ತಿಪಟೂರು:
ತಾಲ್ಲೂಕಿನಲ್ಲಿ ಹಾದು ಹೋಗುತ್ತಿರುವ ಎತ್ತಿನಹೊಳೆ ಯೋಜನೆಗೆ ನೂರಾರು ಎಕರೆ ಜಮೀನು ಸ್ವಾಧೀನವಾಗುತ್ತಿದ್ದು, ಸಾವಿರಾರು ಜನರು ಬದುಕನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಈ ಯೋಜನೆಯಿಂದ ಇಲ್ಲಿಯ ರೈತರಿಗೆ ತುಂಬಾ ಅನ್ಯಾಯವಾಗಿದೆ ಎಂದು ಎತ್ತಿನ ಹೊಳೆ ಹೋರಾಟ ಸಮಿತಿಯ ಪದಾಧಿಕಾರಿಗಳು, ರೈತರು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರು.
ನಗರದ ಕೋಡಿ ವೃತ್ತದಿಂದ ಉಪವಿಭಾಗಾಧಿಕಾರಿ ಕಚೇರಿವರಗೆ ಬೃಹತ್ ಪ್ರತಿಭಟನಾ ಪಾದಯಾತ್ರೆ ನಡೆಸಿ ಉಪವಿಭಾಗಾಧಿಕಾರಿ ಕೆ.ಆರ್.ನಂದಿನಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಮಾತನಾಡಿದ ಎತ್ತಿನ ಹೊಳೆ ಹೋರಾಟ ಸಮಿತಿಯ ಅಧ್ಯಕ್ಷ ತಿಮ್ಲಾಪುರ ದೇವರಾಜು ಎತ್ತಿನಹೊಳೆ ಯೋಜನೆಯ ಕಾಲುವೆಯು ಹಾದುಹೋಗುವ ತಿಪಟೂರಿನ ಭಾಗದಲ್ಲಿ ತೀವ್ರ ಬರ ಪರಿಸ್ಥಿತಿಯಿದೆ.
ಆದರೆ ಎತ್ತಿನಹೊಳೆ ಯೋಜನೆಯಲ್ಲಿ ತಿಪಟೂರಿಗೆ ನೀರಿನ ಪಾಲು ನೀಡಿಲ್ಲ. ಜೊತೆಗೆ, ತಿಪಟೂರು ತಾಲ್ಲೂಕಿಗೆ ಹೇಮಾವತಿ ನೀರಿನಲ್ಲೂ ಮೋಸವಾಗಿದೆ. ಬಹುಗ್ರಾಮ ಕುಡಿಯುವ ಯೋಜನೆಯಲ್ಲಿ ಕೆರೆಯ ಶೇ10ರಿಂದ 20 ಭಾಗದಷ್ಟು ಮಾತ್ರ ನೀರನ್ನು ತುಂಬಿಸಲಾಗುತ್ತದೆ ಎಂದರು. ತಾಲ್ಲೂಕಿಗೂ ಕನಿಷ್ಠ 1.5 ಟಿಎಂಸಿ ನೀರನ್ನು ಹಂಚಿಕೆ ಮಾಡಬೇಕು ಎಂದರು.
ಕಾರ್ಯದರ್ಶಿ ಎಸ್.ಎನ್.ಸ್ವಾಮಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ-206ರ ಭೂಸ್ವಾಧೀನಕ್ಕೆ ಪರಿಹಾರದಲ್ಲಿ ರೈತರಿಗೆ ಆಗಿರುವ ಅನ್ಯಾಯ ಎತ್ತಿನಹೊಳೆ ಸಂತ್ರಸ್ತರಲ್ಲಿ ಭೀತಿ ಮೂಡಿಸಿದೆ. ಇಲ್ಲಿ ಫಲವತ್ತಾದ ಭೂಮಿ, ತೆಂಗು, ಅಡಿಕೆ, ಮುಂತಾದ ಮರಗಳಿರುವ ತೋಟಗಳು ಎತ್ತಿನಹೊಳೆ ಯೋಜನೆಗೆ ಆಹುತಿಯಾಗುತ್ತಿವೆ. ಇದನ್ನೇ ನಂಬಿಕೊಂಡಿರುವ ರೈತರ ಸ್ಥಿತಿ ಹೀನಾಯವಾಗುತ್ತದೆ. ಇಲ್ಲಿ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿಯಾಗಿರುವ ಬೆಲೆ ತೀರ ಕಡಿಮೆಯಿದ್ದು ಅನ್ಯಾಯವಾಗುವ ಸಾಧ್ಯತೆಯಿದೆ. ಆದ್ದರಿಂದ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗುವ ಮುನ್ನವೇ ಪರಿಹಾರ ನಿರ್ಧಾರವಾಗಬೇಕು ಎಂದು ಒತ್ತಾಯಿಸಿದರು.
ಎತ್ತಿನಹೊಳೆ ಹೋರಾಟ ಸಮಿತಿ ಉಪಾಧ್ಯಕ್ಷ ಬಿ.ಬಿ.ಸಿದ್ಧಲಿಂಗಮೂರ್ತಿ, ಸಹಕಾರ್ಯದರ್ಶಿಗಳಾದ ಬಸ್ತಿಹಳ್ಳಿ ರಾಜಣ್ಣ, ಆರ್.ಡಿ. ಯೋಗಾನಂದ ಸ್ವಾಮಿ, ಭೈರನಾಯಕನಹಳ್ಳಿ ಮನೋಹರ್ ಪಟೇಲ್, ಶ್ರೀಕಾಂತ್, ಗೌಡನಕಟ್ಟೆ ಚೇತನ್, ಎಸ್.ಪ್ರಸಾದ್ ಮಾದಿಹಳ್ಳಿ ಸೇರಿದಂತೆ ರೈತರು ಭಾಗವಹಿಸಿದ್ದರು.
ರೈತರ ಭೂಮಿಗೆ ಬೆಲೆಯಿಲ್ಲವೇ?
ಹೇಮಾವತಿ ನೀರಿಯ ಸೌಕರ್ಯ ಪಡೆದಿರುವ ತಾಲ್ಲೂಕುಗಳಿಗೆ ಎತ್ತಿನಹೊಳೆ ಯೋಜನೆ ನೀರನ್ನು ನೀಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಅರಸೀಕೆರೆ ತಾಲ್ಲೂಕಿನಲ್ಲಿ ಯೋಜನೆಯ ಕಾಮಗಾರಿ ಮಾಡಿಸಿ ಪರಿಹಾರ ನೀಡಿಲ್ಲ. ಸ್ಥಳೀಯ ಶಾಸಕರನ್ನು ಕೇಳಿದರೆ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗುವಂತೆ ಸೂಚಿಸುತ್ತಾರೆ. ಅಮಾಯಕ ರೈತರಿಗೆ ಬೆಲೆಯೇ ಇಲ್ಲದಂತಾಗಿದೆ ಎನ್ನುತ್ತಾರೆ ಎತ್ತಿನಹೊಳೆ ಹೋರಾಟ ಸಮಿತಿ ಗೌರವಾಧ್ಯಕ್ಷ ಬೆನ್ನಾಯಕನಹಳ್ಳಿ ದೇವರಾಜು