ಕೃಷಿ ಸಮ್ಮಾನ್‍ಗೆ ಜಿಲ್ಲೆಯಲ್ಲಿ 57 ಸಾವಿರ ಅರ್ಜಿ
ದಾವಣಗೆರೆ:
ಜಿಲ್ಲೆಯಲ್ಲಿರುವ 2.29 ಲಕ್ಷ ರೈತರ ಪೈಕಿ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಇದುವರೆಗೆ ಕೇವಲ 57 ಸಾವಿರ ಅರ್ಜಿ ಮಾತ್ರ ಸಲ್ಲಿಕೆಯಾಗಿದ್ದು, ಅರ್ಹ ರೈತರಿಗೆ ಯೋಜನೆಯ ಸೌಲಭ್ಯ ಕಲ್ಪಿಸಲು ಸಮರೋಪಾದಿಯಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿವಿಧ ತಾಲ್ಲೂಕುಗಳ ಇಓಗಳು, ತಹಶೀಲ್ದಾರರು ಹಾಗೂ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಸಹಾಯಕ ನಿರ್ದೇಶಕರೊಂದಿಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಶೀಘ್ರ ಅನುಷ್ಟಾನದ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ದೇಶನಗಳನ್ನು ನೀಡಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ವಿಡಿಯೋ ಕಾನ್ಫರೆನ್ಸ್‍ನಲ್ಲಿ ಮಾತನಾಡಿದ ಅವರು, ಪ್ರತಿ ಅರ್ಹ ರೈತರಿಗೆ ಈ ಯೋಜನೆಯನ್ನು ತಲುಪಿಸಲು ಸಮರೋಪಾದಿಯಲ್ಲಿ ನಿಯೋಜಿತ ಅಧಿಕಾರಿಗಳು ಕೆಲಸ ಮಾಡಬೇಕೆಂದು ಸೂಚನೆ ನೀಡಿದರು.
3 ದಿನದಲ್ಲಿ ಗುರಿ ಸಾಧಿಸಿ:
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಜಿಲ್ಲೆಯ ಅರ್ಹ ರೈತರನ್ನು ನೋಂದಾಯಿಸಲು ಜಿಲ್ಲೆಯ ವಿವಿಧ ತಾಲ್ಲೂಕಿನ ಸಂಬಂಧಿಸಿದ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿ, ಇನ್ನು ಮೂರು ದಿನಗಳ ಒಳಗೆ ನಿಗಿದತ ಗುರಿ ಸಾಧಿಸಬೇಕು. ಸಂಬಂಧಿಸಿದ ಅಧಿಕಾರಿಗಳು ಮುಂಬರುವ ಶನಿವಾರ-ಭಾನುವಾರಗಳಂದು ಕೂಡ ಈ ಕೆಲಸ ಮಾಡಬೇಕು. ಅತ್ಯುತ್ತಮ ಕೆಲಸ ನಿರ್ವಹಿಸುವವರಿಗೆ ಜಿಲ್ಲಾಡಳಿತ ವತಿಯಿಂದ ಬಹುಮಾನ ನೀಡಲಾಗುವುದು ಎಂದರು.
ರೈತರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಅನುಷ್ಟಾನಗೊಳಿಸಿರುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಮಹಾತ್ವಾಕಾಂಕ್ಷಿ ಯೋಜನೆಯಾಗಿದ್ದು, ಈ ಮೊದಲು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾತ್ರ ಈ ಯೋಜನೆ ಇದ್ದು ಇದೀಗ ಎಲ್ಲ ಅರ್ಹ ರೈತರಿಗೂ ಈ ಯೋಜನೆ ಅನ್ವಯವಾಗಲಿದೆ ಎಂದರು.
ಯೋಜನೆಗೆ ಕೇಂದ್ರ ಸರ್ಕಾರದಿಂದ ಶೇ.100 ರಷ್ಟು ಅನುದಾನ ಒದಗಿಸಲಿದ್ದು, ಮಾರ್ಗಸೂಚಿಯನ್ವಯ ಈ ಯೋಜನೆಯಡಿ ಭೂ ಒಡೆತನ ಹೊಂದಿರುವ ಪ್ರತಿ ರೈತ ಕುಟುಂಬಕ್ಕೆ ವಾರ್ಷಿಕ ಪ್ರತಿ ನಾಲ್ಕು ತಿಂಗಳಿಗೆ ಒಮ್ಮೆ 2000 ರೂ.ಗಳಂತೆ ಒಟ್ಟು 6000 ರೂ.ಗಳನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು ಎಂದು ಹೇಳಿದರು.
ಡಾಟಾ ಎಂಟ್ರಿ ಮಾಡಿಸಿ:
ಜಿಲ್ಲೆಯ ಎಲ್ಲಾ ಅರ್ಹ ರೈತರಿಂದ ತಾಲ್ಲೂಕುಗಳಲ್ಲಿ ನೇಮಿಸಲಾಗಿರುವ ನೋಡಲ್ ಅಧಿಕಾರಿಗಳು ತಮ್ಮ ಸಿಬ್ಬಂದಿಗಳಾದ ಪಿಡಿಓ, ಗ್ರಾಮ ಲೆಕ್ಕಾಧಿಕಾರಿಗಳು, ಬಿಲ್ ಕಲೆಕ್ಟರ್‍ಗಳು ರೈತರಿಂದ ದೃಢೀಕರಿಸಿದ ಅರ್ಜಿಗಳನ್ನು(ಸೆಲ್ಫ್ ಡಿಕ್ಲರೇಷನ್) ಸಂಗ್ರಹಿಸಿ ಅವುಗಳನ್ನು ಸರ್ಕಾರದಿಂದ ಅಧಿಸೂಚಿಸಿದ ರೈತ ಸಂಪರ್ಕ ಕೇಂದ್ರಗಳು, ಬಾಪೂಜಿ ಸೇವಾ ಕೇಂದ್ರಗಳು, ಅಟಲ್‍ಜಿ ಜನಸ್ನೇಹಿ ಕೇಂದ್ರಗಳು, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ ಅಥವಾ ಇತರೆ ಸರ್ಕಾರಿ ಸೇವಾ ಕೇಂದ್ರ/ಕಚೇರಿಗಳಲ್ಲಿ ಡಾಟಾ ಎಂಟ್ರಿ ಮಾಡಿಸಬೇಕೆಂದು ಸಲಹೆ ನೀಡಿದರು.
ನಿರ್ಲಕ್ಷ್ಯಕ್ಕೆ ಕ್ರಮ:
ಈ ಯೋಜನೆಯ ಕುರಿತಾದ ಯಾವುದೇ ಗೊಂದಲಗಳಿದ್ದರೆ ಅಧಿಕಾರಿ/ಸಿಬ್ಬಂದಿಗಳು ಜಿಲ್ಲಾಡಳಿತದಲ್ಲಿರುವ ತಾಂತ್ರಿಕ ತಂಡವನ್ನು ಸಂಪರ್ಕಿಸಿ ಪರಿಹರಿಸಿಕೊಳ್ಳಬಹುದು. ಇದೊಂದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಇದನ್ನು ಗಂಭೀರವಾಗಿ ಪರಿಣಮಿಸಿ ನಿಯೋಜಿತ ಅಧಿಕಾರಿಗಳು ಕೆಲಸ ಮಾಡಬೇಕು. ಯಾವುದೇ ಅಧಿಕಾರಿ ನಿರ್ಲಕ್ಷ್ಯ ವಹಿಸಿದ್ದಲ್ಲಿ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಉಪ ವಿಭಾಗಾಧಿಕಾರಿ ಕುಮಾರಸ್ವಾಮಿ ಮಾತನಾಡಿ, ಇಓ, ತಹಶೀಲ್ದಾರ್ ಹಾಗೂ ಇತರೆ ಅಧಿಕಾರಿಗಳಿಗೆ ಸೆಲ್ಫ್ ಡಿಕ್ಲರೇಷನ್ ತೆಗೆದುಕೊಳ್ಳುವ ಬಗ್ಗೆ ವಿವರವಾಗಿ ವಿವರಿಸಿದರು.
ವಿಡಿಯೋ ಕಾನ್ಫರೆನ್ಸ್‍ನಲ್ಲಿ ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಜಿ.ಪಂ. ಉಪಕಾರ್ಯದರ್ಶಿ ಭೀಮಾನಾಯ್ಕ, ಈ ಯೋಜನೆಯ ನೋಡಲ್ ಅಧಿಕಾರಿಗಳಾದ ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಭೂಸ್ವಾಧೀನಾಧಿಕಾರಿ ರೇಷ್ಮಾ, ತೋಟಗಾರಿಕೆ ಇಲಾಖೆ ಡಿಡಿ ಲಕ್ಷ್ಮೀಕಾಂತ ಬೊಮ್ಮನ್ನರ್, ಕೃಷಿ ಇಲಾಖೆ ಡಿಡಿ ಹಂಸವೇಣಿ, ತಹಶೀಲ್ದಾರ್ ಸಂತೋಷ್‍ಕುಮಾರ್ ಸೇರಿದಂತೆ ವಿವಿಧ ಅಧಿಕಾರಿಗಳು ಹಾಜರಿದ್ದರು.