ನೀರುಕೊಟ್ಟು ಮಣ್ಣು ತೆಗೆದುಕೊಂಡು ಹೋಗಿ : ಕರಿಕೆರೆ ಗ್ರಾಮಸ್ಥರು

ತಿಪಟೂರು

     ನಮ್ಮ ಮಣ್ಣು, ನಮ್ಮ ಹಕ್ಕು ಯಾವುದೇ ಕಾರಣಕ್ಕೂ ನಮ್ಮ ಕೆರೆಯ ಮಣ್ಣನ್ನು ಕೊಡುವುದಿಲ್ಲ ಎಂದು ಅಕ್ರಮವಾಗಿ ಕೆರೆಯ ಮಣ್ಣನ್ನು ತೆಗೆಯಲು ಬಂದ ಗುತ್ತಿಗೆದಾರರ ವಿರುದ್ಧ ಪ್ರತಿಭಟಿಸಿದ ಘಟನೆ ತಾಲ್ಲೂಕಿನ ಕಸಬಾ ಹೋಬಳಿಯ ಕರೀಕೆರೆ ಕೆರೆಯಂಗಳದಲ್ಲಿ ನಡೆಯಿತು.

      ನಮ್ಮ ತಾಲ್ಲೂಕನ್ನು ಮರೆತು ದೂರದ ಜಿಲ್ಲೆಯಾದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆ ಜನತೆಗೆ ನೀರು ಒದಗಿಸಲು ಸಿದ್ದವಾಗುತ್ತಿರುವ ಪ್ರತಿಷ್ಠಿತ, ಬಹುಕೋಟಿ ರೂಗಳ ಎತ್ತಿನ ಹೊಳೆ ನೀರಾವರಿ ಯೋಜನೆಯ ಕೆಲಸವು ಕರಿಕೆರೆ ಗ್ರಾಮದಿಂದ ಸುಮಾರು ಕೇವಲ ಎರಡು- ಮೂರು ಕಿಲೋಮೀಟರ್ ದೂರದಲ್ಲಿ ಯೋಜನೆಯ ಕಾಮಗಾರಿಯು ನಡೆಯುತ್ತಿದ್ದು ಅದಕ್ಕೆ ಬೇಕಾದ ಹೆಚ್ಚುವರಿ ಕಾಮಗಾರಿ ಕೆಲಸಕ್ಕೆ ಕರಿಕೆರೆ ಗ್ರಾಮದ ಕೆರೆಯ ಅಂಗಳದ ಮಣ್ಣನ್ನು ತೆಗೆದು ಕಾಮಗಾರಿಗೆ ಬಳಸಲಾಗುತ್ತಿದ್ದನ್ನು ವಿರೋಧಿಸಿ ಪ್ರತಿಭಟನೆ ಮಾಡಲಾಯಿತು.

         ರೈತರ ವಿರೋಧ : ತಿಪಟೂರು ತಾಲ್ಲೂಕಿನಲ್ಲಿ ಹಾದು ಹೋಗುತ್ತಿರುವ ಎತ್ತಿನ ಹೊಳೆಯ ಯೋಜನೆಯು ಪಕ್ಕದಲ್ಲಿಯೇ ಇರುವ ಕರಿಕೆರೆ ಕೆರೆಗೆ ನೀರನ್ನು ಕೊಡಲು ಸಾಧ್ಯವಾಗದೆ ಈ ಕೆರೆಯ ಮಣ್ಣನ್ನು ತೆಗೆಯುವುದು ಯಾವ ನ್ಯಾಯ ಎನ್ನುವುದು ರೈತರ ವಾದ. ಅಷ್ಟು ಅಲ್ಲದೆ ರೈತರ ತೋಟಗಳಿಗೆ ಮಣ್ಣು ತೆಗೆಯಲು ಬಂದಿದ್ದೇವೆ ಎಂದು ಗುತ್ತಿಗೆದಾರನು ಸುಳ್ಳು ಹೇಳಿದ ಪರಿಣಾಮ ರೈತರು ಪ್ರತಿಭಟಿಸಿದರು.

       ವಿಷಯ ತಿಳಿದು ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿದ ಕಂದಾಯ ಇಲಾಖೆಯ ಅಧಿಕಾರಿಗಳಾದ ಸ್ವಾಮಿ ಹಾಗೂ ಗ್ರಾಮ ಲೆಕ್ಕಿಗರಾದ ರೂಪ ಈ ಹಿಂದೆಯೇ ಮಣ್ಣು ತೆಗೆಯಲು ಬಂದಿದ್ದ ಗುತ್ತಿಗೆದಾರರಿಗೆ ಕೆರೆಯ ಅಂಗಳದಲ್ಲಿರುವ ಮಣ್ಣನ್ನು ಯಾವುದೇ ಕಾರಣಕ್ಕೂ, ಅನುಮತಿಯಿಲ್ಲದೆ ತೆಗೆಯಬಾರದು ಎಂದು ಸೂಚನೆಯನ್ನು ನೀಡಿದ್ದೆವು ಎಂದರು. ನಂತರ ಸ್ಥಳಕ್ಕೆ ಆಗಮಿಸಿದ ಹೊನ್ನವಳ್ಳಿ ಪೊಲೀಸ್ ಅಧಿಕಾರಿಗಳು ಕಂದಾಯ ಇಲಾಖೆಯ ಅಧಿಕಾರಿಗಳ ಮೂಲಕ ಸೂಚನೆ ಕೊಟ್ಟರು ಸಹ ಲೆಕ್ಕಸದೆ ಮಣ್ಣು ತೆಗೆಯಲು ಬಂದಿದ್ದ ಗುತ್ತಿಗೆದಾರರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

       ಮಣ್ಣು ತೆಗೆದರೆ ಪರಿಣಾಮ : ಸುಮಾರು ಮೂರು ನಾಲ್ಕು ವರ್ಷಗಳ ಹಿಂದೆ ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿ ಕೆರೆಯಲ್ಲಿ ಅತಿ ಹೆಚ್ಚು ನೀರು ಸಂಗ್ರಹವಾಗಲಿ ಎಂದು ಕೆರೆಯ ಮಣ್ಣನ್ನು ತೆಗೆದ ಪರಿಣಾಮ ಅಲ್ಲಿನ ಸುಮಾರು ಐದಾರು ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲಾ ತೆಂಗಿನ ತೋಟಗಳು ಮಣ್ಣಿನ ತೇವಾಂಶವನ್ನು ಕಳೆದು ಕೊಂಡು ಮರಗಳು ಫಲವನ್ನು ಕೊಡದೆ ರೈತರು ನಷ್ಟಕ್ಕೆ ಒಳಗಾಗಿದ್ದಾರೆ.

       ಪ್ರತಿಭಟನೆಯಲ್ಲಿ ಮಾಜಿ ಗ್ರಾ.ಪಂ ಸದಸ್ಯ ಪರಮೇಶ್, ಘನಶ್ಯಾಮ್, ನಂದಿನಿ ಡೈರಿಯ ನಿರ್ದೇಶಕ ಮಂಜುನಾಥ್, ಲತೇಶ್, ಶಂಕರಪ್ಪ, ಚನ್ನಬಸವಯ್ಯ, ಓಂಕಾರಮೂರ್ತಿ, ಬಸವರಾಜು, ಫಾಲಾಕ್ಷಮೂರ್ತಿ, ಬಸವರಾಜು ಗ್ರಾಮದ ಗುಡಿಗೌಡರಾದ ರಾಜಶೇಖರ್, ಗಿರೀಶ್, ನವೀನ್, ಯಶವಂತ್ ಮತ್ತಿತರರು ಇದ್ದರು.

        ನಮ್ಮ ಕೆರೆಯ ಮಣ್ಣಿನಿಂದ ನಮ್ಮ ಹಳ್ಳಿಯ ಬದುಕನ್ನು ಕಟ್ಟಿಕೊಂಡು ಜೀವನವನ್ನು ಸಾಗಿಸುತ್ತಿದ್ದೇವೆ. ಎಲ್ಲೂ ದೂರದ ಜನತೆಗೆ ನೀರು ಒದಗಿಸಲು ಹೋಗಿ ನಾವು ಇವರು ತೋಡುವ ಗುಂಡಿಗೆ ಬೀಳಲು ಸಿದ್ದವಿಲ್ಲ ಎಂದು ಕರಿಕೆರೆ ಗ್ರಾಮಸ್ಥರು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link