ದಾವಣಗೆರೆ:
ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅಥವಾ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಸಚಿವ ಸ್ಥಾನ ನೀಡಬೇಕು ಹಾಗೂ ಹರಿಹರ ಶಾಸಕ ಎಸ್.ರಾಮಪ್ಪನವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕೆಂದು ಒತ್ತಾಯಿಸಿ, ಆಲ್ ಇಂಡಿಯಾ ರಾಜೀವ್‍ಗಾಂಧಿ ಯೂತ್ ಬ್ರಿಗೇಡ್ ವತಿಯಿಂದ ನಗರದಲ್ಲಿ ಶುಕ್ರವಾರ ಉಪವಾಸ ಸತ್ಯಾಗ್ರಹ ನಡೆಸಲಾಯಿತು.
ಇಲ್ಲಿನ ಎಸಿ ಕಚೇರಿ ಎದುರು ಶುಕ್ರವಾರ ಬೆಳಿಗ್ಗೆಯಿಂದ ಸಂಜೆಯ ವರೆಗೂ ಆಲ್ ಇಂಡಿಯಾ ರಾಜೀವ್‍ಗಾಂಧಿ ಯೂತ್ ಬ್ರಿಗೇಡ್ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಬೆಂಬಲಿಗರು ಶಾಮನೂರು ಇಲ್ಲವೇ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆಲ್ ಇಂಡಿಯಾ ರಾಜೀವ್‍ಗಾಂಧಿ ಯೂತ್ ಬ್ರಿಗೇಡ್‍ನ ಮಲ್ಲಿಕಾರ್ಜುನ ಇಂಗಳೇಶ್ವರ, ಕಳೆದ ನಾಲ್ಕೈದು ದಶಕದಿಂದಲೂ ಕಾಂಗ್ರೆಸ್ ಪಕ್ಷಕ್ಕೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಸಾಕಷ್ಟು ಕೊಡುಗೆ ನೀಡಿದ್ದಾರೆ. ಕೆಪಿಸಿಸಿ ಕಾಯಂ ಖಜಾಂಚಿ ಎಂಬಷ್ಟರ ಮಟ್ಟಿಗೆ ಪಕ್ಷಕ್ಕೆ ಆಸರೆಯಾಗಿದ್ದ ಶಿವಶಂಕರಪ್ಪನವರನ್ನು ಮೈತ್ರಿ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರನ್ನಾಗಿ ಮಾಡಿ, ಉಸ್ತುವಾರಿ ಸಚಿವರಾಗಿ ಮಾಡಬೇಕು. ಇಲ್ಲವೇ, ಎಸ್.ಎಸ್.ಮಲ್ಲಿಕಾರ್ಜುನ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ಮಾಡಿ, ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕೆಂದು ಒತ್ತಾಯಿಸಿದರು.
ಯುವ ಕಾಂಗ್ರೆಸ್ ಮುಖಂಡ ಎಲ್.ಎಚ್.ಸಾಗರ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ದಾವಣಗೆರೆ ಇತಿಹಾಸದಲ್ಲೇ ಹಿಂದೆಂದೂ ಆಗದಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಶಾಮನೂರು ಶಿವಶಂಕರಪ್ಪ, ಎಸ್.ಎಸ್.ಮಲ್ಲಿಕಾರ್ಜುನ್ ಅವರುಗಳು ಮಾಡಿದ್ದಾರೆ. ಆದರೆ, ಕಳೆದೊಂದು ವರ್ಷದಿಂದಲೂ ಪರ ಜಿಲ್ಲೆಯವರಿಗೆ ಉಸ್ತುವಾರಿ ಮಂತ್ರಿಸ್ಥಾನ ನೀಡಿರುವುದರಿಂದ ಜಿಲ್ಲಾ ಕೇಂದ್ರ, ಜಿಲ್ಲೆಯ ಅಭಿವೃದ್ಧಿಯೇ ಕುಂಠಿತವಾಗಿದೆ ಎಂದು ಆರೋಪಿಸಿದರು.
ನಮ್ಮ ಜಿಲ್ಲೆಯವರೇ ಉಸ್ತುವಾರಿ ಸಚಿವರಾದರೆ ಊರಿನ, ಜಿಲ್ಲೆಯ ಅಭಿವೃದ್ಧಿಯೂ ಸಾಧ್ಯವಾಗುತ್ತದೆ. ಅಭಿವೃದ್ಧಿ ಕೆಲಸ, ಕಾರ್ಯಗಳೂ ಸುಗಮವಾಗಿ ಸಾಗುತ್ತವೆ. ಅಲ್ಲದೇ, ಜನರ ಕಷ್ಟಸುಖಗಳಿಗೂ ಸ್ಪಂದಿಸಲು ಸಾಧ್ಯವಾಗುತ್ತದೆ. ಸಮ್ಮಿಶ್ರ ಸರ್ಕಾರದಲ್ಲಿ ಎಸ್.ಆರ್.ಶ್ರೀನಿವಾಸ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿದ್ದರೂ, ಒಮ್ಮೆಯೂ ಇಲ್ಲಿ ವಾಸ್ತವ್ಯ ಮಾಡಿಲ್ಲ. ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲೂ ಮೈತ್ರಿ ಅಭ್ಯರ್ಥಿ ಎಚ್.ಬಿ.ಮಂಜಪ್ಪ ಪರ ಪ್ರಚಾರಕ್ಕೆ ಬರಲೇ ಇಲ್ಲ. ಹಾಲಿ ಉಸ್ತುವಾರಿ ಸಚಿವರ ಕಾರ್ಯ ವೈಖರಿಯಿಂದ ಜನರು ಬೆಸತ್ತಿದ್ದಾರೆ.
ಅಷ್ಟೇ ಅಲ್ಲ, ಸಚಿವ ಶ್ರೀನಿವಾಸ್‍ರಿಗೂ ಸಹ ಜಿಲ್ಲೆಯ ಬಗ್ಗೆ ಯಾವುದೇ ಮಾಹಿತಿಯೂ ಇಲ್ಲ, ಕಾಳಜಿಯೂ ಇಲ್ಲ. ನಮ್ಮವರೇ ಆದ ಶಾಮನೂರು ಶಿವಶಂಕರಪ್ಪ ಅಥವಾ ಎಸ್ಸೆಸ್ ಮಲ್ಲಿಕಾರ್ಜುನ ಸಚಿವರಾದರೆ, ಜಿಲ್ಲೆ ಮತ್ತು ಜಿಲ್ಲಾ ಕೇಂದ್ರದ ಅಭಿವೃದ್ಧಿ ಮತ್ತೆ ನಾಗಾಲೋಟದಲ್ಲಿ ಸಾಗುತ್ತದೆಂಬುದರಲ್ಲಿ ಯಾವುದೇ ಅನುಮಾನವೂ ಇಲ್ಲ. ಶಾಮನೂರುರನ್ನು ಮಾಡದಿದ್ದರೆ ಮಲ್ಲಿಕಾರ್ಜುನರನ್ನು ವಿಧಾನ ಪರಿಷತ್ ಸದಸ್ಯರಾಗಿ ಮಾಡಿ, ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.
ಯುವ ಮುಖಂಡ ಪ್ರಸನ್ನ ಬೆಳಕೇರಿ ಮಾತನಾಡಿ, ದಾವಣಗೆರೆ ಜಿಲ್ಲೆಯಿಂದ ಕಾಂಗ್ರೆಸ್ ಪಕ್ಷದಿಂದ ಹಿರಿಯರಾದ ಡಾ.ಶಾಮನೂರು ಶಿವಶಂಕರಪ್ಪ ದಾವಣಗೆರೆ ದಕ್ಷಿಣದಿಂದ ಹಾಗೂ ಎಸ್.ರಾಮಪ್ಪ ಹರಿಹರ ಕ್ಷೇತ್ರದಿಂದ ಆಯ್ಕೆಯಾದ ಇಬ್ಬರಾಗಿದ್ದಾರೆ. ಹಿರಿಯರಾದ ಶಾಮನೂರುಗೆ ಸಚಿವ ಸ್ಥಾನ ನೀಡಿ, ರಾಮಪ್ಪನವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಮೈತ್ರಿ ನಾಯಕರು ಸ್ಪಂದಿಸಬೇಕೆಂದು ಆಗ್ರಹಿಸಿದರು.
ಉಪವಾಸ ಸತ್ಯಾಗ್ರಹದಲ್ಲಿ ಯುವ ಮುಖಂಡರಾದ ಮಂಜುನಾಥ, ಯುವರಾಜ, ಮಹಾವೀರ, ನಾಗರಾಜ, ದಾಕ್ಷಾಯಣಮ್ಮ, ಶಾಂತರಾಜ, ಸುನೀತಾ, ದಾಕ್ಷಾಯಣಮ್ಮ, ರಾಜಣ್ಣ, ರಾಘವೇಂದ್ರ ಗೌಡ ಮತ್ತಿತರರು ಭಾಗವಹಿಸಿದ್ದರು.