ನಾಗರೀಕ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹ

ಹರಿಹರ;

        ನಗರದ ಜೈಭೀಮನಗರದ ಕೊಳಚೆ ಪ್ರದೇಶದಲ್ಲಿರುವ ಜನರಿಗೆ ನಾಗರೀಕ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರಸಭೆ ಅಧ್ಯಕ್ಷರಿಗೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.

       ಈ ವೇಳೆ ವೇದಿಕೆ ಗೌರವಾಧ್ಯಕ್ಷ ನಾಗರಾಜ್ ಭಂಡಾರಿ ಮಾತನಾಡಿ ಹರಿಹರ ನಗರಸಭೆ ವ್ಯಾಪ್ತಿಗೆ ಸೇರಿದ ಜೈಭೀಮ್ ನಗರದ ಕೆಳಭಾಗದಲ್ಲಿ ಚಾನಲ್ ಪಕ್ಕದ ಕೊಳಚೆ ಪ್ರದೇಶದಲ್ಲಿ ಸುಮಾರು 100 ಕುಟುಂಬಗಳು ಸಣ್ಣ ಪುಟ್ಟ ಮನೆ ಗುಡಿಸಲುಗಳನ್ನು ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ ಎಂದರು. ಈ ಪ್ರದೇಶದಲ್ಲಿ ಕೆಲವು ರಸ್ತೆಗಳಿಗೆ ಮಾತ್ರ ಗ್ರಾವೆಲ್ , ಕೆಲವು ನೀರು ಸರಬರಾಜು ನಲ್ಲಿ, ಹಾಗೂ ಬೀದಿ ದೀಪಗಳು ಬಿಟ್ಟರೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲ ಎಂದರು.

        ಇಡೀ ದೇಶವೇ ಸ್ವಚ್ಚತೆ ಬಗ್ಗೆ ದೊಡ್ಡ ಆಂದೋಲನವೇ ನಡೆಯುತ್ತಿದ್ದರು ಈ ಭಾಗದಲ್ಲಿ ಮಾತ್ರ ರಸ್ತೆಗೂ ಚರಂಡಿಗಳಿಲ್ಲ, ಚರಂಡಿಗಳಿಲ್ಲದಿರುವುದರಿಂದ ಶೌಚಾಲಯಗಳನ್ನು ನಿರ್ಮಿಸಿಲ್ಲ, ಮನೆಗಳ ತ್ಯಾಜ್ಯ ನೀರು ನೇರವಾಗಿ ರಸ್ತೆಯ ಅಕ್ಕಪಕ್ಕದಲ್ಲಿ ನಿಲ್ಲುತ್ತದೆ. ಈ ಭಾಗದಲ್ಲಿ ಮಕ್ಕಳು ಮಹಿಳೆಯರು ಸೇರಿದಂತೆ ಎಲ್ಲರೂ ಶೌಚಾಲಯಕ್ಕೆ ಬಯಲನ್ನೆ ಆಶ್ರಯಿಸಿದ್ದಾರೆ.

       ಮಹಿಳೆಯರು ಶೌಚಾಲಯಕ್ಕೆ ಹೋಗಬೇಕೆಂದರೆ ಕತ್ತಲಾಗುವವರೆ ಕಾದು ಹೋಗಬೇಕು ಇದು ನಿತ್ಯ ಸಂಕಟವಾಗಿದೆ. ಬಹಿರ್ದೆಸೆಗೆ ಹೋಗುವ ಜಾಗದಲ್ಲಿ ಚಾನಲ್ ಇದ್ದು ಈ ಚಾನೆಲ್ ನಲ್ಲಿ ಇತ್ತಿಚೆಗೆ ಬಹಿರ್ದೆಸೆಗೆ ಬಂದಿದ್ದ 5 ವರ್ಷದ ಮಗು ಆಕಸ್ಮಿಕವಾಗಿ ಚಾನಲ್ ನಲ್ಲಿ ಬಿದ್ದು ಮರಣ ಹೊಂದಿತು.

        ಆದ್ದರಿಂದ ಈ ಚಾನೆಲ್ ಪಕ್ಕದಲ್ಲಿ ಕಾಂಪೌಂಡ್ ಅಥವಾ ಜಾಲರಿಯನ್ನು ನಿರ್ಮಿಸಬೇಕು, ಕೊಳಚೆ ಪ್ರದೇಶ ನಿವಾಸಿಗಳಿಗೆ ಅನುಕೂಲವಾಗುವಂತೆ ಮಹಿಳೆ ಮತ್ತು ಪುರುಷರ ಸಾರ್ವಜನಿಕ ಶೌಚಾಲಯ ಕಾಂಪ್ಲೆಕ್ಸ್ ನ್ನು ನಿರ್ಮಿಸಬೇಕು, ಡಾಂಬರು ಅಥವಾ ಸಿಸಿ ರಸ್ತೆ ಹಾಗೂ ಸುಸಜ್ಜಿತ ಚರಂಡಿಗಳನ್ನು ನಿರ್ಮಾಣ ಮಾಡಬೇಕು,ಬೇಸಿಗೆ ಕಾಲ ಪ್ರಾರಂಭವಾಗಿದೆ ನೀರಿನ ಭವಣೆಯನ್ನು ಪರಿಹರಿಸಿ ನೀರಿನ ಘಟಕಗಳು ಸೇರಿದಂತೆ ಇನ್ನಿತರೆ ನಾಗರೀಕ ಸೌಲಭ್ಯಗಳನ್ನು ಈ ಭಾಗದ ನಿವಾಸಿಗಳಿಗೆ ಒದಗಿಸಿಕೊಡಬೇಕೆಂದು ಮನವಿ ಮಾಡಿದರು.

        ನಂತರ ಪೌರಾಯುಕ್ತೆ ಎಸ್.ಲಕ್ಷ್ಮೀ ಮಾತನಾಡಿ ಈಗಾಗಲೇ ಜೈಭೀಮ್ ನಗರದ ಕೆಳಭಾಗದ ಚಾನೆಲ್ ಗೆ ಸಂಬಂಧಿಸಿದಂತೆ ನೀರಾವರಿ ಇಲಾಖೆಗೆ ಸಾಕಷ್ಟು ಭಾರಿ ಗಮನಕ್ಕೆ ತಂದ್ದಿದ್ದೇವೆ. ಕೂಡಲೇ ಕೊಳಚೆ ಪ್ರದೇಶದ ನಿವಾಸಿಗಳಿಗೆ ಅನುಕೂಲವಾಗುವಂತೆ ಜಾಗವನ್ನು ಪರಿಶೀಲಿಸಿ ಅಧ್ಯಕ್ಷರು ಸದಸ್ಯರ ಜೊತೆ ಚರ್ಚಿಸಿ ಶೌಚಾಲಯ ನಿರ್ಮಾಣ ಮಾಡುವುದಕ್ಕೆ ನಿರ್ಣಯ ತಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.

      ಈ ಸಂಧರ್ಭದಲ್ಲಿ ವೇದಿಕೆ ತಾಲ್ಲೂಕು ಅಧ್ಯಕ್ಷ ಎಸ್.ಕಾಳಿ ಪ್ರಸಾದ್, ಉಪಾಧ್ಯಕ್ಷ ಸಿದ್ದೀಖ್, ಕಾರ್ಯಾಧ್ಯಕ್ಷ ಪ್ರವೀಣ್ ಕುಮಾರ್, ನಿಂಗಾರಾಜ್, ಗೌಸಪೀರ್, ಹಾಗೂ ನಿವಾಸಿಗಳಾದ ಓಂಕಾರಮ್ಮ, ರಜೀಯಾ, ಪೈರೋಜಿಯಾ, ಸಮೃನ್ ಬಿ, ಬಿಬಿ.ಜಹೀರ್, ಸರೋಜಮ್ಮ ಮತಿತರರು ಉಪಸ್ಥಿತರಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ