಿ ಮೃತಪಟ್ಟು ಬಿದ್ದಿದ್ದಳು.

         ಭಯಭೀತರಾದ ತಂದೆ ಗಂಗಾಧರಯ್ಯ ಮತ್ತು ಸ್ನೇಹಿತರು ಕೂಗಾಡುತ್ತಲೇ ದೊಣ್ಣೆ-ಕಲ್ಲುಗಳಿಂದ ನಾಯಿಗಳಿಗೆ ಹೊಡೆದು ಓಡಿಸಿ, ತಮ್ಮ ಮಗಳ ಶವವನ್ನು ಮನೆಯ ಬಳಿಗೆ ತಂದ ವಿಚಾರ ತಿಳಿದ ಸುತ್ತ ಮುತ್ತಲ ಗ್ರಾಮಸ್ಥರು ನಾಯಿಗಳು ಮನುಷ್ಯರನ್ನು ಕೊಂದು ಸಾಯಿಸುತ್ತವೆ ಎಂಬ ವಿಚಾರದಿಂದ ಆತಂಕ ಗೊಂಡಿದ್ದು ಕೂಡಲೇ ಹೆಚ್ಚುತ್ತಿರುವ ನಾಯಿಗಳನ್ನು ಹಿಡಿಸುವ ಮೂಲಕ ಹಾಳಿಯನ್ನು ತಡೆಯಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದರು.

ಜನಪ್ರತಿನಿಧಿಗಳ-ಅಧಿಕಾರಿಗಳ ನಿರ್ಲಕ್ಷ್ಯ : ಜನರ ಆಕ್ರೋಶ

ಸಂಬಂಧಪಟ್ಟವರಿಗೆ ದೂರಿದರೂ ಪ್ರಯೋಜನವಿಲ್ಲ :- ಈ ಕೆರೆಯ ಹಿಂಭಾಗಲ್ಲಿ ಕೋಳಿ ಮಾಂಸ ಸೇರಿದಂತೆ ಇತರೆ ತ್ಯಾಜ್ಯವನ್ನು ಹಾಕಲಾಗುತ್ತಿದ್ದು, ನಿತ್ಯ ಮಾಂಸ ಮೂಳೆಯನ್ನು ತಿನ್ನುವುದು ಅಲ್ಲದೆ ಜೀವಂತ ಕುರಿ, ಮೇಕೆ ಹಾಗೂ ಸಣ್ಣ ಕರುಗಳನ್ನು ಹಿಡಿದು ತಿಂದಿವೆ ಎಂದು ದೂರುವ ಗ್ರಾಮಸ್ಥರು ಈ ನಾಯಿಗಳು ರಕ್ತದ ರುಚಿಯಿಂದ ಇಂತಹ ಅಮಾಯಕ ಹೆಣ್ಣುಮಗಳನ್ನು ಬಲಿತೆಗೆದುಕೊಂಡಿವೆ. ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಹಾಗೂ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೂ ಈ ತನಕ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Recent Articles

spot_img

Related Stories

Share via
Copy link