ಸೂಕ್ತ ಮಾರ್ಗದರ್ಶನ ನೀಡಿ ಮಕ್ಕಳನ್ನು ಪ್ರೇರೇಪಿಸಿ : ಎಸ್.ಪಿ ಮುದ್ದಹನುಮೇಗೌಡ

ತಿಪಟೂರು

    ಇಂದಿನ ಮಕ್ಕಳು ಪ್ರತಿಭಾವಂತರು, ಎಲ್ಲಾ ಮಕ್ಕಳು ಯಾರಿಗೇನು ಕಡಿಮೆ ಇಲ್ಲ. ಆದರೆ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿದರೆ ಮಹತ್ತರವಾದುದನ್ನು ಸಾಧಿಸುತ್ತಾರೆ. ಅವರಿಗೆ ಪ್ರೇರೇಪಿಸಿ ಎಂದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಶಿಕ್ಷಕರಿಗೆ ಮತ್ತು ಪೋಷಕರಿಗೆ ಕರೆ ನೀಡಿದರು.

      ನಗರದ ಕಲ್ಪತರು ಸೆಂಟ್ರಲ್ ಶಾಲೆಯ ವಾರ್ಷಿಕೋತ್ಸವ “ಕಲ್ಪಮೌಲ್ಯ” ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಮಕ್ಕಳ ಬುದ್ದಿಮಟ್ಟ (ಐಕ್ಯೂ) ಅದ್ಬುತವಾಗಿದ್ದು ಶಿಕ್ಷಕರೂ ಕೂಡ ಅದನ್ನು ತಿಳಿದುಕೊಳ್ಳಲು ಕಷ್ಟವಾಗುತ್ತಿದೆ. ಮಕ್ಕಳು ಮೊದಲು ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸ್ಪರ್ಧೆ ಎದುರಿಸುತ್ತಿದ್ದರು. ಆದರೆ ಈಗ ಆ ಗಡಿ ಕಳಚಿ ಬಿದ್ದಿದ್ದು, ಪ್ರಪಂಚವೇ ಮಕ್ಕಳ ಸ್ಪರ್ಧಾಕ್ಷೇತ್ರವಾಗಿದೆ. ಅದಕ್ಕೆ ಮಕ್ಕಳನ್ನು ಅಣಿ ಮಾಡುವುದರ ಜೊತೆ ಅವರಿಗೆ ಸಂಸ್ಕಾರವನ್ನು ಕಲಿಸುವುದೂ ಕೂಡ ಶಾಲಾ ಮಟ್ಟದಲ್ಲೆ ಆಗಬೇಕಿದೆ. ತಂದೆ-ತಾಯಿ, ಗುರುಹಿರಿಯರಿಗೆ ಗೌರವ ಕೊಡುವುದು ಕೂಡ ಶಿಕ್ಷಣದ ಜೊತೆಯಲ್ಲೇ ತಿಳಿ ಹೇಳಬೇಕಿದೆ. ಇದರಿಂದ ಉತ್ತಮ ನಾಗರೀಕ ಸಮಾಜ ಸೃಷ್ಟಿಯಾಗುತ್ತದೆ. ಶಿಕ್ಷಕರ ಜೊತೆ ಪೋಷಕರೂ ಕೂಡ ಈ ಜವಾಬ್ದಾರಿಯನ್ನು ಹಂಚಿಕೊಂಡಲ್ಲಿ ಉತ್ತಮ ಮಕ್ಕಳು ಹಾಗೂ ಸಮಾಜ ಸೃಷ್ಟಿಯಾಗುವುದರಲ್ಲಿ ಸಂಶಯವಿಲ್ಲ ಎಂದು ತಿಳಿಸಿದರು.

     ದೇಶದಲ್ಲಿ ಶೇ.80ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಹಳ್ಳಿಗಳಲ್ಲೆ ಇವೆ. ಆದರೆ ಸವಲತ್ತುಗಳ ಕೊರತೆಯಿಂದ ಪೋಷಕರು ಮಕ್ಕಳನ್ನು ಉತ್ತಮ ಶಿಕ್ಷಣಕ್ಕಾಗಿ ಹತ್ತಿರದ ಪಟ್ಟಣಗಳಿಗೆ ಸೇರಿಸಲು ಮುಂದಾಗುತ್ತಿದ್ದಾರೆ. ಮಕ್ಕಳ ಶಿಕ್ಷಣಕ್ಕಾಗಿಯೇ ಜನರು ಹಳ್ಳಿಗಳಿಂದ ಸಿಟಿಗಳಿಗೆ ಗುಳೆ ಹೋಗುತ್ತಿದ್ದಾರೆ. ಆದ್ದರಿಂದ ಗ್ರಾಮಾಂತರ ಪ್ರದೇಶದ ಶಾಲೆಗಳಲ್ಲಿ ಸವಲತ್ತುಗಳನ್ನು ಹೆಚ್ಚು ಮಾಡುವುದರ ಜೊತೆ ಶಿಕ್ಷಕರ ಕೊರತೆ ನೀಗಿಸಲು ಸರ್ಕಾರಗಳು ಪ್ರಯತ್ನ ಮಾಡಬೇಕು ಎಂದು ಮಾಜಿ ಸಂಸದರು ತಿಳಿಸಿದರು.

     ಕಲ್ಪತರು ವಿದ್ಯಾಸಂಸ್ಥೆಯ ಅಧ್ಯಕ್ಷ ಪಿ.ಕೆ.ತಿಪ್ಪೇರುದ್ರಪ್ಪ ಮಾತನಾಡಿ, ಶಿಕ್ಷಣ ಕ್ರಾಂತಿಯೊಂದೇ ಸುಸಂಸ್ಕೃತ ಸಮಾಜ ನಿರ್ಮಾಣಕ್ಕಿರುವ ಅಸ್ತ್ರ ಎಂಬ ನಿಲುವಿನೊಂದಿಗೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಜ್ಞಾನದ ದೀವಿಗೆಯಂತೆ ದಾರಿದೀಪವಾಗಿರುವ ಕಲ್ಪತರು ಸೆಂಟ್ರಲ್ ಶಾಲೆ ಉತ್ತಮ ಬೋಧನಾ ವ್ಯವಸ್ಥೆಯೊಂದಿಗೆ ಕಲಿಕೆಯಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದು ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಮಕ್ಕಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಕೇಂದ್ರ ಸರ್ಕಾರದಿಂದ ಅಟಲ್ ಟಿಂಕರಿಂಗ್ ಲ್ಯಾಬ್ ಸಹ ನಮ್ಮ ಶಾಲೆಗೆ ಮಂಜೂರಾಗಿದೆ ಎಂದು ತಿಳಿಸಿದರು.

    ಪ್ರಾಂಶುಪಾಲರಾದ ದೇವಿಕ ಬಿ.ಸ್ವಾಮಿ ಶಾಲೆಯ ವಾರ್ಷಿಕ ವರದಿ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಮಂಗಳಗೌರಮ್ಮ, ಸಂಸ್ಥೆಯ ಕಾರ್ಯದರ್ಶಿ ಕೆ.ಪಿ.ರುದ್ರಮುನಿಸ್ವಾಮಿ ಹಾಗೂ ಖಜಾಂಚಿ ಟಿ.ಎಸ್.ಶಿವಪ್ರಸಾದ್ ಮಾತನಾಡಿದರು. ಉಪಾಧ್ಯಕ್ಷರಾದ ಎಸ್.ಎಸ್. ನಟರಾಜ್, ಕಾರ್ಯದರ್ಶಿ ಟಿ.ಯು.ಜಗದೀಶ್‍ಮೂರ್ತಿ, ಉಪಸ್ಥಿತರಿದ್ದರು. ಶೈಕ್ಷಣಿಕ, ಕ್ರೀಡಾ ಕ್ಷೇತ್ರ ಹಾಗೂ ಇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ನಂತರ ಸಾಮಾಜಿಕ ಕಳಕಳಿ ಉಳ್ಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶಾಲೆಯ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link