ಖಾಸಗಿ ವಸತಿ ನಿಲಯಗಳಲ್ಲಿ ಹೆಣ್ಣು ಮಕ್ಕಳ ಸುರಕ್ಷತೆ ಆದ್ಯತೆ ನೀಡಿ : ಡಿಸಿ

ತುಮಕೂರು
 
   ಜಿಲ್ಲೆಯಲ್ಲಿ ನಡೆಯುತ್ತಿರುವ ಖಾಸಗಿ ವಸತಿ/ ವಿದ್ಯಾರ್ಥಿ ನಿಲಯಗಳಲ್ಲಿ 18 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಸುರಕ್ಷತೆ ಒದಗಿಸುವುದು ಆಯಾ ವಸತಿ ನಿಲಯಗಳ ಮುಖ್ಯಸ್ಥರ ಜವಾಬ್ದಾರಿ ಎಂದು ಜಿಲ್ಲಾಧಿಕಾರಿ ಡಾ|| ರಾಕೇಶ್‍ಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡಿದರು. 
   ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ನಡೆದ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ ಪ್ರಗತಿ ಪರಿಶೀಲನಾ  ಸಭೆ ಹಾಗೂ ಮಕ್ಕಳ ರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಖಾಸಗಿ ವಸತಿ ನಿಲಯಗಳಲ್ಲಿ ದಾಖಲಾಗುವ 18ವರ್ಷದೊಳಗಿನ ಮಕ್ಕಳ ಮೇಲೆ ದೌರ್ಜನ್ಯ ನಡೆದಲ್ಲಿ ಆಯಾ ನಿಲಯಗಳ ಮುಖ್ಯಸ್ಥರೇ ನೇರ ಹೊಣೆಗಾರರಾಗಿರುತ್ತಾರೆ ಎಂದು ತಿಳಿಸಿದರಲ್ಲದೆ, ಪೋಕ್ಸೋ ಕಾಯ್ದೆಯಡಿ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದು,  ಸೂಕ್ತ ಸಾಕ್ಷ್ಯಾಧಾರ ಗಳಿಲ್ಲದೆ ಪೋಕ್ಸೋ ಪ್ರಕರಣದಲ್ಲಿ ಭಾಗಿಯಾಗುವ ಆರೋಪಿಗಳು ಖುಲಾಸೆಯಾಗುತ್ತಿದ್ದಾರೆ.  ಈ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ಪ್ರಕರಣದ ತನಿಖೆ ಕೈಗೊಳ್ಳುವಾಗ ಸೂಕ್ತ ಸಾಕ್ಷ್ಯಾಧಾರಗಳನ್ನು ಕಲೆಹಾಕಬೇಕು ಎಂದು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
    ಬಾಲ್ಯ ವಿವಾಹ ಹಾಗೂ ಪೊಕ್ಸೊ ಕಾಯ್ದೆ ಬಗ್ಗೆ ಮಾಹಿತಿ ಫಲಕಗಳನ್ನು ಹಾಗೂ ಸಮಸ್ಯೆ/ದೂರುಗಳಿದ್ದಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಯನ್ನೊಳಗೊಂಡ ಪೋಸ್ಟರ್‍ಗಳನ್ನು ಶಾಲಾ-ಕಾಲೇಜು ಹಾಗೂ ವಿದ್ಯಾರ್ಥಿ ನಿಲಯಗಳ ಸೂಚನಾ ಫಲಕಗಳಲ್ಲಿ ಅಳವಡಿಸಬೇಕು ಎಂದರು.
     ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯು ಕಠಿಣವಾದ ಕಾಯ್ದೆಯಾಗಿದ್ದು, ಇಂತಹ ಪ್ರಕರಣಗಳಲ್ಲಿ ರಾಜಿ ಮಾಡಿಕೊಳ್ಳುವ ಪ್ರಸಂಗವೇ ಇಲ್ಲ. ತಿಪಟೂರು ಗ್ರಾಮಾಂತರದಲ್ಲಿ ಅಪ್ರಾಪ್ತ ಹೆಣ್ಣು ಮಗುವಿನ ಮೇಲೆ ನಡೆದಿರುವ ದೌರ್ಜನ್ಯ ಕುರಿತು ಕೂಡಲೇ ಪೋಷಕರನ್ನು ಸಂಪರ್ಕಿಸಿ ಆರೋಪಿಯ ಮೇಲೆ ದೂರು ದಾಖಲಿಸುವಂತೆ ಪೊಲೀಸ್ ಅಧಿಕಾರಿಗೆ ನಿರ್ದೇಶನ ನೀಡಿದರು. 
     ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್  ಮಾತನಾಡಿ, ವಿಶೇಷ ಪಾಲನಾ ಯೋಜನೆಯಡಿ ಹೆಚ್‍ಐವಿ ಸೋಂಕು ಹೊಂದಿರುವ ಒಟ್ಟು 428 ಮಕ್ಕಳು ಆರ್ಥಿಕ ಸೌಲಭ್ಯ ಪಡೆಯುತ್ತಿದ್ದು, 68 ಮಕ್ಕಳು ಸೋಂಕಿತ ಹಾಗೂ 361 ಬಾಧಿತ ಮಕ್ಕಳಾಗಿರುತ್ತಾರೆ. ಸೋಂಕಿಗೊಳಗಾದ 24 ಮಕ್ಕಳ ತಂದೆಯಂದಿರು, 7 ಮಕ್ಕಳ ತಾಯಂದಿರು ಹಾಗೂ ಒಬ್ಬ ಸೋಂಕಿತ ಬಾಲಕ ಮರಣ ಹೊಂದಿದ್ದು, 67 ಸೋಂಕಿತ ಮಕ್ಕಳು ಹಾಗೂ 386 ಸೋಂಕಿತ ಪೋಷಕರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ 8 ಜನ ಪೋಷಕರು ಚಿಕಿತ್ಸೆಗಾಗಿ ಹೊರ ಜಿಲ್ಲೆಯಲ್ಲಿ ದಾಖಲಾಗಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು. 
     ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದ ಮಕ್ಕಳ ಗ್ರಾಮ ಸಭೆಗಳಲ್ಲಿ ಮಕ್ಕಳು ಮಂಡಿಸಿದ ಬೇಡಿಕೆಗಳ ವಿವರ ಪಡೆದ ಜಿಲ್ಲಾಧಿಕಾರಿಗಳು ನೀರಿನ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ, ಆಟದ ಮೈದಾನ ಸೇರಿದಂತೆ ಮೂಲಭೂತ ಸೌಲಭ್ಯವನ್ನು ಕೂಡಲೇ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೇ ಮಕ್ಕಳ ರಕ್ಷಣೆ ಕುರಿತ ಕಾಯ್ದೆಗಳ ಬಗ್ಗೆ ಮೊದಲು ಅಧಿಕಾರಿಗಳು ತಿಳಿದುಕೊಳ್ಳಬೇಕು ಎಂದು ತಿಳಿಸಿದರು. 
     ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತ ಮಕ್ಕಳಿಗೆ ಹಾಗೂ ಅವರ ಪೋಷಕರಿಗೆ ಆಪ್ತ ಸಮಾಲೋಚಕರಿಂದ ಹಾಗೂ ಲೀಗಲ್ ಕಂ ಪ್ರೋಬೇಷನ್ ಅಧಿಕಾರಿಯವರಿಂದ ಸಮಾಲೋಚನೆ ನಡೆಸಬೇಕು. ಒಂದು ವರ್ಷ ಮೇಲ್ಪಟ್ಟ ಪ್ರಕರಣಗಳಿದ್ದರೆ ಕೂಡಲೇ ಅವುಗಳನ್ನು ಇತ್ಯರ್ಥಗೊಳಿಸುವಂತೆ ಅವರು ಸೂಚಿಸಿದರು.
      ಸರ್ಕಾರದ ಅನುಮತಿ ಪಡೆಯದೆ ಹಾಸ್ಟೆಲ್‍ಗಳನ್ನು ನಡೆಸುತ್ತಿದ್ದರೆ ಅಂತಹವರ ಮಾಹಿತಿ ಪಡೆದು ಕೂಡಲೇ ವರದಿ ನೀಡುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ಸೂಚಿಸಿದರಲ್ಲದೇ ಹೆಣ್ಣು ಮಕ್ಕಳ ರಕ್ಷಣೆ ಕುರಿತು ಅಧಿಕಾರಿಗಳು ಬೇಜಾವ್ದಾರಿ ತೋರಿದರೆ ಅವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಸಭೆಯಲ್ಲಿ ಜಿಲ್ಲಾ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಚಂದ್ರಿಕಾ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ|| ವೀರಭದ್ರಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. 
. 
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link