ಹುಳಿಯಾರು
ತಾಲ್ಲೂಕಿನಲ್ಲಿ ಅಕಾಲಿಕವಾಗಿ ಸುರಿಯುತ್ತಿರುವ ಮಳೆ ಹಾಗೂ ಇಬ್ಬನಿಯಿಂದ ರಾಗಿ ರಕ್ಷಿಸಿಕೊಳ್ಳಲು ಉಚಿತವಾಗಿ ಟಾರ್ಪಲ್ ವಿತರಿಸುವಂತೆ ರಾಜ್ಯ ರೈತ ಸಂಘದ ಅಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಒತ್ತಾಯಿಸಿದ್ದಾರೆ.
ಹುಳಿಯಾರಿನ ರಾಮಗೋಪಾಲ್ ಸರ್ಕಲ್‍ನಲ್ಲಿನ ರೈತ ಸಂಘದ ಕಚೇರಿಯಲ್ಲಿ ಶುಕ್ರವಾರ ಈ ಸಂಬಂಧ ಪತ್ರಿಕಾಗೋಷ್ಠಿ ನಡೆಸಿದ ಅವರು, ಸತತ ಬರದಿಂದಾಗಿ ತಾಲ್ಲೂಕಿನಲ್ಲಿ ದಶಕಗಳಿಂದಲೂ ಉತ್ತಮ ಮಳೆಯಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಆದರೆ ಈ ವರ್ಷ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿ ರಾಗಿ ಬೆಳೆ ಸಮೃದ್ಧವಾಗಿ ಬೆಳೆದಿದೆ. ರೈತರು ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದು ಹಲವೆಡೆ ಈಗಾಗಲೇ ರಾಗಿ ಕೊಯ್ಲು ಆರಂಭವಾಗಿದೆ.
ದಶಕಗಳ ನಂತರ ರೈತರು ಸಂಭ್ರಮಪಡುವ ಈ ದಿನಗಳಲ್ಲಿ ಜಡಿ ಮಳೆ ಕಾರಣಕ್ಕೆ ಕೈಗೆ ಬಂದ ಬೆಳೆ ಬಾಯಿಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಮುಂಜಾನೆ 9 ಗಂಟೆಯಾದರೂ ಇಬ್ಬನಿ ಬೀಳುತ್ತಿರುವುದು, ಇಡೀ ದಿನ ಮೋಡಮುಸುಕಿನ ವಾತಾವರಣ ಇರುವುದು ರಾಗಿ ಒಕ್ಕಣೆಗೆ ತೊಂದರೆಯಾಗಿದ್ದು, ಕಟಾವು ಮಾಡಿದ ರಾಗಿ ಬೆಳೆಯನ್ನು ದಾಸ್ತಾನು ಮಾಡಲು ಗೋದಾಮುಗಳಿಲ್ಲದೆ ರೈತರು ಪರದಾಡುತ್ತಿದ್ದಾರೆ. ಹೊಲಗಳಲ್ಲೇ ಬಣವೆ ಮಾಡಿ ಸಂಗ್ರಹಿಸುತ್ತಿದ್ದಾರೆ.
ಕೊಯ್ಲು ಮಾಡಿರುವ ರಾಗಿ ಬೆಳೆಯನ್ನು ಮಳೆ ಮತ್ತು ಇಬ್ಬನಿಯಿಂದ ಸಂರಕ್ಷಿಸುವುದು ದೊಡ್ಡ ಸವಾಲಾಗಿದೆ. ಮಳೆ ಮುಂದುವರೆದರೆ ರಾಗಿ ಮೊಳಕೆಯೊಡೆದು ನಷ್ಟವಾಗುತ್ತದೆ. ಮಳೆಯಿಂದಾಗಿ ರೈತರಿಗೆ ದಿಕ್ಕು ತೋಚದಂತಾಗಿದೆ. ಟಾರ್ಪಲ್ ಬೆಲೆ ದುಬಾರಿಯಾಗಿದ್ದು, ರೈತರಿಗೆ ಖರೀದಿ ಮಾಡಲು ಆರ್ಥಿಕವಾಗಿ ಸಮಸ್ಯೆಯಾಗಿದೆ. ಹಾಗಾಗಿ ಕೃಷಿ ಇಲಾಖೆಯಿಂದ ರಾಗಿ ಬೆಳೆಗಾರರಿಗೆ ಉಚಿತವಾಗಿ ಟಾರ್ಪಲ್ ವಿತರಿಸಿ ರೈತರ ಸಂಕಷ್ಟಕ್ಕೆ ನೆರವಾಗಬೇಕಿದೆ ಎಂದಿದ್ದಾರೆ.ಈ ಸಂದರ್ಭದಲ್ಲಿ ರೈತ ಸಂಘದ ಸೋಮಜ್ಜನಪಾಳ್ಯದ ಬೀರಣ್ಣ, ಹುಳಿಯಾರು ಕರಿಯಪ್ಪ, ನೀರ ಈರಣ್ಣ, ಶೇಕ್ ಮಹಬೂನ್ ಅವರುಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ