ದಾವಣಗೆರೆ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಅನರ್ಹ ಶಾಸಕರ ಪರವಾಗಿ ಆಡಿರುವ ಮಾತುಗಳ ಆಡಿಯೊ ಟೇಪ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಮಾಜಿ ಸಚಿವ ಯು.ಟಿ. ಖಾದರ್ ಆಗ್ರಹಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯರು ಸಣ್ಣ, ಪುಟ್ಟ ವಿಚಾರಗಳಿಗೂ ಸಿಬಿಐ ತನಿಖೆಗೆ ಒತ್ತಾಯಿಸುತ್ತಾರೆ. ಈಗ ಅವರದ್ದೆ ಸರ್ಕಾರ ಇದೆ. ಈಗ ಅನರ್ಹ ಶಾಸಕರ ಪರವಾಗಿ ಮಾತನಾಡಿರುವ ಸಿಎಂ ಯಡಿಯೂರಪ್ಪನವ್ನ ಆಡಿಯೊ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದರೆ, ಇದನ್ನು ಮಾಡಿದ್ಯಾರು?, ಅದು ಯಡಿಯೂರಪ್ಪನವರ ಧ್ವನಿಯೇ ಅಥವಾ ಬೇರೆಯವರದಾ ಎಂಬುದು ಗೊತ್ತಾಗಲಿದೆ ಎಂದು ಹೇಳಿದರು.
ನೆರೆ ಪರಿಹಾರದಲ್ಲಿ ವಿಫಲ:
ರಾಜ್ಯ ಸರ್ಕಾರ ನೆರೆ ಸಂತ್ರಸ್ತರಿಗೆ ಸಮಗ್ರ ಪರಿಹಾರ ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಅಲ್ಲದೇ, ನೆರೆ ಸಂತ್ರಸ್ತರಲ್ಲಿ ಆತ್ಮವಿಶ್ವಾಸ, ಧೈರ್ಯ ತುಂಬುವ ಕೆಲಸ ಮಾಡುತ್ತಿಲ್ಲ. ನೆರೆ ಪೀಡಿತರಿಗೆ ಪರಿಹಾರದ ಹಣ ತಲುಪಿಸುತ್ತಿಲ್ಲ. ಎಲ್ಲವೋ ಗೊಂದಲಮಯವಾಗಿದೆ. ಪ್ರಚಾರಕ್ಕಾಗಿ ಕೋಟಿಗಟ್ಟಲೇ ಹಣ ಸುರಿಯುವ ಈ ಸರ್ಕಾರ ನೆರೆ ಸಂತ್ರಸ್ತರಿಗೆ 20 ಸಾವಿರ ರೂ. ನೀಡಲು ಸರ್ಕಾರದ ಬಳಿ ಹಣ ಇಲ್ಲವೇ? ಎಂದು ಪ್ರಶ್ನಿಸಿದರು.
ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರದಿಂದ ಸಮಗ್ರವಾಗಿ ಪರಿಹಾರದ ಅನುದಾನ ತರುವಲ್ಲಿ ರಾಜ್ಯದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಈ ವಿಚಾರವಾಗಿ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಅವಕಾಶ ನೀಡುತ್ತಿಲ್ಲ. ಇದನ್ನೆಲ್ಲಾ ನೋಡಿದರೆ ಈ ಸಂಸದರು, ಅವರ ಪಕ್ಷದ ಮುಖ್ಯಮಂತ್ರಿ ಮತ್ತು ಜನರನ್ನು ಮತ್ತಷ್ಟು ಸಂಕಷ್ಟದಲ್ಲಿ ಸಿಲುಕಲಿ ಎಂಬ ಮನೋಭಾವ ಪ್ರಧಾನಿಯವರದ್ದಾಗಿರಬಹುದು ಎಂದು ಶಂಕಿಸಿದರು.
ಒಪ್ಪಂದದಿಂದ ಮತ್ತಷ್ಟು ಸಂಕಷ್ಟ:
ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಿದರೆ, ದೇಶದ ಜನರು ಸಂಕಷ್ಟದಲ್ಲಿ ಸಿಲುಕುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಈ ಒಪ್ಪಂದವು ಕೇಂದ್ರ ಸರ್ಕಾರದ ಏಕ ಪಕ್ಷೀಯ ನಿರ್ಧಾರವಾಗಿದೆ ಎಂದು ದೂರಿದರು.ಕೇಂದ್ರ ಸರ್ಕಾರದ ಏಕ ಪಕ್ಷೀಯ ನಿರ್ಧಾರಗಳಿಂದ ಜಾರಿಗೆ ತಂದ ಜಿಎಸ್‌ಟಿ, ನೋಟ್ ಬ್ಯಾನ್ ನಂತಹ ಕಾರ್ಯಕ್ರಮಗಳಿಂದ ಜನರು ಸಂಕಷ್ಟಕ್ಕೆ ಈಡಾಗಿದ್ದಾರೆ.
ಆದರೆ, ಈಗ ಮತ್ತೆ ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಿರುವುದು ದೇಶದ ಜನರನ್ನು ಮತಷ್ಟು ಸಂಕಷ್ಟಕ್ಕೆ ತಳ್ಳಲಿದೆ. ಈ ಒಪ್ಪಂದದಿಂದ ಲಾಭ-ನಷ್ಟವೇನು? ಎಂಬುದರ ಬಗ್ಗೆ ಸರ್ಕಾರ ತಜ್ಞರು, ವಿರೋಧ ಪಕ್ಷಗಳೊಂದಿಗೆ ಮಾಡುತ್ತಿಲ್ಲ. 16 ರಾಷ್ಟçಗಳೊಂದಿಗೆ ಒಪ್ಪಂದ ಮಾಡಿಕೊಂಡರೆ ದೇಶದ ಜನರ ಜೀವನೋಪಾಯಕ್ಕೆ ಕೆಲಸ ಮಾಡುವ ಮತ್ತು ಸಣ್ಣ ಉದ್ಯಮಗಳು ಬಂದ್ ಆಗುವ ಪರಿಸ್ಥಿತಿ ಉದ್ಭವವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ವಿದೇಶಿ ಉತ್ಪನ್ನಕ್ಕೆ ಉತ್ತೇಜನ:
ಸ್ವದೇಶಿ ಮಂತ್ರ ಜಪಿಸುವ ಬಿಜೆಪಿ ಮುಖಂಡರು ವಿದೇಶದ ವಸ್ತುಗಳನ್ನು ದೇಶಕ್ಕೆ ತರುವ ಹುನ್ನಾರ ನಡೆಸಿದ್ದಾರೆ. ಆದ್ದರಿಂದ ಕಾಂಗ್ರೆಸ್ ಜನ ಜಾಗೃತಿ ಮೂಡಿಸುವುದರ ಜೊತೆಗೆ ಇನ್ನಾದರೂ ಕೇಂದ್ರ ಸರ್ಕಾರದ ಇಂತಹ ನಿರ್ಧಾರಗಳನ್ನು ಜನರು ವಿರೋಧಿಸಬೇಕು ಎಂಬುದರ ಬಗ್ಗೆ ಅರಿವು ಮೂಡಿಸಲಿದೆ ಎಂದು ಹೇಳಿದರು.
ಕಾಂಗ್ರೆಸ್ ಮತ ನೀಡಿ:
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ದಾವಣಗೆರೆ ನಗರವನ್ನು ಸಾಷಕ್ಟು ಅಭಿವೃದ್ಧಿ ಪಡಿಸಲಾಗಿದೆ. ಇನ್ನೂ ಅಭಿವೃದ್ಧಿ ಆಗಬೇಕಿದೆ. ಹೀಗಾಗಿ, ಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರ ಗದ್ದುಗೆ ಹಿಡಿಯಲು ಜನತೆ ಮತ ನೀಡಬೇಕೆಂದು ಇದೇ ಸಂದರ್ಭದಲ್ಲಿ ಯು.ಟಿ. ಖಾದರ್ ಮನವಿ ಮಾಡಿದರು.
ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ರಾಜ್ಯದಲ್ಲಿ ಎಲ್ಲೋ ಇಲ್ಲದ ರೀತಿಯಲ್ಲಿ ಈ ನಗರವನ್ನು ಅಭಿವೃದ್ಧಿ ಮಾಡಿದ್ದಾರೆ. ಹೀಗಾಗಿ, ಇಂದು ದಾವಣಗೆರೆಯ ಅಭಿವೃದ್ದಿ ಹೊಂದಿದ ನಗರವನ್ನಾಗಿ ನಾವುಗಳು ಕಾಣುತ್ತಿದ್ದೇವೆ. ಮತದಾರರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ದಿನೇಶ್ ಕೆ. ಶೆಟ್ಟಿ, ಎ.ನಾಗರಾಜ್, ಅಯೂಬ್ ಪೈಲ್ವಾನ್, ಮುಜಾಹಿದ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ