ದಾವಣಗೆರೆ
ಮೋಸಕ್ಕೆ ಒಳಗಾದ ಗ್ರಾಹಕರಿಗೆ 3 ತಿಂಗಳೊಳಗಾಗಿ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಎನ್.ಶ್ರೀನಿವಾಸಯ್ಯ ತಿಳಿಸಿದರು.
ನಗರದ ಜನತಾ ಬಜಾರ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಹಕರಿಗೆ ಶೀಘ್ರವಾಗಿ ನ್ಯಾಯ ಒದಗಿಸಲು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸದಾ ಸಿದ್ಧವಿದ್ದು, ಮೋಸಕ್ಕೆ ಒಳಗಾದ ಗ್ರಾಹಕರಿಗೆ 3 ತಿಂಗಳೊಳಗಾಗಿ ಸೂಕ್ತ ಪರಿಹಾರ ಒದಗಿಸಲಾಗುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.
ನಮ್ಮ ದೇಶದಲ್ಲಿ 1986ರಿಂದ ರಾಷ್ಟ್ರೀಯ ಗ್ರಾಹಕರ ದಿನವನ್ನು ಆಚರಿಸಲಾಗುತ್ತಿದೆ. ಗ್ರಾಹಕರಿಗೆ ಎಲ್ಲಾ ರೀತಿ ನೆರವು ನೀಡಲು ಮತ್ತು ನ್ಯಾಯ ಒದಗಿಸಲು ಗ್ರಾಹಕರ ವೇದಿಕೆ ಸದಾ ಸಿದ್ಧವಿದೆ. ಕೌಟಿಲ್ಯನ ಕಾಲದಿಂದಲೂ ಗ್ರಾಹಕ ಎಂಬ ಪದವಿದೆ. ಗ್ರಾಹಕರಿಗೆ ಮೋಸವಾದಗ ಸೂಕ್ತ ಪರಿಹಾರದ ಜೊತೆಗೆ ಮೋಸ ಮಾಡಿದವರಿಗೆ ಶಿಕ್ಷೆಯನ್ನು ಕೌಟಿಲ್ಯನ ಕಾಲಮಾನದಲ್ಲಿ ನೀಡಲಾಗುತ್ತಿತ್ತು. ಪ್ರಸ್ತುತ್ತ ಗ್ರಾಹಕರ ವೇದಿಕೆಯು ಇಂತಹ ನ್ಯಾಯಾವನ್ನು ನೀಡುತ್ತಿದೆ ಎಂದರು.
1986ರ ಕಾಯ್ದೆಯು 2006 ಮತ್ತು 2012ರಲ್ಲಿ ಅನೇಕ ತಿದ್ದುಪಡಿಯನ್ನು ಪಡೆದು 2019ಕ್ಕೆ ಹೊಸ ರೂಪ ಪಡೆದಿದೆ. ತಿದ್ದುಪಡಿ ಯಾಗಿರುವ ಕಾಯ್ದೆಯು 107 ಸೆಕ್ಷನ್‍ಗಳನ್ನು ಹೊಂದಿದೆ. ಅಲ್ಲದೇ, ಪರಿಹಾರದ ಮೊತ್ತವನ್ನು ಹೆಚ್ಚಿಸಲಾಗಿದೆ. ಆದ್ದರಿಂದ ಗ್ರಾಹಕರು ಯಾವುದೇ ಭಯ ಮತ್ತು ಅನುಮಾನವಿಲ್ಲದೇ ಪಾರದರ್ಶಕವಾಗಿ ಪರಿಹಾರವನ್ನು ಪಡೆಯಬಹುದು ಎಂದರು.
ರೈತರು ಬೀಜವನ್ನು ಖರೀದಿಸಿ ಬಿತ್ತನೆಯ ನಂತರ ಸರಿಯಾದ ಬೆಳೆ ಬಾರದೆ ಇದ್ದಲಿ ಫಸಲಿನ ಕಟ್ಟಾವು ಮಾಡದೇ ಗ್ರಾಹಕರ ವೇದಿಕೆಗೆ ದೂರು ನೀಡಿದರೆ ಸೂಕ್ತ ಪರಿಹಾರವನ್ನು ನೀಡಲಾಗುವುದು. ಆನ್‍ಲೈನ್‍ಗೆ ಸಂಬಂಧಿಸಿದ ವ್ಯಾವಹಾರ, ತಾಂತ್ರಿಕ ವ್ಯಾವಹಾರಗಳಲ್ಲಿ ಮೋಸಹೋದ ಗ್ರಾಹಕರು ಪರಿಹಾರವನ್ನು ಪಡೆಯಬಹುದಾಗಿದೆ. ಆರೋಗ್ಯ ವಿಮೆ ಮತ್ತು ವಾಹನ ವಿಮೆಗಳನ್ನು ನೀಡುವಲ್ಲಿ ವಿಳಂಬ ಮಾಡುವುದನ್ನು ಸಹ ಗ್ರಾಹಕರ ವಂಚನೆ ವ್ಯಾಪ್ತಿಗೆ ಬರಲಿವೆ ಎಂದು ಅವರು ಮಾಹಿತಿ ನೀಡಿದರು.
ಗರಿಷ್ಠ ಮಾರಾಟ ದರ (ಎಂ.ಆರ್.ಪಿ)ಕ್ಕಿಂತ ಒಂದು ರೂಪಾಯಿಯನ್ನು ಅಧಿಕ ಪಡೆದ ಪ್ರಕರಣದಲ್ಲಿ ವರ್ತನಿಗೆ 50 ಸಾವಿರ ರೂ. ದಂಡ ವಿಧಿಸಲಾಗಿದೆ. ಬೆಸ್ಕಾಂನವರ ನಿರ್ಲಕ್ಷ್ಯದಿಂದ ತಂದೆ, ಮಗ ಇಬ್ಬರು ಮರಣ ಹೊಂದಿದ್ದು, ಈ ಪ್ರಕರಣದಲ್ಲಿ ಕರ್ತವ್ಯ ನಿರ್ಲಕ್ಷ್ಯ ತೋರಿದ ಆರೋಪದಡಿ ಬೆಸ್ಕಾಂಗೆ 19,99,000 ದಂಡ ವಿಧಿಸಲಾಗಿದೆ ಎಂದರು.
ತ್ವರಿತಗತಿಯಲ್ಲಿ ಗ್ರಾಹಕರ ವೇದಿಕೆಯು ನ್ಯಾಯ ನೀಡುತ್ತದೆ. ಅಲ್ಲದೇ ಈ ವರೆಗೆ ವೈದ್ಯಕೀಯ, ಬೆಸ್ಕಾಂ ಮತ್ತು ಆನ್‍ಲೈನ್ ಮಾರುಕಟ್ಟೆಗಳಿಗೆ ಅಧಿಕ ಮೊತ್ತದ ದಂಡವನ್ನು ವಿಧಿಸಲಾಗಿದೆ. ಗ್ರಾಹಕರು ಸೂಕ್ತ ದಾಖಲೆಯೊಂದಿಗೆ ದೂರು ನೀಡಿದರೆ ನ್ಯಾಯಯುತ ಪರಿಹಾರ ಕೊಡಿಸಲಾಗುವುದು ಎಂದರು.
ಅಪರ ಜಿಲ್ಲಾಧಿಕಾರಿ ಜಿ. ನಜ್ಮಾ ಮಾತನಾಡಿ, ಪ್ರತಿಯೊಬ್ಬರು ಸಾಮಾಜಿಕನ್ಯಾಯ ಪಡೆಯಬೇಕಾಗಿದೆ. ವಸ್ತುವನ್ನು ಖರೀದಿಸಿದಾಗ ಅಥವಾ ಸೇವೆಯನ್ನು ಪಡೆದಾಗ ನಾವು ಗ್ರಾಹಕರಾಗುತ್ತೇವೆ. ವಸ್ತುವಿನ ನಿಖರವಾದ ಬೆಲೆಯನ್ನು ತಿಳುಯುವುದು ಪ್ರತಿಯೊಬ್ಬ ಗ್ರಾಹಕರ ಹಕ್ಕು. ಗ್ರಾಮೀಣ ಪ್ರದೇಶದ ಜನರಿಗೆ ಇದರು ತಿಳುವಳಿಕೆ ಇರಬೇಕು. ವರ್ತಕರು ನ್ಯಾಯಯುತ ಬೆಲೆಯಲ್ಲಿ ವಸ್ತುಗಳನ್ನು ಮಾರಾಟ ಮಾಡಬೇಕು. ಎಕ್ಸ್‍ಪೈರಿ ಡೆಟ್ ಮುಗಿದ ಪದಾರ್ಥಗಳನ್ನು ಮಾರಾಟ ಮಾಡಬಾರದು. ಗ್ರಾಹಕರಿಗೆ ಅನ್ವಯವಾಗುವ ಕಾನೂನುಗಳನ್ನು ವರ್ತಕರು ಗ್ರಾಹಕರಿಗೆ ತಿಳಿಸಬೇಕು ಎಂದು ಹೇಳಿದರು.
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ ಪ್ರಾಸ್ತಾವಿಕ ಮಾತನಾಡಿ, ಅಮೇರಿಕದಲ್ಲಿ ನಡೆದ ಗ್ರಾಹಕರ ಚಳುವಳಿಯಿಂದ ಪ್ರಪಂಚದೆಲ್ಲೆಡೆ ಈ ಗ್ರಾಹಕರ ಹಕ್ಕುಗಳ ರಕ್ಷಣೆಯ ಪರಿಕಲ್ಪನೆ ಉದಯಿಸಿತು. ಗ್ರಾಹಕರ ಜಾಗೃತಿ ಮತ್ತು ಗ್ರಾಹಕರ ಹಕ್ಕುಗಳ ಸಂರಕ್ಷಣೆ ಮುಂತಾದ ಪರಿಕಲ್ಪನೆಗಳನ್ನು ಈ ಗ್ರಾಹಕರ ದಿನಾಚರಣೆಯು ಒಳಗೊಂಡಿದೆ. ಗ್ರಾಹಕರ ಸಮಗ್ರ ಕಲ್ಯಾಣ ಸಾಧಿಸಲು ಗ್ರಾಹಕರ ಜಾಗೃತಿಯು ನಿರಂತರವಾಗಿರಬೇಕು ಎಂದರು.
ಶಾಲೆಗಳಲ್ಲಿ ಗ್ರಾಹಕರ ಜಾಗೃತಿ ಮೂಡಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲಾ ಮಟ್ಟದಿಂದ ರಾಷ್ಟ್ರೀಯ ಮಟ್ಟದ ವರೆಗೂ ಗ್ರಾಹಕರ ಹಕ್ಕುಗಳ ರಕ್ಷಣೆಗೆ ಮತ್ತು ಗ್ರಾಹಕರಿಗೆ ನ್ಯಾಯ ಒದಗಿಸಲು ಗ್ರಾಹಕರ ವೇದಿಕೆಗಳು ಮತ್ತು ನ್ಯಾಯಲಯಗಳಿವೆ. 2019ರ ಗ್ರಾಹಕರ ರಕ್ಷಣಾ ಕಾಯ್ದೆಯ ಅನ್ವಯ ಮುಂದಿನ ದಿನಗಳಲ್ಲಿ ತ್ವರಿತವಾಗಿ ನ್ಯಾಯವನ್ನು ಒದಗಿಸಲಾಗುವುದು. 2020ರ ಮಾರ್ಚ್ ತಿಂಗಳಲ್ಲಿ ಗ್ರಾಹಕರ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಅನೇಕ ಕಾರ್ಯ ಕ್ರಮಗಳನ್ನು ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಹಾಗೂ ಗ್ರಾಹಕರ ವ್ಯವಹಾರಗಳ ನಿವೃತ್ತ ವ್ಯವಸ್ಥಾಪಕ ಪಿ.ಅಂಜನಪ್ಪ ಗ್ರಾಹಕರ ರಕ್ಷಣಾ ಕಾಯ್ದೆಯ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ಜ್ಯೋತಿ ರಾಜೇಶ್ ಜಂಬಗಿ ಮತ್ತು ಕೆ.ಎಸ್ ಶಿವಕುಮಾರ್, ಜಿಲ್ಲಾ ಆಹಾರ ಮತ್ತು ನಾಗರೀಕ ನಿಗಮದ ಜಿಲ್ಲಾ ವ್ಯವಸ್ಥಾಪಕ ಮುನೀರ್ ಬಾಷ. ಕಾನೂನು ಮಾಪನ ಶಾಸ್ತ್ರ ಇಲಾಖೆಯ ಟಿ.ಎನ್.ದೇವರಾಜ್, ನ್ಯಾಯಬೆಲೆ ಅಂಗಡಿಗಳ ಅಧ್ಯಕ್ಷ ಗುರುಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
