ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಲು ಕ್ರಮ

ಹಿರಿಯೂರು

     ಶಾಲಾ ಮಕ್ಕಳ ಬ್ಯಾಗ್ ಭಾರವನ್ನು ಕಡಿಮೆಗೊಳಿಸಿ, ಚಟುವಟಿಕೆ, ಗುಣಾತ್ಮಕ ಹಾಗೂ ಮೌಲ್ಯಾಧಾರಿತ ಶಿಕ್ಷಣ ನೀಡಲು ಕ್ರಮವಹಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ, ಸಕಾಲ ಹಾಗೂ ಕಾರ್ಮಿಕ ಸಚಿವರಾದ ಎಸ್.ಸುರೇಶ್‍ಕುಮಾರ್ ಹೇಳಿದರು.

     ಹಿರಿಯೂರು ತಾಲ್ಲೂಕಿನ ಹೊಸಯಳನಾಡು ಗ್ರಾಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ 12 ಕೊಠಡಿಗಳು ಮತ್ತು 06 ಶೌಚಾಲಯಗಳ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನಾ ನೆರವೇರಿಸಿ ಮಾತನಾಡಿದರು.ಶಾಲಾ ಮಕ್ಕಳು ಹೆಚ್ಚಿನ ಭಾರವುಳ್ಳ ಬ್ಯಾಗ್‍ಗಳನ್ನು ಪ್ರತಿನಿತ್ಯ ಕೊಂಡೊಯ್ಯುವುದರಿಂದ ಅವರಿಗೆ ದೈಹಿಕವಾಗಿ ಬಳಲುವರು ಕಲಿಕೆಯಲ್ಲಿ ಆಸಕ್ತಿ ತೋರುವುದು ಕಷ್ಟಕರವಾಗುತ್ತದೆ. ಇದರಿಂದಾಗಿ ಅವರು ಶಿಕ್ಷಣದಲ್ಲಿ ಯಶಸ್ಸು ಸಾಧಿಸದಿರುವುದು ಸಹ ಪ್ರಮುಖ ಕಾರಣವಾಗಿದೆ.

     ಮುಂಬರುವ ಶೈಕ್ಷಣಿಕ ವರ್ಷದಿಂದ ವಾರಕ್ಕೆ ಎರಡು ದಿನ ಸಂಪೂರ್ಣ ಬ್ಯಾಗ್ ರಹಿತ ದಿನವನ್ನಾಗಿ ಮಾಡಿ, ಚಟುವಟಿಕೆಯುಕ್ತ ಕಲಿಕೆಗೆ ಒತ್ತು ನೀಡುವುದರ ಮೂಲಕ ಗುಣಾತ್ಮಕ ಹಾಗೂ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಮೌಲ್ಯಗಳನ್ನು ಕಲಿಸಲು ಕ್ರಮವಹಿಸಲಾಗುವುದು ಎಂದು ಹೇಳಿದರು

      ಶಿಕ್ಷಣಕ್ಕೆ ಪ್ರಮುಖ್ಯತೆ ನೀಡುವ ಸಮಾಜ ಹಾಗೂ ಸರ್ಕಾರಗಳು ಅಭಿವೃದ್ಧಿಯತ್ತ ಸಾಗಲು ಭದ್ರ ಬುನಾದಿ ಹಾಕಿದಂತೆಯೇ ಸರಿ. ಪ್ರಸ್ತುತ ಶಿಕ್ಷಣ ವ್ಯವಸ್ಥೆಯು ಮಾರಾಟ ಸಂಸ್ಥೆಗಳಾಗಿ ಮಾರ್ಪಾಡು ಹೊಂದುತ್ತಿವೆ. ಮಕ್ಕಳಿಗೆ ನೈತಿಕ ಶಿಕ್ಷಣ ನೀಡದೆ ಕೇವಲ ಅಂಕಗಳಿಕೆಗಾಗಿ ಶಿಕ್ಷಣ ನೀಡುವ ಪದ್ದತಿ ರೂಢಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

        ಮಕ್ಕಳಲ್ಲಿ ಪರೀಕ್ಷೆಯ ಭಯ ಹೋಗಲಾಡಿಸುವ ಹಾಗೂ ಆತ್ಮಸ್ಥೈರ್ಯ ತುಂಬುವಂತಾಗಬೇಕು. ಪರೀಕ್ಷೆಯನ್ನು ನಿರ್ಭಯವಾಗಿ ಎದುರಿಸಲು ವಿವಿಧ ಕಾರ್ಯಕ್ರಮ, ಪ್ರಯೋಗಗಳನ್ನು ಶಾಲಾ ಶಿಕ್ಷಕರು ಹಮ್ಮಿಕೊಂಡು, ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡಬೇಕು.

      ಸಾರ್ವಜನಿಕರು ದೇಶಭಕ್ತಿಯನ್ನು ಕೇವಲ ಆಗಷ್ಟ್ 15 ರಂದು ತೋರಿಸದೇ ತಮ್ಮ ಹಳ್ಳಿ, ಶಾಲೆ ಹಾಗೂ ಸುತ್ತಮುತ್ತಲಿನ ಜನರ ಏಳಿಗೆಯೇ ನಮ್ಮ ಏಳಿಗೆ ಅಂದುಕೊಂಡಾಗ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ರಾಜ್ಯದಲ್ಲಿ ನೆರೆ ಹಾವಳಿಯಿಂದಾಗಿ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಸಾಕಷ್ಟು ಹಾನಿಯಾಗಿದೆ. ಜೊತೆಗೆ ಶಾಲಾ ಕಟ್ಟಡಗಳು ನೀರಿನಲ್ಲಿ ಮುಳುಗಿ ಮತ್ತು ಕೊಚ್ಚಿ ಹೋಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಅಲ್ಲಿನ ಮಕ್ಕಳ ಬ್ಯಾಗ್, ಪುಸ್ತಕಗಳಿಲ್ಲದೆ ಶೈಕ್ಷಣಿಕವಾಗಿ ಕಲಿಯಲು ಸಾಧ್ಯವಾಗುತ್ತಿಲ್ಲ. ಆ ಭಾಗದ ಮಕ್ಕಳಿಗೆ 12 ಲಕ್ಷ ಪುಸ್ತಕಗಳನ್ನು ಈಗಾಗಲೇ ವಿತರಿಸಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು.

      ಶಾಸಕಿ ಪೂರ್ಣಿಮ ಶ್ರೀನಿವಾಸ್ ಮಾತನಾಡಿ, ರಾಜ್ಯದ ಬಹುತೇಕ ಗ್ರಾಮಗಳಲ್ಲಿ ಹಳೆಯ ಶಾಲಾ ಕಟ್ಟಡಗಳು ದುರಸ್ಥಿಯ ಹಂತದಲ್ಲಿವೆ. ಮಕ್ಕಳು ಭಯದಿಂದಲೆ ಕಲಿಕೆಯಲ್ಲಿ ತೊಡಗುತ್ತಿದ್ದಾರೆ. ಅಂತಹ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ಗುರುತಿಸಿ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕೆಂದು ಸಚಿವ ಸುರೇಶ್ ಕುಮಾರ್‍ಗೆ ಮನವಿ ಮಾಡಿದರು.

        ಶಾಲಾ ಕಾಲೇಜುಗಳಿಗೆ ಸರ್ಕಾರ ಅನುದಾನ ಕೊಡುವುದು ಮುಖ್ಯವಲ್ಲ. ಅದನ್ನು ಸಮರ್ಪಕವಾಗಿ ನಿರ್ವಹಿಸುವ ಗುಣಗಳು ಗ್ರಾಮಸ್ಥರು, ಶಾಲಾ ಶಿಕ್ಷಕರಲ್ಲಿ ಬರಬೇಕು. ಗ್ರಾಮೀಣ ಭಾಗದ ಮಕ್ಕಳು ನಗರ ಪ್ರದೇಶ ಮಕ್ಕಳಿಗಿಂತ ಕಡಿಮೆಯಲ್ಲ, ಕಲಿಕೆಗೆ ಪೂರಕ ವಾತಾವರಣವನ್ನು ಪೋಷಕರು ಶಿಕ್ಷಕರು ಕಲ್ಪಿಸಬೇಕು. ಜೀವನದಲ್ಲಿ ಉತ್ತಮ ಸ್ಥಾನಕ್ಕೆ ಹೋಗಬೇಕಾದರೆ ಕೇವಲ ಅಂಕಗಳಿಕೆ ಮುಖ್ಯವಲ್ಲ, ಶಾಲಾ ದಿನಗಳಲ್ಲಿ ಕಲಿಯುವ ನೈತಿಕ, ಗುಣಾತ್ಮಕ ಹಾಗೂ ಮೌಲ್ಯವುಳ್ಳ ಶಿಕ್ಷಣ ಪ್ರಮುಖವಾಗುತ್ತದೆ. ವಿದ್ಯಾರ್ಥಿಗಳು ಈ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವತ್ತ ಸಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

       ಕಾರ್ಯಕ್ರಮದಲ್ಲಿ ಸಂಸದರಾದ ಎ.ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ, ಹೊಸಯಳನಾಡು ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಎಂ. ಮೀನಾಕ್ಷಿ, ತಹಶೀಲ್ದಾರ್ ಸತ್ಯನಾರಾಯಣ, ಡಿಡಿಪಿಐ ರವಿಶಂಕರರೆಡ್ಡಿ ಸೇರಿದಂತೆ ಗ್ರಾಮಸ್ಥರು, ಶಾಲಾ ಮಕ್ಕಳು, ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap