ರದ್ದಾಗಿರುವ ಪಡಿತರ ಚೀಟಿಗೂ ಅಕ್ಕಿ ವಿತರಿಸಿ

ದಾವಣಗೆರೆ

      ಕೊರೊನಾ ಸೋಂಕು ನಿಯಂತ್ರಣ ಕ್ರಮವಾಗಿ ಲಾಕ್‍ಡೌನ್ ಆಗಿರುವ ಹಿನ್ನೆಲೆಯಲ್ಲಿ ಪಡಿತರ ಚೀಟಿ ರದ್ದಾದವರಿಗೂ ಪಡಿತರ ನೀಡಿ ಯಾರೂ ಹಸಿವಿನಿಂದ ಬಳಲದಂತೆ ನೋಡಿಕೊಳ್ಳಬೇಕು ಎಂದು ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಸೂಚಿಸಿದರು.

      ನಗರದ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಸೋಮವಾರ ನಡೆದ ಕೋವಿಡ್-19 ನಿಯಂತ್ರಣ ಹಾಗೂ ಲಾಕ್‍ಡೌನ್ ಹಿನ್ನೆಲೆ ಜಿಲ್ಲೆಯಲ್ಲಿ ಕೈಗೊಳ್ಳಲಾದ ಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಯಾರೂ ಹಸಿವಿನಿಂದ ಬಳಲದಂತೆ ನೋಡಿಕೊಳ್ಳಬೇಕೆನ್ನುವುದು ಮುಖ್ಯಮಂತ್ರಿಗಳ ಆಶಯವಾಗಿದೆ. ಆದರೆ, ಇಲ್ಲಿ ಗಂಜಿ ಕೇಂದ್ರ ತೆರೆಯಲು ಬರುವುದಿಲ್ಲ. ಹೀಗಾಗಿ ಕೋವಿಡ್ ಸಂಕಷ್ಟ ಮುಗಿಯುವ ವರೆಗೂ ಬಡವರು, ನಿರ್ಗತಿಕರನ್ನು ಜಿಲ್ಲಾಡಳಿತ ನೋಡಿಕೊಳ್ಳಬೇಕು. ಇದಕ್ಕೆ ಶಾಸಕರು ಹಾಗೂ ಪಾಲಿಕೆ ಸದಸ್ಯರು ಸಹ ಕೈಜೋಡಿಸಬೇಕೆಂದು ಸಲಹೆ ನೀಡಿದರು.

     ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಮಾತನಾಡಿ, ರೇಷನ್‍ಕಾರ್ಡಿಗೆ ಅರ್ಜಿ ಸಲ್ಲಿಸಿದವರ ಸಂಖ್ಯೆ ಎಷ್ಟಿದೆ ಅವರಿಗೂ ಪಡಿತರ ನೀಡುವ ವ್ಯವಸ್ಥೆಯನ್ನು ಈ ದಿನದಿಂದಲೇ ಆರಂಭಿಸಬೇಕೆಂದು ಸೂಚಿಸಿದರು.ಆಹಾರ ಇಲಾಖೆ ಸಹಾಯಕ ನಿರ್ದೇಶಕ ಮಂಟೇಸ್ವಾಮಿ ಮಾತನಾಡಿ, 3440 ಜನರು ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದಾರೆ. ಅವರಿಗೂ ಪಡಿತರ ನೀಡಲಾಗುವುದು ಎಂದರು.
ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಮಾತನಾಡಿ, ಕಾರ್ಮಿಕರು, ವಲಸಿಗರು ಸೇರಿದಂತೆ ಬಡವರಿಗೆ ಊಟ, ವಸತಿ ಸೇರಿದಂತೆ ಎಲ್ಲ ರೀತಿಯ ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದ್ದು, ದೇಶದ ಬೆನ್ನೆಲುಬಾದ ರೈತರ ಚಟುವಟಿಕೆಗಳಿಗೆ ಯಾವುದೇ ತೊಂದರೆ ಇಲ್ಲ. ನಾಡಿನ ಅನ್ನದಾತನಾದ ರೈತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮ ವಹಿಸಬೇಕು. ಯಾವುದೇ ರೀತಿಯ ರೈತ ಚಟುವಟಿಕೆಗಳಿಗೆ ಅಡ್ಡಿಯಾಗಬಾರದು ಎಂದರು.

     ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ಎಲ್ಲರನ್ನೂ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜನ್‍ಧನ್ ಖಾತೆಗೆ 500 ರೂ, ಕಿಸಾನ್ ಸಮ್ಮಾನ್ ಖಾತೆಗೆ 2000 ರೂ., ಉಜ್ವಲ ಯೋಜನೆಯಡಿ ಮೂರು ತಿಂಗಳು ಉಚಿತ ಅನಿಲ, 2 ತಿಂಗಳ ಪಡಿತರ ಸೇರಿದಂತೆ ಅನೇಕ ಸವಲತ್ತು ನೀಡಿದ್ದು, ದಾನಿಗಳೂ ಕೂಡ ಕಿಟ್‍ಗಳನ್ನು ನೀಡುತ್ತಿದ್ದಾರೆ. ಈ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಿದರೆ ಮಾತ್ರ ರಕ್ಷಣೆ ಸಾಧ್ಯವಾಗುತ್ತದೆ. ಸಾಕಷ್ಟು ಕೋವಿಡ್ ಪರೀಕ್ಷೆಗಳಾಗುತ್ತಿಲ್ಲ. ಟೆಸ್ಟ್ ಕಿಟ್ಸ್‍ಗಳಿಗೆ ವ್ಯವಸ್ಥೆ ಮಾಡಿಕೊಂಡು ಪರೀಕ್ಷೆಗೆ ಹೆಚ್ಚಿನ ಒತ್ತು ನೀಡಬೇಕೆಂದರು.

    ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ಕೊರೊನಾ ಹಿನ್ನೆಲೆ ಜರ್ಮನಿಯಲ್ಲಿ ಪ್ರತಿ ಮನೆಗಳಿಗೆ ವೈದ್ಯರು ತೆರಳಿ ಕೋವಿಡ್ ಪರೀಕ್ಷೆ ಮಾಡುತ್ತಿದ್ದಾರೆ. ಇದೇ ರೀತಿ ದಾವಣಗೆರೆಯಲ್ಲೂ ಪ್ರತಿ ಮನೆಗೆ ತೆರಳಿ ಪರೀಕ್ಷೆ ಕೈಗೊಂಡರೆ ಉತ್ತಮ. ತಮ್ಮ ವತಿಯಿಂದ ವೈದ್ಯರು ಮತ್ತು ಶುಶ್ರೂಷಕರನ್ನು ಒದಗಿಸಲಾಗುವುದು. ಆದರೆ, ಸರ್ಕಾರದಿಂದ ಕಿಟ್ಸ್‍ಗಳ ವ್ಯವಸ್ಥೆ ಮಾಡಬೇಕು. ಹೀಗೆ ಎಲ್ಲರಿಗೆ ಪರೀಕ್ಷೆ ಮಾಡುವ ಮೂಲಕ ದೇಶಕ್ಕೇ ನಮ್ಮ ಜಿಲ್ಲೆ ಮಾದರಿಯಾಗಬೇಕೆಂದು ಆಶಯ ವ್ಯಕ್ತಪಡಿಸಿದರು.

      ವಿಧಾನ ಪರಿಷತ್ ಶಾಸಕ ಅಬ್ದುಲ್ ಜಬ್ಬಾರ್ ಮಾತನಾಡಿ, ದಾವಣಗೆರೆಯ ಹಿಂದುಳಿದ ಬಡಾವಣೆವೊಂದರಲ್ಲಿ ಆಂಬುಲೆನ್ಸ್ ಬರೋವಷ್ಟರಲ್ಲಿ ಹೆರಿಗೆಯಾದ ಪ್ರಕರಣ ನಡೆದಿದ್ದು, ವಾಹನ ವ್ಯವಸ್ಥೆ ಇಲ್ಲದೇ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಸಮಸ್ಯೆಯಾಗುತ್ತಿದೆ. ಆದ್ದರಿಂದ ಪ್ರತಿ ವಾರ್ಡುವಾರು ಒಂದೊಂದು ವಾಹನ ವ್ಯವಸ್ಥೆ ಮಾಡಬೇಕು ಹಾಗೂ ಸ್ಲಂ ಗಳಲ್ಲಿರುವ ಬಿಪಿ, ಶುಗರ್ ಕಾಯಿಲೆಯವರಿಗೆ ಮಾತ್ರೆಗಳನ್ನು ಪೂರೈಸಬೇಕು ಎಂದರು.

    ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ತರಕಾರಿ, ಹಣ್ಣು, ಕಿರಾಣಿ ಅಂಗಡಿಗಳ ವ್ಯವಸ್ಥೆ ಸಮರ್ಪಕವಾಗಿ ಮಾಡಲಾಗಿದೆ. ರೈತರ ಯಾವುದೇ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ. ಗ್ರಾಮೀಣ ಭಾಗದಲ್ಲೂ ಟಾಸ್ಕ್‍ಪೋರ್ಸ್ ಸಮಿತಿ ರಚಿಸಿ ಸಕ್ರಿಯ ಸರ್ವೆಲೆನ್ಸ್ ಕ್ರಮ ಕೈಗೊಳ್ಳಲಾಗುತ್ತಿದೆ. ಹೊರ ಜಿಲ್ಲೆಗಳಿಂದ ಬಂದವರನ್ನು ಕ್ವಾರಂಟೈನ್ ಮಾಡಿ ಕ್ರಮ ಕೈಗೊಳ್ಳಲಾಗಿದೆ ಎಂದರು.ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಮತ್ತು ಕಂಟೈನ್‍ಮೆಂಟ್ ಪ್ಲಾನ್ ಬಗ್ಗೆ ಪಿಪಿಟಿ ಪ್ರದರ್ಶನದ ಮೂಲಕ ಮಾಹಿತಿ ನೀಡಿದರು.

    ಸಭೆಯಲ್ಲಿ ಶಾಸಕರಾದ ಎಸ್.ಎ.ರವೀಂದ್ರನಾಥ್, ಎಂ.ಪಿ.ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪ, ಪ್ರೊ.ಲಿಂಗಣ್ಣ, ಎಸ್.ವಿ.ರಾಮಚಂದ್ರಪ್ಪ, ಜಿ.ಪಂ. ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ, ಪಾಲಿಕೆ ಮಹಾಪೌರ ಬಿ.ಜಿ.ಅಜಯ್‍ಕುಮಾರ್ ಎಸ್.ಪಿ ಹನುಮಂತರಾಯ, ಜಿ.ಪಂ.ಸಿಇಓ ಪದ್ಮಾ ಬಸವಂತಪ್ಪ, ಎಡಿಸಿ ಪೂಜಾರ ವೀರಮಲ್ಲಪ್ಪ, ಎಸಿ ಮಮತಾ ಹೊಸಗೌಡರ್, ಡಿಹೆಚ್‍ಓ ಡಾ.ರಾಘವೇಂದ್ರ ಸ್ವಾಮಿ, ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link