ಪಂಚಮಸಾಲಿಯ ಮೂವರಿಗೆ ಸಚಿವ ಸ್ಥಾನ ಕೊಡಿ

ದಾವಣಗೆರೆ:

  ಪ್ರಸ್ತುತ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯಲ್ಲಿ 17 ಜನ ಪಂಚಮಸಾಲಿ ಸಮಾಜದ ಶಾಸಕರಿದ್ದು, ಇವರಲ್ಲಿ ಕಡಿಮೆ ಎಂದರೂ ಮೂವರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಸಚಿವರನ್ನಾಗಿ ಮಾಡಲೇಬೇಕು ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಶ್ರೀವಚನಾನಂದ ಸ್ವಾಮೀಜಿ ಒತ್ತಾಯಿಸಿದ್ದಾರೆ.

   ನಗರದ ಶ್ರೀಅಭಿನವ ರೇಣುಕ ಮಂದಿರದಲ್ಲಿ ಭಾನುವಾರ ನಡೆದ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ವಿವಿಧ ಘಟಕಗಳ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪಾಲಿಕೆ ಸದಸ್ಯರಿಗೆ ಅಭಿನಂದನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

    ಬಿಜೆಪಿ-ಕಾಂಗ್ರೆಸ್ ಯಾವುದೇ ಸರ್ಕಾರವಾದರೂ ಪಂಚಮಸಾಲಿ ಸಮಾಜವನ್ನು ಕಡೆಗಣಿಸುವಂತಿಲ್ಲ. ಬಿಜೆಪಿಯಲ್ಲಿ 17 ಜನ ಪಂಚಮಸಾಲಿ ಸಮಾಜದ ಶಾಸಕರಿದ್ದಾರೆ. ಇವರಲ್ಲಿ ಮೂವರನ್ನು ಬಿ.ಎಸ್.ಯಡಿಯೂರಪ್ಪನವರು ಸಚಿವರನ್ನಾಗಿ ನೇಮಿಸಬೇಕು. ಇದು ನಾವು ಕೇಳುವ ನ್ಯಾಯವಾಗಿದೆ ಎಂದು ಪ್ರತಿಪಾದಿಸಿದರು.

    ರಾಜ್ಯದಲ್ಲಿ ಪಂಚಮಸಾಲಿ ಸಮುದಾಯದ ಜನಸಂಖ್ಯೆ 1 ಕೋಟಿಗೂ ಹೆಚ್ಚಾಗಿದೆ. ಹೀಗಾಗಿ ಸಮಾಜ ರಾಜ್ಯದಲ್ಲಿ 110 ಶಾಸಕರನ್ನು ಮಾಡುವಷ್ಟು ಶಕ್ತಿಶಾಲಿಯಾಗಿದ್ದು, ಬಹುತೇಕ ಒಂದು ಸರ್ಕಾರ ರಚನೆ ಮಾಡುವಷ್ಟು ಸಾಮಥ್ರ್ಯ ನಮ್ಮ ಸಮಾಜಕ್ಕೆ ಇದೆ. ಲಿಂಗಾಯತ ಸಮುದಾಯದಲ್ಲಿ ನಾವು ಶೇ.80ರಷ್ಟಿದ್ದೇವೆ. ಉಳಿದವರೆಲ್ಲ ಸೇರಿ ಶೇ.20ರಷ್ಟಿದ್ದಾರೆ. ಶೇ.20ರಷ್ಟಿರುವವರು ಆರೇಳು ಸಚಿವರಾಗುತ್ತಾರೆ. ಶೇ.80ರಷ್ಟಿರುವ ಪಂಚಮಸಾಲಿ ಸಮಾಜದಿಂದ ಕೇವಲ ಒಬ್ಬರೇ ಎಂದರೆ ಅದು ಅನ್ಯಾಯವಲ್ಲವೇ? ಎಂದು ಪ್ರಶ್ನಿಸಿದರು.

     ಈ ಅನ್ಯಾಯವನ್ನು ನಮ್ಮ ಪೀಠ ಪ್ರಶ್ನಿಸುತ್ತದೆ. ಇಂದು ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿರುವುದು ಪಂಚಮಸಾಲಿ ಸಮಾಜದ ಕಾರಣದಿಂದ, ಇದನ್ನು ಅವರು ಮರೆಯಬಾರದು ಎಂದರು. ಕಾಂಗ್ರೆಸ್ ಇರಲಿ, ಬಿಜೆಪಿಯೇ ಇರಲಿ ಯಾವುದೇ ಸರ್ಕಾರವಿರಲಿ. ಪಂಚಮಸಾಲಿ ಪೀಠದ ಸಲಹೆ- ಸೂಚನೆಗಳನ್ನು ಪಾಲಿಸಲೇಬೇಕು. ಇಷ್ಟು ದಿನಗಳ ಕಾಲ ನಮ್ಮನ್ನು ಬೇರೆಯವರು ತುಳಿದು ತುಳಿದು ನೆಲದಿಂದ ಕೆಳಕ್ಕೆ ಹಾಕಿದ್ದಾರೆ. ಇನ್ನು ಪೀಠವೇ ಸಮಾಜವನ್ನು ಮೇಲೆತ್ತಬೇಕಿದೆ. ನಮ್ಮ ಮಠ ಸರ್ಕಾರದಿಂದ ಯಾವುದೇ ಸೌಲಭ್ಯ? ನೆರವು ಪಡೆಯದ ಕಾರಣ ಬೆಳೆಯಲು ಸಾಧ್ಯವಾಗಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

   ಕೆ.ಎಸ್.ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಅವರು 4 ಕೋಟಿ ರೂ. ಬಿಡುಗಡೆ ಮಾಡಿರುವುದರಲ್ಲಿ ಸಿಮೆಂಟ್ ರಸ್ತೆ, ಚರಂಡಿ, ಕಾಂಪೌಂಡ್ ನಿರ್ಮಾಣವಾಗುತ್ತಿದೆ. ಯಾವುದೇ ಪಕ್ಷ ಪವರ್‍ಫುಲ್ ಆಗಬೇಕಾದರೆ ಪಂಚಮಸಾಲಿಗಳ ಬೆಂಬಲ ಬೇಕೇ ಬೇಕು. ಹೀಗಾಗಿ ಪೀಠಕ್ಕೆ ಏನು ಕೊಡುತ್ತೀರಿ ಎಂಬುದನ್ನು ಕೇಳುತ್ತಿದ್ದೇವೆ. ಇಡೀ ಪಂಚಮಸಾಲಿ ಸಮುದಾಯಕ್ಕೆ ಇರುವುದು ಒಂದೇ ಪೀಠ. ಅದು ಅಖಂಡ ಹರಿಹರ ಪಂಚಮಸಾಲಿ ಜಗದ್ಗುರು ಪೀಠ.

     ಪೀಠದ ಪ್ರತಿಯೊಂದು ವಿಚಾರವನ್ನು ನೀವು ಕೇಳಬೇಕು ಎಂದರು. ನಮ್ಮ ಸಮಾಜವದರು ಇಂದು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎನ್ನದೇ ಎಲ್ಲ ಕಡೆ ಇದ್ದಾರೆ. ಅವರು ಪೀಠಕ್ಕೆ ಏನಾದರೂ ಮಾಡಿದಾಗ ಮಾತ್ರ ಆಶೀರ್ವಾದ ಸಿಗುತ್ತದೆ. ಇಲ್ಲದಿದ್ದರೆ ಯಾವುದೇ ಆಶೀರ್ವಾದ ಸಿಗುವುದಿಲ್ಲ ಎಂದು ಸೂಚ್ಯವಾಗಿ ಎಚ್ಚರಿಸಿದರು.

    ಪ್ರಸ್ತಾವಿಕ ಮಾತನಾಡಿದ ಪಂಚಮಸಾಲಿ ಸಮಾಜ ಸಂಘದ ಜಿಲ್ಲಾಧ್ಯಕ್ಷ ಬಿ.ಸಿ.ಉಮಾಪತಿ, 2001ರಲ್ಲಿ ಸಮಾಜವವನ್ನು ಸಂಘಟಿಸುವ ಬಗ್ಗೆ ಕರೆ ನೀಡಿದಾಗ ಬಂದದ್ದು ಕೇವಲ 11 ಜನ ಮಾತ್ರ. ಆದರೆ, ಇಂದು ಹತ್ತು ಕಮಿಟಿಗಳನ್ನು ರಚಿಸಲಾಗಿದ್ದು, ಸಮಾಜ ಬಾಂಧವರು ಸ್ವಯಂ ಪ್ರೇರಿತರಾಗಿ ಬಂದು ಹೆಸರು ನೋಂದಾಯಿಸಿ ಕೊಳ್ಳುತ್ತಿದ್ದಾರೆ. 85 ಲಕ್ಷ ಜನಸಂಖ್ಯೆ ಇರುವ ಪಂಚಮ ಸಾಲಿ ಸಮಾಜವನ್ನು ಕಡೆಗಣಿಸಲಾಗಿತ್ತು. ರಾಜಕೀಯ ಮುಖಂಡರು, ಕೆಲ ಧರ್ಮ ಗುರುಗಳು ಸಮಾಜವನ್ನು ಬಳಸಿಕೊಂಡರೇ ಹೊರತು ಬೆಳೆಸಲು ಮುಂದಾಗಲಿಲ್ಲ. ಈಗ ಸಮಾಜವು ಸಂಘಟನಾ ಹಾದಿಯಲ್ಲಿದೆ. ಸಮಾಜವು ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಮುಂದುವರೆಯಲು ಸಂಘಟನೆ ಅಗತ್ಯವಾಗಿದೆ ಎಂದರು.

     ಇದೇ ಸಂದರ್ಭದಲ್ಲಿ ಮಹಾನಗರ ಪಾಲಿಕೆಗೆ ನೂತನವಾಗಿ ಆಯ್ಕೆಯಾಗಿರುವ ಸದಸ್ಯರಾದ ಬಿ.ಜಿ.ಅಜಯ ಕುಮಾರ, ಕೆ.ಎಂ.ವೀರೇಶ, ಸೋಗಿ ಶಾಂತಕುಮಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಮಂಜುನಾಥ ಪುರವಂತರ್, ಮಲ್ಲಿನಾಥ್, ದೊಡ್ಡಪ್ಪ, ವಾಣಿ ಶಿವಣ್ಣ, ಬಾದಾಮಿ ಕರಿಬಸಪ್ಪ, ಅಂದನೂರು ಮುರುಗೇಶಪ್ಪ, ಸತೀಶ್ ಮತ್ತೋಡು, ಕಂಚಿಕೆರೆ ಸುಶೀಲಮ್ಮ ಇತರರು ಉಪಸ್ಥಿತರಿದ್ದರು. ಜಿಲ್ಲಾ ಯುವ ಘಟಕದ ಕಾರ್ಯದರ್ಶಿ ಕಾಶೀನಾಥ್ ಸ್ವಾಗತಿಸಿದರು. ವಕೀಲ ಬಸವರಾಜ್ ಉಚ್ಚಂಗಿದುರ್ಗ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link