ಸೇವಾ ಭದ್ರತೆಗೆ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಆಗ್ರಹ

ದಾವಣಗೆರೆ :

      ಸಾರ್ವಜನಿಕ ಆರೋಗ್ಯ ಇಲಾಖೆ ಬಲಗೊಳಿಸಲು ಗುತ್ತಿಗೆ ಪದ್ಧತಿ ರದ್ದು ಮಾಡಿ ನೌಕರರಿಗೆ ಸಮಾನ ವೇತನ, ಸೇವಾ ಭದ್ರತೆ ಕಲ್ಪಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ವೇದಿಕೆಯ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಗುತ್ತಿಗೆ ನೌಕರರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

      ನಗರದ ಜಿಲ್ಲಾ ಚಿಗಟೇರಿ ಆಸ್ಪತ್ರೆ ಆವರಣದಿಂದ ಮೆರವಣಿಗೆ ಹೊರಟ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರು, ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಡಿಸಿ ಕಚೇರಿಗೆ ತೆರಳಿ ಸಂಜೆಯ ವರೆಗೂ ಧರಣಿ ನಡೆಸಿ, ಜಿಲ್ಲಾಧಿಖಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

         ಈ ಸಂದರ್ಭದಲ್ಲಿ ಸಂಘದ ಮುಖಂಡ ಪಿ.ಜಗದೀಶ ಮಾತನಾಡಿ, ಗುತ್ತಿಗೆಯೆಂಬ ಸಂಕೋಲೆಯನ್ನು ಕಳಚಿ, ಹಾಲಿ ಕೆಲಸ ಮಾಡುತ್ತಿರುವವರನ್ನೇ ಘನತೆಯುಳ್ಳ ನಿಯಮಗಳು ಮತ್ತು ವೇತನ ಶ್ರೇಣಿ ಕಲ್ಪಿಸುವಂತೆ ಒತ್ತಾಯಿಸಿ ರಾಜ್ಯದ ಆರೋಗ್ಯ ಇಲಾಖೆಯ 30 ಸಾವಿರ ಗುತ್ತಿಗೆ ನೌಕರರು ಇಂದು ರಾಜ್ಯವ್ಯಾಪಿ ಹೋರಾಟ ನಡೆಸಿದ್ದೇವೆ. ವೇತನ, ಸೇವಾ ಭದ್ರತೆಯಷ್ಟೇ ನಮ್ಮ ಬೇಡಿಕೆಯಾಗಿರದೇ, ದೇಶದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಲಗೊಳ್ಳಬೇಕೆನ್ನುವುದು ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದರು.

       ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಸಹ ಎಲ್ಲರಿಗೂ ಆರೋಗ್ಯವೆಂಬ ಗುರಿ ಮುಟ್ಟಲಾಗಿಲ್ಲ. ಈ ಕಾರಣಕ್ಕೆ ರಾಷ್ಟ್ರೀಯ ಆರೋಗ್ಯ ಮಿಷನ್ ಸಹ ಸ್ಥಾಪನೆಯಾಗಿದೆ. ಅನೇಕ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮವನ್ನೂ ಇದರಡಿ ನಡೆಸಿಕೊಂಡು ಬರಲಾಗುತ್ತಿದೆ. ಸಾರ್ವಜನಿಕ ಆರೋಗ್ಯ ಇಲಾಖೆಯನ್ನು ಮತ್ತಷ್ಟು ಸದೃಢಗೊಳಿಸಬೇಕು. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಎನ್‍ಎಚ್‍ಎಂ ಮತ್ತು ಎನ್‍ಎಚ್‍ಎಂ ಅಲ್ಲದ ಗುತ್ತಿಗೆ ನೌಕರರೆಲ್ಲರೂ ಪಣ ತೊಟ್ಟಿದ್ದೇವೆ. ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ನೌಕರರ ಸಂಖ್ಯೆಯೇ ಹೆಚ್ಚಾಗಿದೆ. ಸಾಕಷ್ಟು ಅಪಾಯ ಒಡ್ಡಿಕೊಂಡು ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಆರೋಪಿಸಿದರು.

        ಭದ್ರತೆ ಇಲ್ಲದ ಉದ್ಯೋಗ ಮಾಡುತ್ತಿರುವ ಎಲ್ಲರಿಗೂ ಗುಣಮಟ್ಟದ ಆರೋಗ್ಯ ಸೇವೆ ನೀಡುವುದಾದರೂ ಹೇಗೆ ಸಾಧ್ಯ. ಈ ಹಿನ್ನೆಲೆಯಲ್ಲಿ ಹರಿಯಾಣ ಸರ್ಕಾರದ ಮಾದರಿಯಲಿ ಎನ್‍ಎಚ್‍ಎಂ ನೌಕರರಿಗೆ ಘನತೆ ವೇತನ, ಭದ್ರತೆ ಕ್ರಮ ಜಾರಿಗೊಳಿಸಿದೆ. ದೆಹಲಿ ಸರ್ಕಾರ ಸರ್ಕಾರಿ ಶಾಲೆಗಳ ಅತಿಥಿ ಶಿಕ್ಷಕರಿಗೆ ಉತ್ತಮ ವೇತನ, ಭದ್ರತೆ ಸೇರಿದಂತೆ ಸಾಕಷ್ಟು ಕ್ರಮ ಕೈಗೊಂಡಿದೆ. ಆದರೆ, ನಮ್ಮ ರಾಜ್ಯದಲ್ಲಿ ಮಾತ್ರ ಇವ್ಯಾವ ಸೌಲಭ್ಯವೂ ಇಲ್ಲ ಎಂದು ಆಪಾದಿಸಿದರು.

         ಜೀತ ಪದ್ಧತಿಯ ಬದಲಾದ ರೂಪವಾದ ಗುತ್ತಿಗೆ ಪದ್ಧತಿಯೇ ಒಂದು ಅಸಂವಿಧಾನಿಕ ವ್ಯವಸ್ಥೆ. ತಮ್ಮ ದುಡಿಯುವ ಆಯಸ್ಸಿನ ಬಹು ಭಾಗವನ್ನು ಇಲಾಖೆಯೊಂದರಲ್ಲಿ ಗುತ್ತಿಗೆ ನೌಕರರಾಗಿ ದುಡಿದು, ಒಂದು ದಿನ ಇದ್ದಕ್ಕಿದ್ದಂತೆ ಇಲಾಖೆಗೆ ಸಂಬಂಧವೇ ಇಲ್ಲದಂತೆ ಹೊರದೂಡಲ್ಪಡುವ ಅಮಾನವೀಯ ಪದ್ಧತಿ ಇದು. ಅದರಲ್ಲೂ ಮಾದರಿ ಉದ್ಯೋಗದಾತ ಆಗಿರಬೇಕಾದ ಸರ್ಕಾರಿ ಇಲಾಖೆಗಳಲ್ಲೇ ಈ ರೀತಿ ಇರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೂ ಮಾರಕವಾಗಿದೆ ಎಂದು ದೂರಿದರು.

        ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಪದ್ಧತಿಯನ್ನೇ ರದ್ದು ಮಾಡಿ ಎಲ್ಲಾ ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಕಲ್ಪಿಸಬೇಕು. ಕೆಲಸದ ಸ್ಥಳದಲ್ಲಿ ಘನತೆಯನ್ನು ಖಾತರಿ ಮಾಡಬೇಕು. ತಾರತಮ್ಯ ರಹಿತ ಸಮಾನ ವೇತನ ನೀಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿದರು.

        ಪ್ರತಿಭಟನೆಯ ನೇತೃತ್ವವನ್ನು ಹಿರಿಯ ವಕೀಲ ಅನೀಸ್ ಪಾಷಾ, ಉಷಾ ಕೈಲಾಸದ್, ಉಮೇಶ, ಜನಶಕ್ತಿ ಸಂಘಟನೆಯ ಸತೀಶ ಅರವಿಂದ್, ಆದಿಲ್ ಖಾನ್, ಮೋಹನ್, ಹಾಲಸ್ವಾಮಿ, ಲೀಲಾ, ಹನುಮಂತಪ್ಪ, ಸಂತೋಷ ಗೌಡ ಅಣಜಿ, ರವಿಕುಮಾರ ಚನ್ನಗಿರಿ, ಹಬೀದ್, ಮೋಹನ್, ಕರಿಯಪ್ಪ ಮತ್ತಿತರರು ವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link