ರೋಗಗ್ರಸ್ತ ಜಿಲ್ಲಾಸ್ಪತ್ರೆಗೆ ಮೊದಲು ಚಿಕಿತ್ಸೆ ನೀಡಿ

ದಾವಣಗೆರೆ

       ಇಲ್ಲಿನ ಜಿಲ್ಲಾ ಚಿಗಟೇರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉಚಿತ ಔಷಧಿ ವಿತರಿಸುವ ಬದಲು ಹೊರಗಡೆ ಚೀಟಿ ಬರೆದುಕೊಡಲಾಗುತ್ತಿದೆ. ಲಿಫ್ಟ್ ಕೆಟ್ಟು ಮೂರು ವರ್ಷವಾದರೂ ಅದನ್ನು ದುರಸ್ತಿ ಗೊಳಿಸಿಲ್ಲ. ಇದೇ ಆವರಣದಲ್ಲಿರುವ ಹೆರಿಗೆ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಯಂತ್ರ ಇಲ್ಲ. ಹೀಗೆ ಹತ್ತು ಹಲವು ಸಮಸ್ಯೆಗಳಿಂದ ಬಳಲುತ್ತಿರುವ ರೋಗಗ್ರಸ್ತ ಆಸ್ಪತ್ರೆಗೆ ಮೊದಲು ಚಿಕಿತ್ಸೆ ನೀಡಬೇಕೆಂದು ಶಾಸಕ ಎಸ್.ಎ.ರವೀಂದ್ರನಾಥ್ ಸೂಚಿಸಿದರು.

        ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ವಿವಿಧ ಇಲಾಖೆಗಳ ಕಾಮಗಾರಿ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲಾಸ್ಪತ್ರೆ ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದ್ದರೂ ಸಹ ಆಸ್ಪತ್ರೆಯ ವೈದಕೀಯ ಅಧೀಕ್ಷಕಿ ಡಾ.ನೀಲಾಂಭಿಕೆ ಅವುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸದಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

       ದಾವಣಗೆರೆಯ ಜಿಲ್ಲಾ ಚಿಗಟೇರಿ ಸಾರ್ವಜನಿಕ ಆಸ್ಪತ್ರೆಗೆ ಕೇವಲ ನಮ್ಮದೊಂದೇ ಜಿಲ್ಲೆಯ ರೋಗಿಗಳು ಬರುವುದಿಲ್ಲ. ಸುತ್ತಮುತ್ತಲ ಜಿಲ್ಲೆಯವರು ಸಹ ಬರುತ್ತಾರೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರಿಯಾದ ಸೌಲಭ್ಯ ಹಾಗೂ ಚಿಕಿತ್ಸೆ ನೀಡದಿದ್ದರೆ, ನಮ್ಮನ್ನು ಶಪಿಸುತ್ತಾರೆಂದು ಅಸಮಾಧಾನ ವ್ಯಕ್ತಪಡಿಸಿದ ರವೀಂದ್ರನಾಥ್, ಉಚಿತ ಔಷಧೋಪಚಾರ ನೀಡಲು ವ್ಯವಸ್ಥೆ ಇದ್ದರೂ ಸಹ ಕೆಲ ವೈದ್ಯರು ಹೊರಗಡೆ ಚೀಟಿ ಬರೆದು ಕೊಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

       ಇದಕ್ಕೆ ಉತ್ತರಿಸಿದ ಆಸ್ಪತ್ರೆಯ ಅಧೀಕ್ಷಕಿ ಡಾ.ನೀಲಾಂಭಿಕೆ ಮಾತನಾಡಿ, ಸರ್ಕಾರ ಕಳೆದ ನಾಲ್ಕು ತಿಂಗಳುಗಳಿಂದ ಆಸ್ಪತ್ರೆಗೆ ಔಷಧಿ, ಮಾತ್ರೆಗಳನ್ನು ಪೂರೈಸಿಲ್ಲ. ಹೀಗಾಗಿ ಆರೋಗ್ಯ ರಕ್ಷಾ ಸಮಿತಿಯಲ್ಲಿರುವ ಅನುದಾನದಲ್ಲಿ ನಾವೇ ಔಷಧಿ, ಮಾತ್ರೆಗಳನ್ನು ನಿರ್ವಹಣೆ ಮಾಡುತ್ತಿದ್ದು, ಸಧ್ಯ ನಾವು ಸಿರೇಂಜ್, ಇಂಜೆಕ್ಷನ್, ರ್ಯಾಬೀಸ್ ಸೇರಿದಂತೆ ಅಗತ್ಯ ಔಷಧಿಗಳನ್ನೂ ಈ ಸಮಿತಿಯ ಹಣದಲ್ಲೇ ಖರೀದಿಸಿ ವಿತರಿಸುತ್ತಿದ್ದೇವೆ ನಮ್ಮಲ್ಲಿ ಸಿಗದ ಔಷಧಿಗಳನ್ನು ಮಾತ್ರ ಹೊರಗೆ ಬರೆದು ಕೊಡಲಾಗುತ್ತಿದೆ. ಇದು ನಿಲ್ಲಬೇಕಾದರೆ, ಸರ್ಕಾರ ಸಮರ್ಪಕವಾಗಿ ಔಷಧಿಗಳನ್ನು ಪೂರೈಸಬೇಕೆಂದು ಸಮರ್ಥಿಸಿಕೊಂಡರು.

        ಶಾಸಕ ಎಸ್.ಎ.ರವೀಂದ್ರನಾಥ್ ಮಾತನಾಡಿ, ಈ ಜಿಲ್ಲಾಸ್ಪತ್ರೆಯ ಆವರಣದಲ್ಲಿಯೇ ಇರುವ ಹೆರಿಗೆ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಸೌಲಭ್ಯವಿಲ್ಲ. ಹೀಗಾಗಿ ಗಭೀಣಿಯರು ಹೆರಿಗೆ ಆಸ್ಪತ್ರೆಯಿಂದ ಸಿಜಿ ಆಸ್ಪತ್ರೆಗೆ ಬಂದು ಹೋಗಬೇಕಾದ ಪರಿಸ್ಥಿತಿ ಇದೆ. ಹೆಣ್ಣು ಮಕ್ಕಳು, ಅದರಲ್ಲೂ ಗರ್ಭೀಣಿಯರನ್ನು ಹೀಗೆ ಓಡಾಡಿಸುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದ ಅವರು, ಮೊದಲು ಹೆರಿಗೆ ಆಸ್ಪತ್ರೆಗೊಂದು ಸ್ಕ್ಯಾನಿಂಗ್ ಯಂತ್ರ ಅಳವಡಿಸಿ ಗರ್ಭೀಣಿಯರಿಗೆ ಆಗುತ್ತಿರುವ ಸಮಸ್ಯೆಯನ್ನು ಸರಿಪಡಿಸಬೇಕೆಂದು ತಾಕೀತು ಮಾಡಿದರು.
ಇದಕ್ಕೆ ಪ್ರತಿಕ್ರಯಿಸಿದ ಅಧೀಕ್ಷಕಿ ಡಾ.ನೀಲಾಂಭಿಕೆ, ನಮ್ಮಲ್ಲಿ ಸ್ಕ್ಯಾನಿಂಗ್ ಯಂತ್ರಗಳಿಗೆ ಕೊರತೆ ಇಲ್ಲ. ಹೀಗಾಗಿ ಜಿಲ್ಲಾ ಆಸ್ಪತ್ರೆಯಿಂದ ಹೆರಿಗೆ ಆಸ್ಪತ್ರೆಗೆ ಸ್ಕ್ಯಾನಿಂಗ್ ಯಂತ್ರ ಕಳುಹಿಸಿಕೊಡುತ್ತೇವೆ ಎಂದು ಹೇಳಿದರು.

       ಇದರಿಂದ ಕುಪಿತರಾದ ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ, ಯಂತ್ರ ಇದ್ದರೂ ಇದುವರೆಗೆ ಏಕೆ ನೀಡಿಲ್ಲ. ಇನ್ನೂ 10 ದಿನಗಳಲ್ಲಿ ಹೆರಿಗೆ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ ಯಂತ್ರ ಇರಬೇಕು. ಅಲ್ಲಿಗೆ ಪ್ರತಿದಿನ ರೇಡಿಯಾಲಿಜಿಷ್ಟ್ ಓಡಾಡುವಂತೆ ಕ್ರಮ ವಹಿಸಬೇಕೆಂದು ಸೂಚಿಸಿದರು.

        ಆಸ್ಪತ್ರೆಯಲ್ಲಿನ ಲಿಫ್ಟ್ ಕೆಟ್ಟು ಮೂರು ವರ್ಷ ಕಳೆದರೂ ದುರಸ್ತಿ ಕಾರ್ಯ ಮಾಡಿಸದಿರಲು ಕಾರಣವೇನು? ಎಂದು ಪ್ರಶ್ನಿಸಿದ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ, ಅನುದಾನದ ಕೊರತೆ ಇದ್ದರೆ, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಜಿಲ್ಲಾಡಳಿತ ಗಮನಕ್ಕೆ ತರಬೇಕೆಂದು ಸೂಚಿಸಿದರು.

         ಇದಕ್ಕೆ ಪ್ರತಿಕ್ರಯಿಸಿದ ಅಧೀಕ್ಷಕಿ ನೀಲಾಂಬಿಕೆ, ಲಿಫ್ಟ್ ಸರಿ ಪಡಿಸುವ ವಿಚಾರವಾಗಿ ಮೂರು ಬಾರಿ ಟೆಂಡರ್ ಕರೆಯಾಗಿದೆ ಆದರೆ ಟೆಂಡರ್ ಯಾರೂ ಪಡೆದಿಲ್ಲ. ಈಗ ಮತ್ತೊಮ್ಮೆ ಟೆಂಡರ್ ಕರೆಯಲಾಗಿದ್ದು, ಜೂ.27ಕ್ಕೆ ಟೆಂಡರ್ ಆರಂಭಗೊಳ್ಳಲಿದೆ ಎಂದರು.
ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇಲ್ಲ. 25 ಸ್ಟಾಫ್ ನರ್ಸ್‍ಗಳ ಕೊರತೆಯಿದೆ. ಆಸ್ಪತ್ರೆಯಲ್ಲಿ ಸೋರಿಕೆಯಾಗುತ್ತಿದ್ದ ಕೊಠಡಿಗಳನ್ನು ಈಗಾಗಲೇ ದುರಸ್ತಿಪಡಿಸಲಾಗಿದೆ.

         ಆಸ್ಪತ್ರೆಯಲ್ಲಿ ಗ್ರೂಪ್-ಡಿ ನೌಕರರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲದ ಪರಿಣಾಮ ಅಂತಹ ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದು ಹಾಕುವಂತೆ ಏಜೆನ್ಸಿಗಳಿಗೆ ಪತ್ರ ಬರೆಯಲಾಗಿದೆ ಎಂದು ಮಾಹಿತಿ ನೀಡಿದರು.ಸಭೆಯಲ್ಲಿ ಪಾಲಿಕೆ ಆಯುಕ್ತ ವೀರೇಂದ್ರ ಕುಂದುಗೋಳ, ಸ್ಮಾರ್ಟ್‍ಸಿಟಿ ಯೋಜನೆಯ ಹಿರಿಯ ಅಧಿಕಾರಿ ಸತೀಶ್, ಡೂಡಾ ಆಯುಕ್ತ ಆದಪ್ಪ ಮತ್ತಿತರೆ ಅಧಿಕಾರಿಗಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ