ತುಮಕೂರು
ಕೋವಿಡ್ ಪರೀಕ್ಷೆ ಹೆಸರಲ್ಲಿ ಬೇರೆಡೆಗೆ ಕಳುಹಿಸದೆ ನಿಮ್ಮ ಆಸ್ಪತ್ರೆಯಲ್ಲಿರುವ ಸೌಲಭ್ಯಗಳನ್ನು ಬಳಿಸಿಕೊಂಡು ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಿ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರು ಖಾಸಗಿ ಆಸ್ಪತ್ರೆಗಳ ವೈದ್ಯರಿಗೆ ಸೂಚನೆ ನೀಡಿದರು.
ತುಮಕೂರು ನಗರಲ್ಲಿಂದು ತುಮಕೂರು ನಗರದಲ್ಲಿರುವ ಖಾಸಗಿ ಆಸ್ಪತ್ರೆಗಳು ಒಗ್ಗೂಡಿ ಅಶ್ವಿನಿ ಆಯುರ್ವೇಧಿಕ್ ಆಸ್ಪತ್ರೆಯಲ್ಲಿ ತೆರೆದಿರುವ ಕೋವಿಡ್ ಆಸ್ಪತ್ರೆಯನ್ನು ವೀಕ್ಷಿಸಿದ ನಂತರ ಖಾಸಗಿ ಆಸ್ಪತ್ರೆಗಳ ವೈದ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್-19ನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಕೋೀವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡುವುದು ನಿಮ್ಮ ಕರ್ತವ್ಯವಾಗಿದೆ. ಆಸ್ಪತ್ರೆಗೆ ಬರುವವರನ್ನು ಚಿಕಿತ್ಸೆ ನೀಡದೆ ಕೋವಿಡ್ ಪರೀಕ್ಷೆಯ ವರದಿಯನ್ನು ಕೇಳಿ ವಾಪಸ್ಸು ಕಳುಹಿಸಿದರೆ ಹೇಗೆ ? ತುರ್ತು ಸಂದರ್ಭದಲ್ಲಿ ಬರುವ ರೋಗಿಗಳಿಗೆ ಮೊದಲು ಚಿಕಿತ್ಸೆ ನೀಡಿ ಬಡವರ ಸೇವೆ ಮಾಡಿದರೆ ನಿಮ್ಮ ವೃತ್ತಿಗೆ ಗೌರವ ಬರುತ್ತದೆ ಎಂದರು.
ಖಾಸಗಿ ಆಸ್ಪತ್ರೆಗಳು ಶೇ.50ರಷ್ಟು ಹಾಸಿಗೆಗಳನ್ನು ಕೋವಿಡ್-19 ಚಿಕಿತ್ಸೆಗಾಗಿ ಮೀಸಲಿಡಬೇಕು, ಅದರಂತೆ ಜಿಲ್ಲೆಯಲ್ಲಿ 80 ಖಾಸಗಿ ಆಸ್ಪತ್ರೆಗಳಿವೆ. ತುಮಕೂರು ನಗರದಲ್ಲಿಯೇ 39 ಖಾಸಗಿ ಆಸ್ಪತ್ರೆಗಳಿವೆ. ಅವುಗಳಲ್ಲಿ ಲಭ್ಯವಿರುವ ಹಾಸಿಗೆ ಹಾಗೂ ಐ.ಸಿ.ಯುಗಳ ಪೈಕಿ ಶೇ.50ರಷ್ಟು ಸರ್ಕಾರಕ್ಕೆ ದೊರೆಯಲಿವೆ. ಜಿಲ್ಲೆಯಲ್ಲಿ ಸುಮಾರು 2500ಕ್ಕೂ ಹೆಚ್ಚು ಹಾಸಿಗೆಗಳು ಖಾಸಗಿ ಆಸ್ಪತ್ರೆಗಳಿಂದ ಲಭ್ಯವಾಗಲಿವೇ ಎಂದು ಅವರು ತಿಳಿಸಿದರು.
ವೈದ್ಯಕೀಯ ವೃತ್ತಿ ಶ್ರೇಷ್ಠವಾದದ್ದು. ಇಂತಹ ಸಂದರ್ಭದಲ್ಲಿ ಹಣಕ್ಕಿಂತ ಸೇವೆಗೆ ಹೆಚ್ಚಿನ ಆದ್ಯತೆ ನೀಡಬೇಕು, ಅನಾರೋಗ್ಯದಿಂದ ಆಸ್ಪತ್ರೆಗೆ ಬರುವವರಿಗೆ ಮಾಮೂಲಿನಂತೆ ಸೂಕ್ತ ಚಿಕಿತ್ಸೆ ನೀಡಿ, ಕೋವಿಡ್ ಲಕ್ಷಣವಿರುವ ರೋಗಿಗಳು ಬಂದರೆ, ಪರೀಕ್ಷೆಮಾಡಿ ಚಿಕಿತ್ಸೆ ನೀಡಬೇಕು, ಈ ಬಗ್ಗೆ ಸಂಬಂಧಿಸಿದ ಪ್ರಾಧಿಕಾರಕ್ಕೆ ವರದಿ ಮಾಡಬೇಕು. ಅವರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಲಭ್ಯವಾದರೆ ಜೀವ ಉಳಿಸಲು ಸಾಧ್ಯವಾಗುತ್ತದೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ ಕೋವಿಡ್ ನಿಂದ ಮೃತಪಟ್ಟವರು ಕೊನೆಯ ಸಮಯದಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಬಂದಿರುವವರು ಆಗಿದ್ದಾರೆ ಎಂದು ಅವರು ಹೇಳಿದರು.
ಕೋವಿಡ್ ನಮ್ಮ ದೇಶ ಅಲ್ಲದೆ ಇಡೀ ಪ್ರಪಂಚಕ್ಕೆ ವ್ಯಾಪಿಸಿದೆ. ನಾವೆಲ್ಲರೂ ಒಂದಾಗಿ ಕೋವಿಡ್ ವಿರುದ್ದ ಹೋರಾಡಬೇಕು. ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಖಾಸಗೀ ಆಸ್ಪತ್ರೆಗಳು ಸರ್ಕಾರದೊಂದಿಗೆ ಕೈ ಜೋಡಿಸಬೇಕು ಎಂದು ಅವರು ಮನವಿ ಮಾಡಿದರು.
ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳಲ್ಲಿ ತಜ್ಞರು ಇಲ್ಲದಿದ್ದರೂ ಆಂತರಿಕವಾಗಿ ಆಸ್ಪತ್ರೆಗಳೇ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್ ಕುಮಾರ್ ಅವರು, ಖಾಸಗಿ ಆಸ್ಪತ್ರೆಗಳ ಮನವಿಯಂತೆ ಕೆಲ ಆಸ್ಪತ್ರೆಗಳು ಒಗ್ಗೂಡಿ ಸರ್ಕಾರದ ಮಾರ್ಗಸೂಚಿಯನ್ವಯ ಕೋವಿಡ್ ಆಸ್ಪತ್ರೆಯನ್ನು ತೆರೆಯಲು ಅನುಮತಿ ನೀಡಲಾಗಿದೆ, ಅದರಂತೆ ತುಮಕೂರು ನಗರದಲ್ಲಿ ಎರಡು ಕಡೆ ಕೋವಿಡ್ ಆಸ್ಪತ್ರೆಗಳನ್ನು ಖಾಸಗಿ ಆಸ್ಪತ್ರೆಗಳು ತೆರೆದಿವೆ ಎಂದರು.
ಸರ್ಕಾರದ ನಿರ್ದೇಶನದಂತೆ ಖಾಸಗೀ ಆಸ್ಪತ್ರೆಗಳು ಶೇ.50ರಷ್ಟು ಬೆಡ್ ಗಳನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕು. ಜಿಲ್ಲೆಯಲ್ಲಿ ಆರ್.ಟಿ.ಪಿಸಿಆರ್ ಲ್ಯಾಬ್ ಗಳ ಸಂಖ್ಯೆ ಹೆಚ್ಚಳ ಮಾಡುತ್ತಿರುವುದರಿಂದ ಪರೀಕ್ಷೆಗಳ ಸಂಖ್ಯೆಯಲ್ಲೂ ಹೆಚ್ಚಳವಾಗಲಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿರುವ ಖಾಸಗೀ ಆಸ್ಪತ್ರೆಗಳ ಸಂಖ್ಯೆಯ ಅಂಕಿ ಅಂಶಗಳ ಬಗ್ಗೆ ಹಾಗೂ ಲಭ್ಯವಾಗುವ ಬೆಡ್‍ಗಳ ಬಗ್ಗೆ ಡಿಹೆಚ್‍ಓ ಡಾ|| ನಾಗೇಂದ್ರಪ್ಪ ಅವರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಶಾಸಕರಾದ ಜ್ಯೋತಿಗಣೇಶ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ|| ವೀರಭದ್ರಯ್ಯ, ರೆಡ್ ಕ್ರಾಸ್ ಛೇರ್ಮನ್ ನಾಗಣ್ಣ, ಚರಕ ಆಸ್ಪತ್ರೆಯ ಡಾ|| ಬಸವರಾಜ್, ಡಾ|| ಪ್ರಭಾಕರ, ಡಾ|| ಮಹೇಶ ಸೇರಿದಂತೆ ಖಾಸಗೀ ಆಸ್ಪತ್ರೆಯ ವೈದ್ಯರು/ಪ್ರತಿನಿಧಿಗಳು ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಲೆಕ್ಕ ಪರಿಶೋಧಕ ರಾಮಚಂದ್ರಪ್ಪ ಒಂದು ವೆಂಟಿಲೇಟರ್ ಖರೀದಿಸಲು ರೂ 4.50ಲಕ್ಷ ರೂಗಳ ಚೆಕ್‍ನ್ನು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ