ಧೈರ್ಯದಿಂದ ದೂರು ನೀಡಿ ದೌರ್ಜನ್ಯ ತಡೆಗಟ್ಟಿ

ದಾವಣಗೆರೆ:

      ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ಮುಚ್ಚಿಟ್ಟಷ್ಟು ಮತ್ತಷ್ಟು ದೌರ್ಜನ್ಯ ಹೆಚ್ಚಲಿವೆ. ಆದ್ದರಿಂದ ಶೋಷಿತ ಮಹಿಳೆಯರು ಧೈರ್ಯದಿಂದ ದೂರು ನೀಡಿ, ತಪ್ಪಿತಸ್ಥರಲ್ಲಿ ನಡುಕ ಹುಟ್ಟಿಸಿ ದೌರ್ಜನ್ಯ ತಡೆಯಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್ ಕರೆ ನೀಡಿದರು.

      ನಗರದ ಎ.ವಿ.ಕಮಲಮ್ಮ ಮಹಿಳಾ ಕಾಲೇಜಿನ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಎ.ವಿ.ಕಮಲಮ್ಮ ಮಹಿಳಾ ಕಾಲೇಜು ಸಹಯೋಗದಲ್ಲಿ ಏರ್ಪಡಿಸಿದ್ದ ‘ಮಹಿಳಾ ಸುರಕ್ಷತೆ ಹಾಗೂ ಮಾದಕ ದ್ರವ್ಯ ದುಷ್ಪರಿಣಾಮಗಳ” ಕುರಿತ ಕಾನೂನು ಅರಿವು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

       ಮಹಿಳೆಯರ ರಕ್ಷಣೆಗಾಗಿ ಹಲವು ಕಾನೂನುಗಳಿದ್ದರೂ ಪ್ರಸ್ತುತ ದಿನಗಳಲ್ಲಿ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿವೆ. ಹೀಗಾಗಿ, ಮಹಿಳೆಯರು ತಮ್ಮ ರಕ್ಷಣೆಗಾಗಿ ಇರುವ ಕಾನೂನುಗಳನ್ನು ತಿಳಿದುಕೊಂಡು ದೌರ್ಜನ್ಯದ ವಿರುದ್ಧ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಅರಿತು ದೌರ್ಜನ್ಯಕ್ಕೊಳಗಾದ ಮಹಿಳೆಯರು ದೂರು ನೀಡಿ, ದೌರ್ಜನ್ಯ ತಡೆಯಲು ಮುಂದಾಗಬೇಕೆಂದು ಕಿವಿಮಾತು ಹೇಳಿದರು.

      ಮಹಿಳಾ ದೌರ್ಜನ್ಯಗಳ ವಿರುದ್ಧ ದೂರು ನೀಡುವಲ್ಲಿ ಮಹಿಳೆಯರು ಯಾವುದೇ ಕಾರಣಕ್ಕೂ ಹಿಂಜರಿಯಬಾರದು. ಶೋಷಿತ ಮಹಿಳೆಯರ ಹೆಸರು, ವಿಳಾಸ ಅವರ ಕುಟುಂಬದವರ ಗುರುತನ್ನು ಗೌಪ್ಯವಾಗಿಡಲಾಗುವುದು. ಆದ್ದರಿಂದ ಧೈರ್ಯವಾಗಿ ತಪ್ಪಿತಸ್ಥರ ವಿರುದ್ಧ ದೂರು ನೀಡಿದಲ್ಲಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿ ಪಡಿಉಸಲಾಗುವುದು ಎಂದು ಹೇಳಿದರು.

      ಕಳೆದ ಎರಡು ತಿಂಗಳಿಂದ ಪೊಲೀಸ್ ಇಲಾಖೆಯ ವತಿಯಿಂದ ಸಮಾಜಸ್ನೇಹಿ ಮೊಬೈಲ್ ಆ್ಯಪ್, ಮಾದಕ ದ್ರವ್ಯ ದುಷ್ಪರಿಣಾಮ ಸೇರಿದಂತೆ ವಿವಿಧ ಕಾನೂನು ಅರಿವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಪೊಲೀಸ್ ಇಲಾಖೆ ಬಿಡುಗಡೆಗೊಳಿಸಿರುವ ಕೆಎಸ್‍ಪಿ ಮೊಬೈಲ್ ಆ್ಯಪ್‍ನ್ನು ವಿದ್ಯಾರ್ಥಿನಿಯರು, ಮಹಿಳೆಯರು ಡೌನ್‍ಲೋಡ್ ಮಾಡಿಕೊಂಡು ದೌರ್ಜನ್ಯಕ್ಕೊಳಗಾದ ಸಂದರ್ಭದಲ್ಲಿ ಯಾರನ್ನು ಸಂಪರ್ಕಿಸಬಹುದು, ಅಹವಾಲು ಸಲ್ಲಿಸುವ, ಸಂಪರ್ಕಿಸಬಹುದಾದ ಠಾಣೆಗಳ ಸಂಖ್ಯೆಗಳು ಸೇರಿದಂತೆ ಮಹಿಳಾ ಸುರಕ್ಷತೆಯ ಮಾಹಿತಿ ಇದೆ. ಹೀಗಾಗಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

      ಇಂದಿನ ಯುವ ಪೀಳಿಗೆ ಅತಿ ಬೇಗನೆ ಹಲವಾರು ರೀತಿಯ ಮಾದಕ ದ್ರವ್ಯಗಳಿಗೆ ಬಲಿಯಾಗುತ್ತಿದ್ದು, ಮಾದಕ ದ್ರವ್ಯ ದುಷ್ಪರಿಣಾಮಗಳು ಹಲವಾರು ಇವೆ. ಇಂತಹವು ಡ್ರಗ್ಸ್ ಎಂಬುದು ಕಂಡುಹಿಡಿಯದ ರೀತಿಯಲ್ಲಿ ಇಂದಿನ ಡ್ರಗ್ಸ್‍ಗಳಿವೆ. ಧೂಮಪಾನ ಮಾದಕ ವ್ಯಸನದ ಪ್ರಾಥಮಿಕ ಹಂತವಾಗಿದ್ದು, ನಂತರ ಇವರು ಗಾಂಜಾ, ಬ್ರೌನ್‍ಶುಗರ್, ಹೆರಾಯಿನ್‍ಗಳ ಬಳಕೆಗೆ ಮುಂದಾಗುತ್ತಾರೆ. ಇಂತಹ ಡ್ರಗ್ಸ್ ಬಳಸುವುದು ಮತ್ತು ಮಾರಾಟ ಮಾಡುವುದು ಎರಡೂ ಶಿಕ್ಷಾರ್ಹ ಅಪರಾಧ. ಸುಲಭವಾಗಿ ಹಾದಿ ತಪ್ಪಬಹುದಾದ ಇಂದಿನ ಯುಗದಲ್ಲಿ ಹಾದಿ ತಪ್ಪದ ಹಾಗೆ ಮಕ್ಕಳನ್ನು, ಯುವಜನತೆಯನ್ನು ತಡೆಯುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.

         ಸಂಚಾರ ನಿಯಮಗಳ ಕುರಿತು ಹೆಚ್ಚಿನ ಅರಿವು ಮೂಡಬೇಕಿದೆ. ಭಾರತ ದೇಶದಲ್ಲಿ ಗಂಟೆಗೆ 17 ಜನರು ಅಪಘಾತದಿಂದ ಸಾವನ್ನಪ್ಪುತ್ತಿದ್ದಾರೆ. ದಿನ ಒಂದಕ್ಕೆ ಸುಮಾರು ಒಂದು ಸಾವಿರ ಜನ ರಸ್ತೆ ಅಪಘಾತದಿಂದ ಅಂಗವಿಕಲರಾಗುತ್ತಿದ್ದಾರೆ. ಇದನ್ನು ತಪ್ಪಿಸಬೇಕೆಂದರೆ ನಾವು ನಮ್ಮ ಕುಟುಂಬದ ಹಂತದಿಂದಲೇ ಪ್ರಯತ್ನಿಸಬೇಕು. ದ್ವಿಚಕ್ರ ವಾಹನ ಬಳಸುವವರೆಲ್ಲ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು. ನಿಧಾನವಾಗಿ, ರಸ್ತೆ ನಿಯಮಗಳನ್ನು ಅನುಸರಿಸಿ ವಾಹನ ಚಲಾಯಿಸಿದಲ್ಲಿ ಅಪಘಾತ, ಸಾವು-ನೋವಿನಿಂದ ಪಾರಾಗಬಹುದು ಎಂದ ಅವರು ದಾವಣಗೆರೆ ಸದೃಢ ಮತ್ತು ಶೋಷಣೆಮುಕ್ತ ಜಿಲ್ಲೆಯಾಗಲಿ ಎಂದು ಆಶಿಸಿದರು.

         ಸಿ.ಇ.ಎನ್. ಪೊಲೀಸ್ ಠಾಣೆಯ ಟಿ.ವಿ.ದೇವರಾಜ್, ಮಾದಕ ದ್ರವ್ಯ ವ್ಯಸನ ದುಷ್ಪರಿಣಾಮಗಳ ಕುರಿತು ಪಿಪಿಟಿ ಪ್ರದರ್ಶನ ನೀಡಿ, ವಿಶ್ವದಲ್ಲಿ 20 ಮಿಲಿಯನ್ ಜನ ಮಾದಕ ವ್ಯಸನಿಗಳಿದ್ದಾರೆ. ಪ್ರತಿ ವರ್ಷ ಸುಮಾರು 5.70 ಲಕ್ಷ ಜನ ಇದರಿಂದ ಮರಣ ಹೊಂದುತ್ತಿದ್ದಾರೆ. ನಮ್ಮ ದೇಶದಲ್ಲಿ ಪ್ರತಿ ದಿನ 10 ಜನರು ಈ ವ್ಯಸನದ ಪರಿಣಾಮ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನಾರ್ಕೊಟಿಕ್ ಡ್ರಗ್ಸ್ ಆಂಡ್ ಸೈಕೊಟ್ರಾಪಿಕ್ ಡ್ರಗ್ಸ್ ಆಕ್ಟ್ 1985 ರನ್ವಯ ಸುಮಾರು 238 ಡ್ರಗ್ಸ್‍ಗಳನ್ನು ನಿಷೇಧಿಸಲಾಗಿದೆ. ಕಾಯಿಲೆ ಬಂದಾಗ ತೆಗೆದುಕೊಳ್ಳುವಂತಹ ಮಾತ್ರೆಗಳ ರೀತಿಯಲ್ಲೇ ಇರುತ್ತವೆ.

       ಇವು ನಿಷೇಧಿತ ಡ್ರಗ್ಸ್ ಎಂದು ಕಂಡುಹಿಡಿಯುವುದೇ ಕಷ್ಟವಾಗಿರುತ್ತದೆ. ಗಾಂಜಾ, ಹಶೀಶ್, ಕೊಕೈನ್, ಓಪಿಯಮ್ ಸೇರಿದಂತೆ ವಿವಿಧ ರೀತಿಯ ಡ್ರಗ್ಸ್‍ಗಳನ್ನು ಧೂಮಪಾನ, ಚುಚ್ಚುಮದ್ದು ಮತ್ತು ಮೂಗಿನಿಂದ ತೆಗೆದುಕೊಳ್ಳಲಾಗುತ್ತದೆ. ಈ ಡ್ರಗ್ಸ್‍ಗಳನ್ನು ಡಿಪ್ರೆಸೆಂಟ್ಸ್, ಸ್ಟಿಮುಲೆಂಟ್ಸ್ ಮತ್ತು ಹ್ಯಾಲುಕುನೊಜೆನ್ಸ್ ಎಂಬುದಾಗಿ ವರ್ಗೀಕರಿಸಬಹುದು. ಇವೆಲ್ಲವೂ ಆರೋಗ್ಯಕ್ಕೆ ಅತ್ಯಂತ ಮಾರಕವಾಗಿವೆ ಎಂದರು.

        ಕಾಲೇಜಿನ ಪ್ರಾಂಶುಪಾಲ ಪ್ರೊ.ಪಿ.ಎಸ್.ಶಿವಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ವಿಭಾಗದ ಪೊಲೀಸ್ ವೃತ್ತ ನಿರೀಕ್ಷಕ ಎಂ.ಆನಂದ್, ಪೊಲೀಸ್ ಇನ್ಸ್‍ಪೆಕ್ಟರ್ ನಾಗಮ್ಮ, ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಸಕಿ ಗೌರಮ್ಮ ಉಪಸ್ಥಿತರಿದ್ದರು. ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ತಿಪ್ಪೇಸ್ವಾಮಿ ಸ್ವಾಗತಿಸಿದರು. ವಿದ್ಯಾರ್ಥಿನಿ ಚೈತ್ರ ಸಂಗಡಿಗರು ಪ್ರಾರ್ಥಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap