ಹರಪನಹಳ್ಳಿ:
ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕೂಲಿಕಾರರಿಗೆ ಕೂಲಿ ಹಣ ನೀಡಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ಬಳಿಗನೂರು ಕೂಲಿಕಾರ್ಮಿಕರು ಹಾಗೂ ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ನೇತೃತ್ವದಲ್ಲಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
`ಮುಂಗಾರು ಮಳೆ ಬಾರದೆ ಬೆಳೆ ಸಂಪೂರ್ಣ ನಷ್ಟ ಸಂಭವಿಸಿ ತಾಲ್ಲೂಕಿನ ಬಳಿಗನೂರು ರೈತರು ಕಂಗಾಲಾಗಿದ್ದಾರೆ. ನರೇಗಾ ಯೋಜೆನೆಯಡಿ ಗ್ರಾಮದ ಕೂಲಿ ಕಾರ್ಮಿಕರಿಗೆ ಪಿಡಿಒ ಹಾಗೂ ಇಂಜಿನಿಯರ್ಗಳು ಗಟ್ಟಿಯಾದ ಸ್ಥಳದಲ್ಲಿ ಎನ್‍ಆರ್‍ಇಜಿ ಅಳತೆಗಿಂತ 7 ಅಡಿ ಅಗಲ, 7 ಅಡಿ ಉದ್ದ, 2 ಅಡಿ ಆಳ ಒಬ್ಬರಿಂದ ತೆಗೆಯಲಿಕ್ಕೆ ಕೊಟ್ಟಿದ್ದಾರೆ. ಇದನ್ನು ನಿರ್ವಹಿಸಿದರೂ ಸರಿಯಾಗಿ ಕೂಲಿ ಹಣ ನೀಡದೇ ಅಧಿಕಾರಿಗಳು ಸತಾಯಿಸುತ್ತಿದ್ದಾರೆ’ ಎಂದು ಆರೋಪಿಸಿದರು.
ನರೇಗಾದಲ್ಲಿ ದಿನಕ್ಕೆ 249 ಕೂಲಿ ನೀಡಬೇಕು. ಆದರೆ `ಕಡಿಮೆ ಕೆಲಸ ಮಾಡಿದ್ದೀರಿ’ ಎಂದು ನೆಪ ಹೇಳಿ ಅವರ ಖಾತೆಗೆ 100 ಜಮಾ ಮಾಡಿದ್ದಾರೆ. ಅಲ್ಲದೇ `20 ದಿನ ಮಾತ್ರ ಕೆಲಸ ನೀಡಿ ಮುಂದೆ ಕೆಲಸಕ್ಕೆ ಬರುವುದ ಬೇಡ’ ಎಂದು ಹೇಳುತ್ತಿರುವುದು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ದೂರಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಲ್ಲೂಕು ಪಂಚಾಯಿತಿ ಇಒ ಮಮತಾ ಹೊಸಗೌಡರ, ಕೂಲಿಕಾರರ ಸಮಸ್ಯೆ ಆಲಿಸಿದ ಅವರು, `ಕೂಲಿ ಪಾವತಿಗೆ ಕ್ರಮ ಕೈಗೊಳ್ಳುತ್ತೇನೆ’ ಎಂದು ಹೇಳಿದರು. ಇಷ್ಟಕ್ಕೆ ಸುಮ್ಮನಾಗದ ಪ್ರತಿಭಟನಾಕಾರರು `ಪಿಡಿಒ, ಇಂಜಿನಿಯರ್ ಅವರನ್ನು ಸ್ಥಳಕ್ಕೆ ಕರೆಯಿಸಬೇಕು. ನಮಗೆ ನಿರಂತರ ಕೆಲಸ ಕೊಡಬೇಕು ಮತ್ತು ಸ್ಥಳದಲ್ಲಿ ಮೂಲ ಸೌಲಭ್ಯ ಕಲ್ಪಿಸಬೇಕು. ದುಡಿಮೆ ತಕ್ಕ ಕೂಲಿ ನೀಡಬೇಕು’ ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಎಐಕೆಎಸ್ ಅಧ್ಯಕ್ಷ ಗುಡಿಹಳ್ಳಿ ಹಾಲೇಶ್, ಎಐಕೆಎಸ್ ಮುಖಂಡ ಕೊಟ್ರೇಶ್, ಚಿದಾನಂದಯ್ಯ, ಬಿ.ಅಡಿವೆಪ್ಪ, ಎಚ್.ಎಂ.ವೀರಭದ್ರಯ್ಯ, ದ್ವಾರಕೇಶ್, ನಾಗಪ್ಪ, ಬಿ.ಬಸವರಾಜ, ಸಿದ್ದಪ್ಪ, ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ