ರೈತರಿಗೆ ಸರ್ಕಾರಿ ಯೋಜನೆಗಳ ಮಾಹಿತಿ ಕೊಡಬೇಕು

ಚಿತ್ರದುರ್ಗ:

     ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ ಇಲಾಖೆಯವರು ನಿರಂತರವಾಗಿ ರೈತರೊಂದಿಗೆ ಸಂಪರ್ಕ ಹೊಂದಿ, ಗ್ರಾಮಸಭೆಗಳಲ್ಲಿ ಭಾಗಿಯಾಗಿ ಅವರಿಗೆ ಸರ್ಕಾರದಿಂದ ಸಿಗಬಹುದಾದ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಸಂಸದ ಎ. ನಾರಾಯಣಸ್ವಾಮಿ ಹೇಳಿದರು.

     ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ಕೇಂದ್ರ ಪುರಸ್ಕøತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚಿತ್ರದುರ್ಗದ ಜಿಲ್ಲೆಯಲ್ಲಿ ಹೆಚ್ಚಾಗಿ ಕೃಷಿ ಅವಲಂಬಿತರಿದ್ದಾರೆ. ಸರ್ಕಾರ ರೈತರ ಅಭಿವೃದ್ಧಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಕೃಷಿ, ತೋಟಗಾರಿಕೆ, ಅರಣ್ಯ ಮತ್ತು ರೇಷ್ಮೆ ಇಲಾಖೆ ಅಧಿಕಾರಿಗಳು ನಿರಂತರ ಗ್ರಾಮಸಭೆಗಳಲ್ಲಿ ಪಾಲ್ಗೊಂಡು ರೈತಪರ ಯೋಜನೆಗಳು, ಅವುಗಳ ಬಳಕೆ ಬಗ್ಗೆ ಮಾಹಿತಿ ತಿಳಿಸಿ, ಯೋಜನೆಗಳು ಸದ್ಭಳಕೆ ಆಗುವಂತೆ ಗಮನಹರಿಸಬೇಕು, ಆಗ ಸರ್ಕಾರದ ಯೋಜನೆಗಳ ಸಫಲತೆ ಕಂಡು ಅಭಿವೃದ್ಧಿಯತ್ತ ಸಾಗಬಹುದು ಎಂದು ಅಧಿಕಾರಿಗಳಿಗೆ ಹೇಳಿದರು.

      ಕೇಂದ್ರ ಸರ್ಕಾರದ ಮಣ್ಣು ಆರೋಗ್ಯ ಅಭಿಯಾನದಡಿ ಮಣ್ಣಿನ ಕಾರ್ಡ್ ವಿತರಿಸಬೇಕು. ‘ನರೇಗಾ’ ಯೋಜನೆಯಡಿ ಬದು ನಿರ್ಮಾಣದಂತಹ 260 ಕಾರ್ಯಗಳನ್ನು ಕೈಗೊಳ್ಳಬೇಕು. ಗಂಗಾ ಕಲ್ಯಾಣ ಯೋಜನೆಯ ಉದ್ದೇಶ, ಅದರ ಕಾರ್ಯವೈಖರಿ ಬಗ್ಗೆ ಇಲಾಖಾ ಅಧಿಕಾರಿ ನಿಗಾವಹಿಸಬೇಕು. ಹಿರಿಯೂರು ತಾಲ್ಲೂಕಿನ ಮರಡಿಹಳ್ಳಿಯ ರೈತರು ಫಸಲ್ ವಿಮಾ ಯೋಜನೆಯಡಿ ಸಹಾಯಧನವಿಲ್ಲದೆ ಪರದಾಡುವಂತಾಗಿದೆ.

      ಇದೇ ನವೆಂಬರ್ ಅಂತ್ಯದೊಳಗೆ ಈ ಕಾರ್ಯ ಶೀಘ್ರಗತಿಯಲ್ಲಿ ನಡೆಯಬೇಕು ಎಂದು ಸೂಚಿಸಿದರು ತೋಟಗಾರಿಕೆ ಇಲಾಖೆಯಲ್ಲಿ ನರೇಗಾ ಯೋಜನೆಯಡಿ ಉತ್ತಮ ಸಾಧನೆ ಮಾಡಿ, ರಾಜ್ಯದಲ್ಲಿ 2 ನೇ ಸ್ಥಾನ ಅಲಂಕರಿಸಿದಕ್ಕಾಗಿ ಸಂತಸ ವ್ಯಕ್ತಪಡಿಸಿದರು. ವಸತಿ ನಿಲಯದಲ್ಲಿರುವ ವಿದ್ಯಾರ್ಥಿಗಳಿಗೆ ಬಿಸಿನೀರು ಸೇರಿದಂತೆ ಮೂಲಭೂತ ಸೌಕರ್ಯಗಳು ಮತ್ತು ಗುಣಮಟ್ಟದ ಆಹಾರ ಒದಗಿಸಬೇಕು. ವಸತಿ ನಿಲಯಗಳಲ್ಲಿ ಮಕ್ಕಳಿಗೆ ಮೈದಾನ ನಿರ್ಮಿಸಿ, ಒಳಾಂಗಣ ಹಾಗೂ ಹೊರಾಂಗಣ ಕ್ರೀಡೆಗಳಿಗೆ ಅನುವಾಗುವಂತೆ ಕ್ರೀಡಾ ಸಾಮಗ್ರಿಗಳನ್ನು ನೀಡಬೇಕು ಎಂದು ಸಂಸದ ಎ. ನಾರಾಯಣಸ್ವಾಮಿ ಅವರು ಕಲ್ಯಾಣ ಅಧಿಕಾರಿಗಳಿಗೆ ಹೇಳಿದರು.

    ಕಳೆದ ಸಭೆಯಲ್ಲಿ ಹೋಬಳಿಗೆ 2 ಆದರ್ಶ ಶಾಲೆಗಳು, ಹಾಗೂ ಶಾಲಾ ಕೊಠಡಿ ದುರಸ್ತಿಯ ಬಗ್ಗೆ ಮಾಹಿತಿ ನೀಡಬೇಕೆಂದು ಚರ್ಚಿಸಲಾಗಿತ್ತು. ಅದರಂತೆ 6 ತಾಲ್ಲೂಕಿನ ಶಾಲಾ ಕೊಠಡಿ ಮತ್ತು ಹೊಸ ಶಾಲೆ ನಿರ್ಮಾಣದ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗಿದೆ. ಅಧಿಕಾರಿಗಳು ಉತ್ತಮ ಶಾಲೆ ನಿರ್ಮಿಸಲು ಬೇಕಾಗುವ ವೆಚ್ಚದ ನೀಲ ನಕ್ಷೆ ತಯಾರು ಮಾಡಿ, ಜಿಲ್ಲಾಧಿಕಾರಿಗಳ ಕಚೇರಿಗೆ ಶೀಘ್ರವೇ ರವಾನಿಸುವಂತೆ ತಿಳಿಸಿದರು.

      ಶಾಸಕ ಟಿ. ರಘುಮೂರ್ತಿ ಅವರು ಶುದ್ಧ ಕುಡಿಯುವ ನೀರಿನ ಘಟಕದ ಕಾರ್ಯ ವಿಳಂಬವಾಗುತ್ತಿದೆ. ದುರಸ್ಥಿ ಕಾರ್ಯ ನಿರ್ವಹಿಸಲು, ಸೂಕ್ತವಾದವರಿಗೆ ಜವಬ್ದಾರಿ ನೀಡಬೇಕು. ಶುದ್ಧ ನೀರಿನ ಘಟಕದ ಬಗ್ಗೆ ಕೆ.ಆರ್.ಐ.ಡಿ.ಎಲ್ ಅವರು ಸಂಪೂರ್ಣ ಮಾಹಿತಿ ನೀಡಬೇಕು. ಕೊಳವೆಬಾವಿಯಲ್ಲಿನ ಫ್ಲೋರೈಡ್ ಅಂಶಗಳ ಬಗ್ಗೆ ವರದಿ ನೀಡಿ, ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಭೆಗೆ ತಿಳಿಸಿದರು.

      ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಫಾಲಾಕ್ಷ ಅವರು ಜಿಲ್ಲೆಯಲ್ಲಿ 2 ಲಕ್ಷ 77 ಸಾವಿರದಷ್ಟು ಆಯುಷ್ಮಾನ್ ಕಾರ್ಡ್‍ಗಳನ್ನು ವಿತರಿಸಲಾಗಿದೆ. 6 ಜನರಿಕ್ ಔಷಧಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಜನರ ಸ್ಪಂದನೆ ಉತ್ತಮವಾಗಿದೆ. ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ ಹೆಚ್ಚಾಗಿ ಕೆಮ್ಮು, ನೆಗಡಿ, ಜ್ವರದ ರೋಗಿಗಳು, 3245 ಆನಿಮಿಯಾ (ರಕ್ತಹೀನತೆ) ಇರುವ ರೋಗಿಗಳನ್ನು ಗುರುತಿಸಲಾಗುತ್ತಿದೆ. 2008 ಕ್ಷಯ ರೋಗಿಗಳನ್ನು ಪತ್ತೆ ಮಾಡಿ, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.

     ಡೆಂಗ್ಯೂ ಜ್ವರ ತಪ್ಪಿಸಲು ಪ್ರತಿ ಶುಕ್ರವಾರ ಸಮೀಕ್ಷೆ ನಡೆಸಲಾಗುತ್ತಿದೆ. ಒಂದು ವರ್ಷಕ್ಕೆ 1042 ಮಹಿಳೆಯರಿಗೆ ಗರ್ಭಕೋಶ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಸಭೆಗೆ ತಿಳಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಎ. ನಾರಾಯಣಸ್ವಾಮಿಯವರು, ಚಿತ್ರದುರ್ಗ ಹೀಗಾಗಲೇ ಬಡ ಜಿಲ್ಲೆಯಾಗಿದೆ. ಅಂತಹುದರಲ್ಲಿ ತಾಯಂದಿರ ಆರೋಗ್ಯದ ಬಗ್ಗೆ ಗಮನಹರಿಸುವುದು ಸೂಕ್ತ. ಹೆರಿಗೆ ಸಮಯದಲ್ಲಾಗುವ ಶಸ್ತ್ರಚಿಕಿತ್ಸೆ ತಪ್ಪಿಸಿ, ಅವರು ಆಸ್ಪತ್ರೆಗೆ ದಾಖಲಾದ ಕೂಡಲೇ ರಕ್ತ ಪರೀಕ್ಷೆ ಮಾಡಿ, ಮುನ್ನೆಚರಿಕೆ ಕ್ರಮ ಕೈಗೊಳ್ಳಬೇಕು. ಆಶಾ ಕಾರ್ಯಕರ್ತೆಯರು ಸಾರ್ವಜನಿಕರಿಗೆ ರೋಗಗಳ ಬಗ್ಗೆ ಅರಿವು ನೀಡುವುದರ ಮೂಲಕ ಕುಟುಂಬಸ್ಥರೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು.

    ಜಿಲ್ಲೆಯಲ್ಲಿ ಹೆಚ್ಚು ಹೆರಿಗೆ ಶಸ್ತ್ರ ಚಿಕಿತ್ಸೆ ನಡೆಯುತ್ತಿರುವುದು, ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳ ಜೊತೆಯಲ್ಲಿ ಬಂದ ಕುಟುಂಬಸ್ಥರಿಗೆ ಸರಿಯಾದ ವ್ಯವಸ್ಥೆಯಿಲ್ಲದಿರುವುದು ಹಾಗೂ ಆಸ್ಪತ್ರೆಗಳಲ್ಲಿ ಸ್ವಚ್ಚತೆ ಮತ್ತು ಮೂಲಭೂತ ಸೌಕರ್ಯಗಳಿಲ್ಲದಿರುವ ಬಗ್ಗೆ ಜಿಲ್ಲಾ ಸರ್ಜನ್‍ರವರು ಕೂಡಲೇ ಸರಿಪಡಿಸಿಕೊಳ್ಳುವಂತೆ ಆದೇಶವಿತ್ತರು.

      ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜಾನಾಯಕ್ ಅವರು ಜಿಲ್ಲೆಯಲ್ಲಿ 2333 ಅಂಗನವಾಡಿ ಕೇಂದ್ರಗಳಿದ್ದು, 1733 ಸ್ವಂತ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಉಳಿದವುಗಳಲ್ಲಿ 111 ಕಟ್ಟಡಗಳನ್ನು ನರೇಗಾ ಯೋಜನೆ ನಿರ್ಮಿಸುವಂತೆ ಆದೇಶಿಸಲಾಗಿದೆ. ಅದರಂತೆ 62 ಕಟ್ಟಡಗಳು ಪೂರ್ಣಗೊಂಡಿವೆ. ಪ್ರಧಾನ ಮಂತ್ರಿ ಮಾತೃವಂದನ ಯೋಜನೆ ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ಹೊಂದಿದೆ. ಅಪೌಷ್ಠಿಕತೆಯಿಂದ 383 ಮಕ್ಕಳು ಬಳಲುತ್ತಿದ್ದಾರೆ. ಅವರಿಗೆ ಪೌಷ್ಠಿಕ ಆಹಾರ ವಿತರಿಸಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು.ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಿ.ಎಂ ವಿಶಾಲಾಕ್ಷಿ ನಟರಾಜ್, ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಜಿಲ್ಲಾಧಿಕಾರಿ ಆರ್. ವಿನೊತ್ ಪ್ರಿಯಾ ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಸಿ. ಸತ್ಯಭಾಮ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap