ಶಿರಾ
ಎಚ್‍ಐವಿ ಸೋಂಕಿತ ಎಂಬ ಮನೋಭಾವ ದೂರ ಮಾಡಿ, ಆತ್ಮವಿಶ್ವಾಸದ ನಡೆಯೊಂದಿಗೆ ಜೀವನಶೈಲಿ ಬದಲಾವಣೆ ಮಾಡಿಕೊಂಡಾಗ ಏಡ್ಸ್‍ರೋಗಿ ನಿರೀಕ್ಷೆಗಿಂತ ಹೆಚ್ಚು ವರ್ಷ ಬದುಕಬಲ್ಲ ಎಂದು ಜಿಲ್ಲಾ ಹೆಚ್ಚುವರಿ ಕ್ಷಯರೋಗ ನಿಯಂತ್ರಣ ಘಟಕದ ವೈದ್ಯಾಧಿಕಾರಿ ಡಾ.ಶೈಲಜಾ ಹೇಳಿದರು.
ಶಿರಾ ತಾಲ್ಲೂಕಿನ ಗೌಡಗೆರೆ ಹೋಬಳಿಯ ಚಂಗಾವರ ಗ್ರಾಮದಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಗ್ರಾಮ ಪಂಚಾಯತಿ ಸಹಯೋಗದೊಂದಿಗೆ ಬುಧವಾರ ನಡೆದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗರ್ಭಿಣಿಯರು ಎಚ್‍ಐವಿ ಬಗ್ಗೆ ಪರೀಕ್ಷೆ ಮಾಡಿಸುವುದು ಕಡ್ಡಾಯವಾಗಿದ್ದು, ಗರ್ಭಿಣಿಯರಿಗೆ ಎಚ್‍ಐವಿ ಸೋಂಕು ಕಂಡು ಬಂದರೆ, ಅಂತಹ ಗರ್ಭಿಣಿಯ ಹೆರಿಗೆ ಶಸ್ತ್ರ ಚಿಕಿತ್ಸೆ ಮೂಲಕ ಆದರೆ ಮಗು ಸುರಕ್ಷತೆಗೆ ಅನುಕೂಲವಾಗಲಿದೆ. ಶೇ.99 ರಷ್ಟು ಎಚ್‍ಐವಿ ಸೊಂಕಿತರು ಪತ್ತೆಯಾಗುತ್ತಿರುವುದು ಅಸುರಕ್ಷಿತ ಲೈಂಗಿಕತೆಯಿಂದ. ಬೇರೆ ದೇಶಗಳಲ್ಲಿ ಲೈಂಗಿಕ ಸುರಕ್ಷತೆ ಬಗ್ಗೆ ಪಠ್ಯಕ್ರಮ ಇದೆ. ನಮ್ಮಲ್ಲಿಯೂ ಕೂಡ ಹೆಣ್ಣು ಮಕ್ಕಳಿಗೆ ಪ್ರೌಢಾವಸ್ಥೆಯಲ್ಲಿ ಪಠ್ಯದ ಮೂಲಕ ಪರಿಣಾಮಕಾರಿಯಾಗಿ ಅರಿವು ಮೂಡಿಸ ಬಹುದೆಂದರು.
ಏಡ್ಸ್ ಬಗ್ಗೆ ವಿಧ್ಯಾರ್ಥಿಗಳಿಂದ ಅರಿವು ಮೂಡಿಸುವ ಜಾಥಾ ಉದ್ಘಾಟಿಸಿ ಮಾತನಾಡಿದ ಸಮಾಜ ಸೇವಕ ಕಲ್ಕೆರೆ ರವಿಕುಮಾರ್, ಎಚ್‍ಐವಿ ಸೋಂಕು ಬಂದ ತಕ್ಷಣ ಸಾವು ಬರುತ್ತದೆ ಎಂಬ ತಪ್ಪು ಕಲ್ಪನೆ ಬೇಡ. ಬದುಕಿನ ಉತ್ಸ್ಸಾಹ, ಆತ್ಮವಿಶ್ವಾಸ ಸೋಂಕಿತರನ್ನು ದೀರ್ಘಕಾಲ ಬಾಳುವಂತೆ ಮಾಡುತ್ತದೆ. ತಿಳಿದಿರುವಂತಹ ವಿದ್ಯಾರ್ಥಿಗಳು ನಾಗರಿಕರಲ್ಲಿ ಹೆಚ್ಚು ಅರಿವು ಮೂಡಿಸುವ ಮೂಲಕ ಏಡ್ಸ್ ತೊಲಗಿಸ ಬೇಕಿದೆ ಎಂದರು.
ವೈದ್ಯಶ್ರೀ ಪ್ರಶಸ್ತಿ ವಿಜೇತ ವೈದ್ಯಾಧಿಕಾರಿ ಡಾ.ತಿಮ್ಮರಾಜು ಮಾತನಾಡಿ, ಶಿರಾ ತಾಲ್ಲೂಕಿನಲ್ಲಿ ಕಳೆದ 2008-18ರವರೆಗೆ 61 ಸಾವಿರ ಜನರಿಗೆ ಎಚ್‍ಐವಿ ಪರೀಕ್ಷೆ ಮಾಡಲಾಗಿದ್ದು, 982 ಜನರಿಗೆ ಸೋಂಕು ಪತ್ತೆಯಾಗಿದೆ. ಇದೇ ಮಾದರಿ 60 ಸಾವಿರ ಗರ್ಭಿಣಿಯರಿಗೆ ಪರೀಕ್ಷೆ ಮಾಡಲಾಗಿದ್ದು 83 ಜನ ಗರ್ಭಿಣಿಯರಲ್ಲಿ ಸೋಂಕು ಪತ್ತೆಯಾಗಿದೆ. ಆರೋಗ್ಯ ಮತ್ತು ಶಿಕ್ಷಣ ಇಲಾಖೆ ಪರಿಣಾಮಕಾರಿಯಾಗಿ ಏಡ್ಸ್ ರೋಗದ ಬಗ್ಗೆ ಅರಿವು ಮೂಡಿಸಿದ ಕಾರಣ, ಸೋಂಕಿತರ ಸ್ಥಾನದಲ್ಲಿ ಜಿಲ್ಲೆಯಲ್ಲಿ 3 ನೆ ಸ್ಥಾನದಲ್ಲಿದ್ದ ಶಿರಾ ಪ್ರಸಕ್ತ ಸಾಲಿನಲ್ಲಿ 5 ನೆ ಸ್ಥಾನಕ್ಕೆ ಇಳಿಕೆ ಕಂಡಿರುವುದು ಜನರಲ್ಲಿ ಜಾಗೃತಿ ಮೂಡಿದೆ ಎಂಬುದನ್ನು ಸಾಕ್ಷೀಕರಿಸುತ್ತದೆ ಎಂದರು.
ಎಪಿಎಂಸಿ ಅಧ್ಯಕ್ಷ ನರಸಿಂಹೇಗೌಡ, ಚಂಗಾವರ ಗ್ರಾಪಂ ಅಧ್ಯಕ್ಷೆ ಪುಟ್ಟರಂಗಮ್ಮ ಕೃಷ್ಣಮೂರ್ತಿ, ಜೆಡಿಎಸ್ ಮುಖಂಡ ಚಂಗಾವರ ಮಾರಣ್ಣ, ವಿಎಸ್‍ಎಸ್‍ಎನ್ ಅಧ್ಯಕ್ಷ ರಾಮಕೃಷ್ಣ, ಗ್ರಾಪಂ ಸದಸ್ಯರಾದ ತಿಮ್ಮಣ್ಣ, ದೊಡ್ಡಣ್ಣ, ಆಪ್ತ ಸಮಾಲೋಚಕಿ ಮಧು, ಶಿಕ್ಷಕ ಸಂತೋಷ್, ಮುಖ್ಯ ಶಿಕ್ಷಕಿ ಭಾಗ್ಯಮ್ಮ, ಗ್ರಾಪಂ ಕಾರ್ಯದರ್ಶಿ ಸೋಮಣ್ಣ, ಆರೋಗ್ಯ ಇಲಾಖೆಯ ಕಿಶೋರ್ ಅಹಮದ್, ತಿಮ್ಮರಾಜು, ನರಸಿಂಹಮೂರ್ತಿ, ಮೈಲಾರಿ, ಮಾಲ ಸೇರಿದಂತೆ ಹಲವಾರು ಮುಖಂಡರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ