ತುಮಕೂರು:
ಅಧಿಕಾರಿಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದು ತಾಪಂ ಅಧ್ಯಕ್ಷೆ ಕವಿತಾ ರಮೇಶ್ ತಿಳಿಸಿದರು.
ತುಮಕೂರು ತಾಲೂಕು ಪಂಚಾಯಿತಿಯಲ್ಲಿ ಗುರುವಾರ ಆಡಳಿತಾಧಿಕಾರಿ ಮತ್ತು ಪಿಡಿಒಗಳಿಗೆ ಏರ್ಪಡಿಸಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೊರೋನ ರೋಗ ಇರುವ ಕಾರಣ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಸರಕಾರ ಮುಂದೂಡಿದ್ದು,ಇದೀಗ ಗ್ರಾಮ ಪಂಚಾಯಿತಿಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯುಂಟಾಗಬಾರದು ಎಂಬ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.ಗ್ರಾಮಗಳ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಅಧಿಕಾರಿಗಳು ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು ಎಂಬುದಾಗಿ ಹೇಳಿದರು.
ದೇಶದಾದ್ಯಂತ ಹರಡಿರುವ ಕೊರೋನ ರೋಗದಲ್ಲಿ ಸಾರ್ವಜನಿಕರು ಎದರುವಂತಾಗಿದೆ.ಹಾಗಾಗಿ ಅಧಿಕಾರಿಗಳು ಕೊರೋನ ರೋಗದ ಬಗ್ಗೆ ಅರಿವು ಮೂಡಿಸುವ ಜೊತೆಗೆ ಜಾಗೃತಿಯನ್ನು ಮೂಡಿಸಬೇಕಿದೆ.ಗ್ರಾಮಗಳಲ್ಲಿ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಸ್ಯಾನಿಟೈಜರ್ ಸಿಂಪಡಿಸಬೇಕು,ಸಾರ್ವಜನಿಕರು ಮಾಸ್ಕ್‍ಗಳನ್ನು ಬಳಸಿಕೊಂಡು ಹೊರಗೆ ಸಂಚಾರ ಮಾಡುವಂತೆ ತಿಳಿಸಬೇಕು ಎಂದರು.
ಪಿಡಿಒಗಳು ಸ್ಥಳೀಯ ಸಮಸ್ಯೆಗಳನ್ನು ತಾಲೂಕು ಮಟ್ಟದ ಮೇಲಾಧಿಕಾರಿಗಳ ಗಮನಕ್ಕೆ ತರುವ ಮೂಲಕ ಸಮಸ್ಯೆ ಬಗೆಹರಿಸಲು ಸಹಾಯ ಮಾಡಬೇಕು,ಸಾರ್ವಜನಿಕರು ಕುಡಿಯುವ ನೀರಿಗೆ ಪರದಾಡುವಂತಾಗಬಾರದು,ಗ್ರಾಮಗಳಲ್ಲಿ ಬೀದಿ ದೀಪ,ಸ್ವಚ್ಚತೆ ಬಗ್ಗೆ ಆಧ್ಯತೆ ನೀಡಿ,ಸಮಗ್ರ ಅಭಿವೃದ್ಧಿಗೆ ಸಹಕರಿಸಬೇಕು ಎಂಬುದಾಗಿ ತಿಳಿಸಿದರು.
ನರೇಗಾ ಯೋಜನೆಯಡಿ ನೆಡೆಯುತ್ತಿರುವಂತಹ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ತೊಂದರೆ ಆಗಬಾರದು ಮತ್ತು ಗ್ರಾಮ ಪಂಚಾಯಿತಿಗೆ ನರೇಗಾ ಯೋಜನೆಯ ಸೌಲಭ್ಯ ಪಡೆಯಲು ಬಂದಾಗ ಇಲಾಖೆ ಹಾಗೂ ಸರಕಾರದಲ್ಲಿ ಲಭ್ಯವಿರುವಂತಹ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಬೇಕು ಎಂದ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪರಿಶೀಲನೆ ನೆಡೆಸಿದರು.ಇದೇ ವೇಳೆಯಲ್ಲಿ ತಾಪಂ ಇಒ ಜೈಪಾಲ್ ಗ್ರಾಮಾಂತರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಿದರು.
ತಾಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕ ಶಶೀಧರ್,ಹಣಕಾಸು ಅಧಿಕಾರಿ ಆಧಿಲಕ್ಷ್ಮಮ್ಮ ಮುಂತಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








