ಹುಳಿಯಾರು
ಒಪ್ಪಂದದ ಕರಾರಿನಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನವನ್ನು ಜೆಡಿಎಸ್ ಪಕ್ಷದವರು ಬಿಜೆಪಿಯ ಯದವ ಸಮುದಾಯದ ಗುಬ್ಬಿ ತಾಲ್ಲೂಕಿನ ಸದಸ್ಯೆ ಯಶೋಧಮ್ಮ ಅವರಿಗೆ ಹಸ್ತಾಂತರಿಸದೆ ಹೋದರೆ ಲೋಕಸಭಾ ಚುನಾವನೆಯಲ್ಲಿ ಜೆಡಿಎಸ್ ವಿರುದ್ಧ ಮತಪ್ರಚಾರ ಮಾಡಲಾಗುವುದು ಎಂದು ಚಿಕ್ಕನಾಯಕನಹಳ್ಳಿ ತಾಲ್ಲೂಕು ಯಾದವ ಸಂಘದ ಪದಾಧಿಕಾರಿಗಳು ಎಚ್ಚರಿಕೆ ನೀಡಿದರು.ಹುಳಿಯಾರಿನ ಪ್ರವಾಸಿ ಮಂದಿರದಲ್ಲಿ ಈ ಸಂಬಂಧ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಆಕ್ರೋಶವನ್ನು ಹೊರಹಾಕಿದರು.
ಬಿಜೆಪಿಯ ಬಿ.ಸುರೇಶ್ ಗೌಡ, ಜಿ.ಎಸ್.ಬಸವರಾಜು, ಸೊಗಡು ಶಿವಣ್ಣ, ಜೆಡಿಎಸ್ ನ ಬಿ.ಸತ್ಯನಾರಾಯಣ, ಎಂ.ಟಿ.ಕೃಷ್ಣಪ್ಪ, ಡಿ.ನಾಗರಾಜಯ್ಯ ಅವರುಗಳ ಮಧ್ಯಸ್ಥಿಕೆಯಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷಗಾದಿಯ ಅಧಿಕಾರ ಹಂಚಿಕೆಯ ಒಪ್ಪಂದ ಮಾಡಲಾಗಿತ್ತು. ಅದರ ಪ್ರಕಾರ ಅಧಿಕಾರದ ಎರಡೂವರೇ ವರ್ಷ ಜೆಡಿಎಸ್ ನ ಲತಾ ರವಿಕುಮಾರ್, ಉಳಿದ ಅವಧಿ ಬಿಜೆಪಿಯ ಯಶೋಧಮ್ಮ ಅವರಿಗೆ ಎಂದು ನಿಗದಿಪಡಿಸಲಾಗಿತ್ತು. ಆದರೆ ಲತಾ ಅವರು ಹಿಂದುಳಿದ ಕಾಡುಗೊಲ್ಲ ಜನಾಂಗದ ಯಶೋಧಮ್ಮ ಅವರಿಗೆ ಅಧಿಕಾರ ವರ್ಗಾಯಿಸದೆ ಅವಧಿ ಮುಗಿದು 3 ತಿಂಗಳು ಕಳೆದರೂ ಬಿಟ್ಟು ಕೊಡದೆ ಅಧಿಕಾರಕ್ಕೆ ಅಂಟಿಕೊಂಡು ಕುಳಿತಿದ್ದಾರೆ ಎಂದು ಆರೋಪಿಸಿದರು.
ಯಾದವ ಮುಖಂಡ ವೈ.ಕೆ.ರಾಮಯ್ಯ ಮಾತನಾಡಿ ಈ ಹಿಂದೆ ಯಡಿಯೂರಪ್ಪ ಅವರಿಗೂ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವುದಾಗಿ ಹೇಳಿ ವಚನ ಭ್ರಷ್ಠರಾಗಿತ್ತು. ಪರಿಣಾಮ ರಾಜ್ಯದ ಜನ ಜೆಡಿಎಸ್‍ಗೆ ತಕ್ಕ ಪಾಠ ಕಲಿಸಿತ್ತು. ಈಗ ಜಿಪಂನಲ್ಲೂ ಜೆಡಿಎಸ್ ತಮ್ಮ ಚಾಳಿ ಮುಂದುವರಿಸಿದರೆ ಮುಂದಿನ ಚುನಾವಣೆಯಲ್ಲಿ ಮತದಾರರು ಪಾಠ ಕಲಿಸಿಯೇ ತೀರುತ್ತಾರೆ ಎಂದು ಎಚ್ಚರಿಸಿದರಲ್ಲದೆ ಈಗಾಗಲೇ ಜಿಲ್ಲೆಯಲ್ಲಿ ಯಾದವ ಜನಾಂಗ ಜಾಗರೂಕರಾಗಿದ್ದು ಅಧಿಕಾರ ಹಸ್ತಾಂತರಿಸದೇ ಹೋದರೆ ಜ.4 ರಂದು ಜಿಪಂ ಕಚೇರಿ ಮುಂದೆ ನಮ್ಮ ಜನಾಂಗದ ಶಕ್ತಿ ಪ್ರದರ್ಶನ ಮಾಡಲಾಗುವುದು ಎಂದರು.
ರಾಜ್ಯ ಕಾಡುಗೊಲ್ಲ ಯಾದವ ಸಂಘದ ಕಾರ್ಯದರ್ಶಿ ಮಾಗೋಡು ನಾಗರಾಜು ಮಾತನಾಡಿ ಹಿರಿಯ ರಾಜಕೀಯ ಮುತ್ಸದ್ಧಿ ಶಿರಾದ ಶಾಸಕ ಸತ್ಯನಾರಾಯಣ್ ಅವರ ನೇತೃತ್ವದಲ್ಲಿ ಅಧಿಕಾರ ಹಂಚಿಕೆ ಒಪ್ಪಂದವಾಗಿರುವ ಕಾರಣ ವಚನ ಭ್ರಷ್ಠರಾಗುವುದಿಲ್ಲ ಎನ್ನುವ ವಿಶ್ವಸ ನಮ್ಮೆಲ್ಲರಿಗಿತ್ತು. ಆದರೆ ಅವರೂ ಮೌನ ವಹಿಸಿರುವುದು ಅವರ ಹಿರಿತನಕ್ಕೆ ಶೋಭೆ ತರುವಂತದಲ್ಲ. ಹಾಗಾಗಿ ಡಿ.4 ರ ಸಾಮಾನ್ಯ ಸಭೆಯಲ್ಲಿ ರಾಜೀನಾಮೆ ಕೊಡಿಸಿ ಜನಮಾನಸದಲ್ಲಿ ವಿಶ್ವಾಸ, ನಂಬಿಕೆ ಉಳಿಸಿಕೊಳ್ಳಬೇಕಿದೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ತಾಲ್ಲೂಕು ಯಾದವ ಸಂಘದ ಕಾರ್ಯದರ್ಶಿ ಕದುರೇಗೌಡ, ಪದಾಧಿಕಾರಿಗಳಾದ ಬಿ,ಕೆ.ಜಯಣ್ಣ, ರಮೇಶ್, ಗುರುವಾಪುರ ದೇವರಾಜು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ