ಠೇವಣಿ ಹಣ ವಾಪಾಸ್ ಕೊಡಿಸಲು ಆಗ್ರಹ..!

ದಾವಣಗೆರೆ:

   ಲಕ್ಷ್ಮಿ ಕ್ರೆಡಿಟ್ ಕೋ-ಆಪ್ ಸೊಸೈಟಿಯಲ್ಲಿ ಹಣ ಹೂಡಿಕೆ ಮಾಡಿದ್ದ ಠೇವಣಿದಾರರು, ಬಡ್ಡಿ ಸಮೇತ ತಮ್ಮ ಹಣ ಕೊಡಿಸಬೇಕೆಂದು ಆಗ್ರಹಿಸಿ ನಗರದಲ್ಲಿ ಶುಕ್ರವಾರ ಧರಣಿ ನಡೆಸಿದರು.

   ನಗರದ ಕೆ.ಬಿ.ಬಡಾವಣೆಯ ಲಾಯರ್ ರಸ್ತೆಯಲ್ಲಿರುವ ಲಕ್ಷ್ಮೀ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‍ನ ಕಚೇರಿ ಎದುರು ಠೇವಣಿದಾರರ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಜಮಾಯಿಸಿದ ಠೇವಣಿದಾರರು, ತಾವು ತೊಡಗಿಸಿರುವ ಹಣವನ್ನು ನೀಡದೇ ಸತಾಯಿಸುತ್ತಿರುವ ಸೊಸೈಟಿಯ ಆಡಳಿತ ಮಂಡಳಿಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಠೇವಣಿದಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ.ವಿ.ಬಂಡಿವಾಡ, ಲಕ್ಷ್ಮೀ ಕ್ರೆಡಿಟ್ ಕೋ-ಆಪ್ ಸೊಸೈಟಿಯಲ್ಲಿ ಸುಮಾರು 1500-1600 ಜನ ಠೇವಣಿದಾರರು, 18ರಿಂದ 20 ಕೋಟಿ ರು.ಗಳಷ್ಟು ಹಣ ಹೂಡಿಕೆ ಮಾಡಿದ್ದಾರೆ. ಆಕರ್ಷಕ ಬಡ್ಡಿ ದರ ನೀಡುವುದಾಗಿ ಹೇಳಿ ಜನರಿಂದ ಠೇವಣಿ ಇಟ್ಟಿಸಿಕೊಂಡ ಸೊಸೈಟಿ ಈಗ ಹಣ ನೀಡದೇ ಸತಾಯಿಸುತ್ತಿದೆ ಎಂದು ಕಿಡಿಕಾರಿದರು.

    ಬಡವರು, ಶ್ರಮಿಕರು, ನಿವೃತ್ತರು, ಹಿರಿಯ ನಾಗರೀಕರು, ಮಹಿಳೆಯರು ತಮ್ಮ ದುಡಿಮೆ, ನಿವೃತ್ತಿಯ ಹಣ, ಜೀವನದಲ್ಲಿ ಉಳಿತಾಯ ಮಾಡಿದ ಹಣವನ್ನು ಈ ಸೊಸೈಟಿಯಲ್ಲಿ ಠೇವಣಿ ಮಾಡಿದ್ದಾರೆ. ಇದರಲ್ಲಿ ಕಾಯಂ ಠೇವಣಿ, ಸುಭದ್ರ ನಗದು ಪತ್ರ ಠೇವಣಿ ರೂಪದಲ್ಲಿ ಸೊಸೈಟಿ ಮಾಜಿ ಅಧ್ಯಕ್ಷರೂ, ಹಾಲಿ ನಿರ್ದೇಶಕ ಡಾ.ಎಸ್.ಆರ್.ಹೆಗಡೆ, ವ್ಯವಸ್ಥಾಪಕ ಸಿ.ಕೆ.ಸತೀಶ್ ಸಹಿ ಮಾಡಿದ ಬಾಂಡ್‍ಗಳನ್ನೂ ಠೇವಣಿದಾರರಿಗೆ ನೀಡಿದ್ದಾರೆ. ಠೇವಣಿ ಮೊತ್ತವನ್ನು ಆಕರಣೆಗೊಂಡ ಬಡ್ಡಿಯೊಂದಿಗೆ ಮರು ಪಾವತಿ ಅವಧಿಯೊಳಗೆ ನೀಡಬೇಕು. ಆದರೆ, ಈಗಾಗಲೇ ಅವದಿ ಮುಗಿದ ಕಾಯಂ ಠೇವಣಿ ಅಥವಾ ಸುಭದ್ರ ಠೇವಣಿ ಬಡ್ಡಿಯೊಂದಿಗೆ ನೀಡುವಂತೆ 2017ರಿಂದ ಠೇವಣಿದಾರರು ಆಡಳಿತ ಮಂಡಳಿಗೆ ಮನವಿ ಮಾಡುತ್ತಿದ್ದರೂ ಹಣವನ್ನು ವಾಪಾಸ್ ನೀಡಿಲ್ಲ. ಡಾ.ಹೆಗಡೆ ಸುಳ್ಳು ಭರವಸೆ ನೀಡಿ, ಠೇವಣಿದಾರರನ್ನು ಅಲೆದಾಡಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಈವರೆಗೂ ಯಾವುದೇ ಠೇವಣಿದಾರರಿಗೆ ಹಣ ಮರು ಪಾವತಿಸಿಲ್ಲ. ಇದರಿಂದ ಗ್ರಾಹಕರಿಗೆ ಆಘಾತವಾಗಿದ್ದು, ನೊಂದ ಠೇವಣಿದಾರರು ತಮ್ಮ ಠೇವಣಿ ಹಣ ವಾಪಾಸ್ಸು ಕೊಡುವಂತೆ ಆಡಳಿತ ಮಂಡಳಿ, ಸಿಬ್ಬಂದಿ ವಿರುದ್ಧ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಿಗೆ ಸಾಮೂಹಿಕವಾಗಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

    ಧರಣಿಯ ನೇತೃತ್ವವನ್ನು ಸಮಿತಿ ಕಾರ್ಯದರ್ಶಿ ಸಿ.ವೇದಮೂರ್ತಿ, ಬೂಸ್ನೂರು ಶಿವಯೋಗಿ, ಎಚ್.ಜಿ. ಕೃಷ್ಣಮೂರ್ತಿ, ನಾಗರಾಜ ರಾವ್, ಜಗನ್ನಾಥ ರಾವ್, ದಿಬ್ದಳ್ಳಿ ಚಂದ್ರಶೇಖರ ಸೇರಿದಂತೆ ಹಲವರು ವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap