ಕಂಪ್ಲಿ
ಬರಗಾಲದ ಸಮೀಕ್ಷೆ ನಡೆಸಲು ಬಂದ ಅಧಿಕಾರಿಗಳು ರೈತರ ಕಣ್ಣಿಗೆ ಮಂಕುಬೂದಿ ಹಚ್ಚಿದ್ದಾರೆ ಎಂದು ಕರ್ನಾಟಕ ರಾಜ್ಯ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಜೆ.ಕಾರ್ತಿಕ ಹೇಳಿದರು.
ಅವರು ನಗರದ ಅತಿಥಿ ಗೃಹದಲ್ಲಿ ನಡೆದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸಂಘಟನ ಸಭೆಯಲ್ಲಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸಾಲ ಮನ್ನಾದ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ಮೈತ್ರಿ ಸರ್ಕಾರ 18650 ಕೋಟಿ ರೈತರ ಸಾಲ ಮನ್ನಾ ಮಾಡಿ, 48 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದೀವಿ ಎಂದು ಘೋಷಣೆ ಮಾಡುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಬಿಡಿಸಿಸಿ ಬ್ಯಾಂಕಿಗೆ 89 ಕೋಟಿ ಬಂದಿದೆ. ಇದರಲ್ಲಿ ಮೂಲ ದಾಖಲೆಗಳಿಲ್ಲ ಇರುವ ರೈತರ 4 ಕೋಟಿ ವಾಪಸ್ಸು ಹೋಗಿದ್ದು, 85 ಕೋಟಿ ಸಾಲ ಮನ್ನಾವಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಬರಗಾಲದಿಂದ ರೈತರ ಬೆಳೆಗಳು ನಷ್ಟವಾಗಿವೆ. ಆದರೆ, ರಾಜ್ಯ ಸರ್ಕಾರದ ಬರಗಾಲ ಅಧ್ಯಯನದ ಉಪ ಸಮಿತಿಯೊಂದು ಕಾಟಚಾರಕ್ಕೆ ಹಗರಿಬೊಮ್ಮನಹಳ್ಳಿ ಭಾಗದಲ್ಲಿ ಬರಗಾಲ ಸಮೀಕ್ಷೆ ನಡೆಸಿದೆ. ಸಮ್ಮಿಶ್ರ ಸರ್ಕಾರದ ಬಜೆಟ್‍ನಲ್ಲಿ ಕಂಪ್ಲಿ ಕ್ಷೇತ್ರದ ಏತನೀರಾವರಿಗಾಗಿ 75 ಕೋಟಿ ಅನುದಾನ ನೀಡಿರುವುದು ಸಂತಸದ ವಿಷಯವಾಗಿದೆ.
ಇದೇ ತರಹದಲ್ಲಿ ಕೆರೆ ಅಭಿವೃದ್ಧಿಗೆ ಸರ್ಕಾರ ಆಧ್ಯತೆ ನೀಡಬೇಕು. ಮೂರು ಜಿಲ್ಲೆಗಳ ಜೀವನಾಡಿ ತುಂಗಭದ್ರ ಜಲಾಶಯದಲ್ಲಿ ತುಂಬಿಕೊಂಡಿರುವ ಹೂಳನ್ನು ತೆಗೆಯಲು ಸರ್ಕಾರದ ಪ್ರತಿ ಬಜೆಟ್‍ನಲ್ಲಿ 1000 ಕೋಟಿ ಅನುದಾನ ಮೀಸಲಿಡಬೇಕು. ರೈತರ ಬೆಳೆಗಳಿಗೆ ಪರಿಷ್ಕೃತ ಬೆಂಬಲ ಬೆಲೆ ನೀಡಬೇಕು. ಭತ್ತದ ಖರೀದಿ ಕೇಂದ್ರಗಳನ್ನು ಸ್ಥಾಪಿಸಬೇಕೆಂದು ಆಗ್ರಹಿಸಿದರು.
ಈ ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಕಾರ್ಯಾಧ್ಯಕ್ಷ ಪಿ.ನಾರಾಯಣರೆಡ್ಡಿ, ಉಪಾಧ್ಯಕ್ಷ ವಿ.ಟಿ.ನಾಗರಾಜ, ಕಾರ್ಯದರ್ಶಿ ಬಿ.ವಿ.ಗೌಡ, ಕಂಪ್ಲಿ ತಾಲ್ಲೂಕು ಅಧ್ಯಕ್ಷ ಖಾಸಿಂಸಾಬ್, ಕಂಪ್ಲಿ ಘಟಕ ಅಧ್ಯಕ್ಷ ಕೆ.ಸುದರ್ಶನ, ಕಾರ್ಯಕರ್ತರಾದ ಬಿ.ವೆಂಕೋಬಣ್ಣ, ಎಮ್ಮಿಗನೂರು ಧರ್ಮಣ್ಣ, ಎ.ರಂಗಪ್ಪ, ನಾಯಕರ ತಿಮ್ಮಪ್ಪ, ಪಿ.ವಲಿಪಾಷ, ಜಡೆಪ್ಪ, ಕೆ.ಈರಣ್ಣ, ಎ.ನಾಗರಾಜ, ಅಸ್ಲಾಮ್ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
