ವಸತಿ ಶಾಲೆ ಪ್ರಾರಂಭದ ದಿನದಂದೇ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸಿ: ಡಿಸಿಎಂ

ಬೆಂಗಳೂರು

    ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ಶಾಲೆಗಳಲ್ಲಿ ಶಾಲೆ ಪ್ರಾರಂಭವಾದ ದಿನದಂದೇ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸಲು ಕ್ರಮಕೈಗೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಆದೇಶಿಸಿದ್ದಾರೆ.

     ನಗರದಲ್ಲಿ ಬುಧವಾರ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ 72 ನೇ ಆಡಳಿತ ಮಂಡಳಿ ಸಭೆಯಲ್ಲಿ ಅವರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘಕ್ಕೆ 2019-20 ನೇ ಸಾಲಿನಲ್ಲಿ 999 ಕೋಟಿ ರೂ.ಅನುದಾನ ಒದಗಿಸಲಾಗಿದ್ದು, 863 ಕೋಟಿ ರೂ. ನಿರ್ವಹಣೆ ಗೆ ಹಾಗೂ ಉಳಿದ 135 ಕೋಟಿ ರೂ ಅನುದಾನವನ್ನು ಮೂಲಭೂತಸೌಕರ್ಯಗಳ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತಿದೆ ಎಂದರು.

    ವಸತಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಅಗತ್ಯ ತರಬೇತಿ ನೀಡಬೇಕು. ಈಗಾಗಲೇ ನೇಮಕಾತಿ ಪ್ರಕ್ರಿಯೆಯಲ್ಲಿರುವ 3067 ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದರಿಗೆ ಶೀಘ್ರ ನೇಮಕಾತಿ ಆದೇಶ ನೀಡಬೇಕು. ವಸತಿ ಶಾಲೆಗಳು ಹಾಗೂ ವಸತಿ ನಿಲಯಗಳ ಕಟ್ಟಡಗಳನ್ನು ಹೆಚ್ಚಾಗಿ ನಿರ್ಮಿಸಿ ಕೊರತೆ ನೀಗಿಸಬೇಕು. ಕಟ್ಟಡಗಳ ಗುಣಮಟ್ಟವನ್ನು ಲೋಕೋಪಯೋಗಿ ಇಲಾಖೆಯಿಂದ ಪರಿಶೀಲಿಸಿ ವಶಕ್ಕೆ ತೆಗೆದುಕೊಳ್ಳಬೇಕು ಎಂದು ಅವರು ಸೂಚಿಸಿದರು.

     ಇಲಾಖೆ ವ್ಯಾಪ್ತಿಯ 68 ಪದವಿ ಪೂರ್ವ ಕಾಲೇಜುಗಳಲ್ಲಿ 3843 ವಿದ್ಯಾರ್ಥಿಗಳು ವಿಜ್ಞಾನ ವಿಷಯವನ್ನು ಆಯ್ಕೆಮಾಡಿಕೊಂಡಿದ್ದಾರೆ. ಇವರ ಪರೀಕ್ಷೆ ಸಿದ್ದತೆಗೆ ಅನುಕೂಲವಾಗುವಂತೆ ರಜೆ ಅವಧಿಯಲ್ಲಿ ವಿಶೇಷ ತರಬೇತಿ ನೀಡಬೇಕು. ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಉನ್ನತ ವೃತ್ತಿಪರ ವ್ಯಾಸಂಗಕ್ಕೆ ಅಗತ್ಯ ಪೂರಕ ಪಠ್ಯ ಪುಸ್ತಕಗಳನ್ನು ಒದಗಿಸಬೇಕು. ಎಲ್ಲಾ ಶಾಲಾ ಕಾಲೇಜುಗಳ ಕಟ್ಟಡಗಳ ಆವರಣದಲ್ಲಿ ಸಸಿ ಬೆಳೆಸಲು ಅರಣ್ಯ ಇಲಾಖೆಯ ಸಹಕಾರ ಪಡೆಯಬೇಕು ಎಂದರು.

    ಶಾಲಾ ಶೈಕ್ಷಣಿಕ ಹಾಗೂ ವಿಚಾರ ಪ್ರದರ್ಶನಗಳಲ್ಲಿ ರಾಷ್ಟ್ರ ಹಾಗೂ ರಾಜ್ಯಮಟ್ಟಕ್ಕೆ ಆಯ್ಕಯಾದ ವಿದ್ಯಾರ್ಥಿಗಳಿಗೆ ಬಹುಮಾನದೊಂದಿಗೆ ಅಭಿನಂದಿಸಿ ಉತ್ತೇಜನ ನೀಡಲಾಗುವುದು. 6, 7, ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಶೈಕ್ಷಣಿಕ ಮಾಸ ಪತ್ರಿಕೆ ಹಾಗೂ ವೆಬ್ ಸೈಟ್ ರೂಪಿಸಬೇಕು. ಯಾವುದೇ ಪೂರ್ವಾನುಮತಿ ಇಲ್ಲದೇ ಹೆಚ್ಚುವರಿ ಕಟ್ಟಡ ಕಾಮಗಾರಿಗಳನ್ನು ನಿರ್ಮಿಸಬಾರದು. ಅಂದಾಜು ವೆಚ್ವಕ್ಕೆ ಸೀಮಿತವಾಗಿರಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap