ದಾವಣಗೆರೆ:
ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ತಕ್ಷಣವೇ 2ನೇ ಜೊತೆ ಸಮವಸ್ತ್ರ ಸರಬರಾಜು ಮಾಡಬೇಕು ಹಾಗೂ ಬಟ್ಟೆ ಹೊಲಿಸಲು ಹೊಲಿಗೆ ಕೂಲಿ ಹಣವನ್ನು ಎಸ್‍ಡಿಎಂಸಿ ಖಾತೆಗೆ ಜಮೆ ಮಾಡಬೇಕೆಂದು ಸರ್ಕಾರಿ ಶಾಲೆಗಳ ಎಸ್‍ಡಿಎಂಸಿ ಅಧ್ಯಕ್ಷರುಗಳು ಆಗ್ರಹಿಸಿದ್ದಾರೆ.
ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲೂಕಿನ ಕಕ್ಕರಗೊಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಕೆ.ಮಂಜಪ್ಪ, ಶಾಲೆಗಳು ಆರಂಭವಾಗಿ ಸುಮಾರು ಆರೇಳು ತಿಂಗಳೂ ಕಳೆದರೂ, ಈ ವರೆಗೂ 2ನೇ ಜೊತೆ ಸಮವಸ್ತ್ರವನ್ನು ಸರ್ಕಾರ ಇನ್ನೂ ಸರಬರಾಜು ಮಾಡಿಲ್ಲ. ಆದ್ದರಿಂದ ಮಕ್ಕಳು ಹರಿದು ಹೋಗಿರುವ ಸಮವಸ್ತ್ರ ಧರಿಸಿ ಶಾಲೆಗಳಿಗೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಈಗಾಗಲೇ ಸಮವಸ್ತ್ರ ಸೇರಿದಂತೆ ಇತರೆ ಸೌಲಭ್ಯಗಳನ್ನು ಕಲ್ಪಿಸಲು ಸರ್ವ ಶಿಕ್ಷ ಅಭಿಯಾನ ಅಡಿಯಲ್ಲಿ ರಾಜ್ಯ ಸರ್ಕಾರಕ್ಕೆ ಸುಮಾರು 570 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಆದರೆ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇನ್ನೂ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ ಎಂಬ ನೆಪ ಹೇಳಿ, ಸಮಸ್ತ್ರ ಖರೀದಿಗೆ ಬೇಕಾಗಿರುವ ಹಣವನ್ನು ಬಿಡುಗಡೆ ಮಾಡದಿರುವುದು ಅತ್ಯಂತ ಖಂಡನೀಯ ಎಂದು ಕಿಡಿಕಾರಿದರು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸರ್ಕಾರಿ ಶಾಲೆ ಮಕ್ಕಳಿಗೆ ಸೈಕಲ್ ಭಾಗ್ಯ ನೀಡಿದ್ದರು. ಅದೇರೀತಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಶೂ ಭಾಗ್ಯ ಹಾಗೂ ಕ್ಷೀರಭಾಗ್ಯ ನೀಡಿದ್ದರು. ಆದರೆ, ಈಗಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಶಾಲಾ ಮಕ್ಕಳ ಸಮವಸ್ತ್ರ ಭಾಗ್ಯ ಎಲ್ಲಿ ಕಿತ್ತುಕೊಳ್ಳುತ್ತಾರೆಂಬ ಆತಂಕ ಕಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸರ್ಕಾರಿ ಶಾಲೆಗಳಿಗೆ ಬಹುತೇಕ ಬಡ ಮಕ್ಕಳೇ ಹೆಚ್ಚು ಬರುತ್ತಾರೆ. ಆದರೆ, ಸರ್ಕಾರ ಸಮವಸ್ತ್ರಕ್ಕೆ ಬಟ್ಟೆ ಮಾತ್ರ ನೀಡುತ್ತಿದೆ. ಆ ಬಟ್ಟೆಯನ್ನು ಮಕ್ಕಳನ್ನು ನೀಡಿದರೆ, ಅದನ್ನು ಹೊಲಿಸಲು ಆಗದ ಸ್ಥಿತಿ ಮಕ್ಕಳ ಪೋಷಕರಲ್ಲಿದೆ. ಆದ್ದರಿಂದ ರಾಜ್ಯ ಸರ್ಕಾರ ಸಮವಸ್ತ್ರ ಹೊಲಿಸಲಿಕ್ಕಾಗಿ ಎಸ್‍ಡಿಎಂಸಿ ಖಾತೆಗೆ ಹೊಲಿಗೆ ಕೂಲಿ ಹಣ ಜಮೆ ಮಾಡುವುದರ ಜೊತೆಗೆ, 2ನೇ ಜೊತೆ ಸಮವಸ್ತ್ರವನ್ನು ತಕ್ಷಣವೇ ಸರಬರಾಜು ಮಾಡಬೇಕು. ಇಲ್ಲದಿದ್ದರೆ, ಮಕ್ಕಳೊಂದಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಇತ್ತೀಚೆಗೆ ಸಾಕಷ್ಟು ಕ್ಷೀಣಿಸುತ್ತಿದ್ದು, ಇದಕ್ಕೆ ಆರ್‍ಟಿಇ ಕಾಯ್ದೆಯೇ ಮುಖ್ಯ ಕಾರಣವಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಆರ್‍ಟಿಇ ಕಾಯ್ದೆ ಅಡಿಯಲ್ಲಿ ಖಾಸಗಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸಲು ಒಬ್ಬ ಮಗುವಿಗೆ 18 ಸಾವಿರ ರೂ. ವ್ಯಯಿಸುತ್ತಿರುವುದನ್ನೇ ಸರ್ಕಾರಿ ಶಾಲೆಗಳಿಗೆ ನೀಡಿ, ಶಾಲೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವ ಮೂಲಕ ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯಬೇಕು. ಜನಪ್ರತಿನಿಧಿಗಳು ಹಾಗೂ ಸರ್ಕಾರಿ ನೌಕರರ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಲ್ಲಿಯೇ ಓದುವಂತೆ ಮಾಡಲು ಸರ್ಕಾರ ಕಾಯ್ದೆ ರೂಪಿಸಬೇಕೆಂದು ಆಗ್ರಹಿಸಿದರು.
ಶಾಲೆಗಳಲ್ಲಿ ಮಧ್ಯಾಹ್ನ ನೀಡುವ ಬಿಸಿಯೂಟ ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದ್ದು, ಇದಕ್ಕೆ ಸರ್ಕಾರ ಶಾಲೆಗಳಿಗೆ ಸರಬರಾಜು ಮಾಡುತ್ತಿರುವ ಕಳಪೆ ಆಹಾರ ಪದಾರ್ಥಗಳೇ ಮುಖ್ಯ ಕಾರಣವಾಗಿವೆ. ಆದ್ದರಿಂದ ಗುಣಮಟ್ಟದ ಆಹಾರ ಪದಾರ್ಥಗಳನ್ನು ಪೂರೈಸಲು ಶಿಕ್ಷಣ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.
ಎಸ್‍ಎಸ್‍ಎಂ ನಗರದ ಕನ್ನಡ ಪ್ರಾಥಮಿಕ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ರಿಯಾಜ್ ಖಾನ್ ಮಾತನಾಡಿ, ನಮ್ಮ ಶಾಲೆಯಲ್ಲಿ ಮಕ್ಕಳ ಪ್ರವೇಶಾತಿ ಹಾಗೂ ಹಾಜರಾತಿ ಹೆಚ್ಚಿನ ಸಂಖ್ಯೆಯಲ್ಲಿದೆ. ಆದರೆ, ಮಕ್ಕಳು ಸ್ವಚ್ಛಂದವಾಗಿ ಆಟವಾಡಲು ಸರಿಯಾದ ಮೈದಾನ ಇಲ್ಲವಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್‍ಎಸ್‍ಎಂ ನಗರದ ಉರ್ದು ಪ್ರಾಥಮಿಕ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಮಹಮ್ಮದ್ ಯೂಸೂಫ್, ಮಕ್ಕಳ ಪೋಷಕರಾದ ನಾಗರಾಜ್, ಪರಶುರಾಮ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ