ಮೃತರ ಅಂತ್ಯ ಸಂಸ್ಕಾರಕ್ಕೆ ಅನುವು ಮಾಡಿಕೊಡಿ : ಸಚಿವ

ಮಧುಗಿರಿ

    ಯಾರಾದರೂ ಕೋವಿಡ್ ಶಂಕಿತರು ಮೃತಪಟ್ಟಲ್ಲಿ ಅವರ ಗಂಟಲು ದ್ರವ ಸಂಗ್ರಹಿಸಿ. ಆದರೆ ಫಲಿತಾಂಶದ ವರದಿ ಬರುವವರೆಗೂ ಕುಟುಂಬಸ್ಥರನ್ನು ದಿನಗಟ್ಟಲೆ ಕಾಯಿಸದೆ, ಮೃತರ ಅಂತ್ಯ ಸಂಸ್ಕಾರಕ್ಕೆ ಅನುವು ಮಾಡಿ ಕೊಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಧುಸ್ವಾಮಿ ತಿಳಿಸಿದರು.

    ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಹಾಸನ, ಚಿಕ್ಕಮಗಳೂರಿನ ಪ್ರಯೋಗಶಾಲೆಗಳಿಗೆ ಗಂಟಲು ದ್ರವಗಳನ್ನು ಪರೀಕ್ಷೆಗಾಗಿ ಕಳುಹಿಸಿ ಕೊಡಲಾಗುತ್ತಿತ್ತು. ಆದರೆ ಆ ಸ್ಥಳಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿರುವುದರಿಂದ ಫಲಿತಾಂಶ ವಿಳಂಬವಾಗುತ್ತಿದೆ. ತುಮಕೂರು ಜಿಲ್ಲೆಯಲ್ಲಿ ಲಾಕ್ ಡೌನ್ ಇರುವುದಿಲ್ಲ. ಸಂಘ-ಸಂಸ್ಥೆಗಳು ಬೇಕಾದರೆ ಸ್ವಯಂಪ್ರೇರಿತವಾಗಿ ಲಾಕ್ ಡೌನ್ ಮಾಡಿಕೊಳ್ಳಬಹುದು. ಈಗಾಗಲೇ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಲಾಕ್ ಡೌನ್ ಮಾಡಬಾರದೆಂದು ತೀರ್ಮಾನಿಸಲಾಗಿದೆ. ಕೊರೊನಾ ಸಾಂಕ್ರಾಮಿಕ ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದರು.

      ಕಂಟೈನ್ಮೆಂಟ್ ವಲಯದಲ್ಲಿರುವ ಎಲ್ಲರಿಗೂ ಕೋವಿಡ್ ರ್ಯಾಪಿಡ್ ಟೆಸ್ಟ್ ಮಾಡಿಸಬೇಕು ಹಾಗೂ ಅಂತಹ ವಲಯಗಳಲ್ಲಿ ಸಾರ್ವಜನಿಕರಿಗೆ ಅಗತ್ಯ ವಸ್ತ್ತುಗಳನ್ನು ಅಧಿಕಾರಿಗಳು ಪೂರೈಸಬೇಕು. ಬೆಂಗಳೂರಿನಿಂದ ಬರುತ್ತಿರುವವರು ತಮ್ಮ ವ್ಯಾಪ್ತಿಯ ಶಾಲೆ, ವಸತಿ ನಿಲಯಗಳಲ್ಲಿ ಆಶ್ರಯ ಪಡೆದುಕೊಂಡು ಸ್ವಯಂ ಕ್ವಾರೈಂಟೈನ್ ಆಗಬೇಕು. ಈಗಾಗಲೇ ಪಟ್ಟಣದ ಸಾರ್ವಜನಿಕರ ಆಸ್ಪತ್ರೆಯಲ್ಲಿ 1 ಐಸಿಯು ವಾರ್ಡ್ ಇದ್ದು, ಮಂಜೂರಾಗಿರುವ 2 ವಾರ್ಡ್‍ಗಳಿಗೆ ತಾಲ್ಲೂಕಿನಲ್ಲಿ ಸೂಕ್ತ ಜಾಗ ಹುಡುಕಿ ಶಾಶ್ವತವಾಗಿ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಎಂದು ಆರೋಗ್ಯಾಧಿಕಾರಿಗಳಿಗೆ ಸೂಚಿಸಿ ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸೂಚಿಸಿದರು.

     ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಮಾತನಾಡಿ ಕ್ವಾರೆಂಟೈನ್‍ಗೆ ಸಹಕರಿಸದಿದ್ದರೆ ಅಂತಹವರ ವಿರುದ್ಧ ಕಾನೂನು ಮೊಕದ್ದಮೆ ದಾಖಲಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ ಅವರು, ಕೊರೊನಾ ಸಾಂಕ್ರಮಿಕ ರೋಗ ತಡೆಗಟ್ಟಲು ಎಲ್ಲರ ಸಹಕಾರ ಅಗತ್ಯವಿದೆ ಜಿಲ್ಲೆಯಲ್ಲಿ ಅನುದಾನದ ಕೊರತೆ ಇಲ್ಲ ಎಂದರು.

     ಶಾಸಕ ಎಂ.ವಿ.ವೀರಭದ್ರಯ್ಯ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭ ಕಲ್ಯಾಣ್ ಜಿಲ್ಲಾ ಆರೋಗ್ಯಾಧಿಕಾರಿ ನಾಗೇಂದ್ರಪ್ಪ, ಕೋವಿಡ್ ನೋಡಲ್ ಅಧಿಕಾರಿ ಡಾ.ಮಹಿಮಾ, ಉಪವಿಭಾಗಾಧಿಕಾರಿ ಡಾ.ನಂದಿನಿ ದೇವಿ, ತಹಸೀಲ್ದಾರ್ ಡಾ.ವಿಶ್ವನಾಥ್, ತಾಲೂಕು ವೈದ್ಯಾಧಿಕಾರಿ ರಮೇಶ್ ಬಾಬು, ಡಿವೈಎಸ್ಪಿ ಪ್ರವೀಣ್, ಸಿಪಿಐ ಸರ್ದಾರ್, ಪಿಎಸೈ ಕಾಂತರಾಜು, ಇಓ ದೊಡ್ಡಸಿದ್ದಪ್ಪ, ಮುಖ್ಯಾಧಿಕಾರಿ ಅಮರನಾರಾಯಣ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link