ದಾವಣಗೆರೆ:
ತಾಲೂಕಿನ ನರಗನಹಳ್ಳಿ ಗ್ರಾಮದ ಹಿರಿಯ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿ (ಮೇ 2ರಂದು) ಬೆಳಿಗ್ಗೆ 11 ಗಂಟೆಗೆ ನರಗನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಲೇಖಕ ಪ್ರಕಾಶ್ ಕೊಡಗನೂರು ಅವರ ನಿರ್ದೇಶನದಲ್ಲಿ ಪಠ್ಯಾಧಾರಿತ ‘ಗ್ಲೋಕಲ್’ ರಂಗ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಹಿರಿಯ ವಕೀಲ್ ಎಲ್.ಹೆಚ್. ಅರುಣಕುಮಾರ್ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರಂಗ ಪ್ರದರ್ಶನವನ್ನು ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕ ಸಿ.ಬಸವಲಿಂಗಯ್ಯ ಉದ್ಘಾಟಿಸಲಿದ್ದಾರೆ. ಹಿರಿಯ ವಿದ್ಯಾರ್ಥಿ ಸಂಘದ ಪ್ರತಿನಿಧಿ ಎನ್.ಆರ್.ಸೌಮ್ಯ ಅಧ್ಯಕ್ಷತೆ ವಹಿಸಿಕೊಳ್ಳಲಿದಾರೆ. ಮುಖ್ಯ ಅತಿಥಿಗಳಾಗಿ ಲಯನ್ಸ್ ಜಿಲ್ಲಾ ಸಂಯೋಜಕ ವಾಸುದೇವರಾಯ್ಕರ್, ಕನ್ನಡ ಮತ್ತು ಸಂಸ್ಕತಿ ಇಲಾಖೆ ನಿರ್ದೇಶಕ ಕುಮಾರ ಬೆಕ್ಕೇರಿ, ಜೆಎಚ್ ಪಟೇಲ್ ಕಾಲೇಜಿನ ದೊಗ್ಗಳ್ಳಿಗೌಡ್ರು ಪುಟ್ಟರಾಜು, ವಿಜ್ಞಾನ ಸಂಪನ್ಲೂಲ ವ್ಯಕ್ತಿ ಎಂ.ಟಿ. ಶರಣಪ್ಪ ಮತ್ತಿತರರು ಭಾಗವಹಿಸಲಿದ್ದಾರೆಂದು ಮಾಹಿತಿ ನೀಡಿದರು.
ಲೇಖಕ ಪ್ರಕಾಶ್ ಕೊಡಗನೂರು ಮಾತನಾಡಿ, ತಾವು 1998ರಿಂದಲೂ ನರಗನಹಳ್ಳಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಇಂಗ್ಲೀಷ್, ವಿಜ್ಞಾನ ಹಾಗೂ ಗಣಿತ ಕಬ್ಬಿಣದ ಕಡಲೆಯಾಗಿ ಪರಿಣಮಿಸಿರುತ್ತದೆ. ನಾನು ಇಂಗ್ಲಿಷ್ ವಿಷಯದ ಮೇಲೆ ಪಾಠ ಮಾಡಲು ಮುಂದಾಗ, ಅಲ್ಲಿಯ ವಿದ್ಯಾರ್ಥಿಗಳಲ್ಲಿ ಲರ್ನಿಂಗ್ ಹಾಗೂ ಸ್ಪೀಕಿಂಗ್‍ನಲ್ಲಿ ಕೊರತೆ ಇರುವುದು ಗಮನಿಸಿದೆ. ತದ ನಂತರ ಮಕ್ಕಳೊಂದಿಗೆ ಸ್ನೇಹಿತನಾಗಿ ಬೆರೆತು, ಕಲಿಸಲಾರಂಭಿಸಿದೆ. ನಂತರ ಪಠ್ಯಕ್ಕೆ ಸಂಬಂಧಿಸಿದಂತೆ ಚಿಕ್ಕ, ಚಿಕ್ಕ ನಾಟಕ ಬರೆದು, ಆವಾಭಾವದೊಂದಿಗೆ ಕಲಿಸಲು ಆರಂಭಿಸಿದೆ. ತದ ನಂತರ ಇಂಗ್ಲಿಷ್ ಡೈಲಾಗ್ ಕಲಿಸಿದೆ. ತದನಂತರ ಎಲ್ಲಾ ಪಾಠ-ಪದ್ಯಗಳನ್ನು ಅಭಿನಯ ಪ್ರಕಾರದಲ್ಲಿ ಕಲಿಸಿದೆ. ಇದೆಲ್ಲದರ ಪರಿಣಾಮ ಇಂದು ನಮ್ಮ ಶಾಲೆಯಲ್ಲಿ ಮಕ್ಕಳು ಸುಲಲಿತವಾಗಿ ಇಂಗ್ಲಿಷ್ ಮಾತನಾಡುವ ವಾತಾವರಣ ಸೃಷ್ಟಿಯಾಗಿದೆ ಎಂದರು.
ಈಗಾಗಲೇ ಹಲವು ಬಾರಿ ಕಥಾಭಿನಯ, ವಾಚನಾಭಿನಯ, ಪಾತ್ರಾಭಿನಯವನ್ನು ಆಯೋಜಿಸುವ ಮೂಲಕ ಯಶಸ್ವಿಯಾಗಿದ್ದೇವೆ. ಅದೇರೀತಿ ಈ ಬಾರಿ ಗ್ಲೋಬಲ್ ಭಾಷೆಯಾಗಿರುವ ಇಂಗ್ಲಿಷ್‍ಗೆ, ಲೋಕಲ್ ಸೌಂಡ್ ನೀಡುವ ಮಕ್ಕಳಿಂದ ಗ್ಲೋಕಲ್ ಪಠ್ಯಾಧಾರಿತ ರಂಗ ಪ್ರದರ್ಶನ ಏರ್ಪಡಿಸಲಾಗಿದ್ದು, ಇದರಲ್ಲಿ ನಾಲ್ಕರಿಂದ ಏಳನೇ ತರಗತಿಯ ವರೆಗಿನ 35 ವಿದ್ಯಾರ್ಥಿಗಳು ವಾಚನಾಭಿನಯ, ಕಥಾಭಿನಯ ಹಾಗೂ ಪಾತ್ರಾಭಿನಯ ಕುರಿತಂತೆ 2 ಗಂಟೆಗಳ ಕಾಲ ರಂಗ ಪ್ರದರ್ಶನ ನಡೆಸಿಕೊಡಲಿದ್ದಾರೆಂದು ಅವರು ವಿವರಿಸಿದರು.
5ನೇ ತರಗತಿಯ ವಿಶ್ವಮಿತ್ರ ಪಾಠವನ್ನು 15 ನಿಮಿಷಗಳ ಕಾಲ 8 ಜನ ಮಕ್ಕಳು ವಾಚನಾಭಿಯದ ಮೂಲಕ ಪ್ರಸ್ತುತ ಪಡಿಸಲಿದ್ದಾರೆ. 6ನೇ ತರಗತಿಯ ಜಾಲಿ ಪಿಕ್ನಿಕ್ ಪಠ್ಯವನ್ನು 35 ನಿಮಿಷಗಳ ಕಾಲ ನಮ್ಮ ಶಾಲೆಯ ಮಕ್ಕಳು ಪಾತ್ರಾಭಿನಯದ ಮೂಲಕ ಪ್ರದರ್ಶಿಸಲಿದ್ದಾರೆ. ಅದರಂತೆ 7ನೇ ತರಗತಿಯ ‘ಹಾನೆಸ್ಟಿ ನೆವರ್ ಡೈಸ್’ ಪಠ್ಯವನ್ನು ಮಕ್ಕಳು ಒಂದು ಗಂಟೆ ಕಾಲ ಕಥಾಭಿನಯದ ಮೂಲಕ ಪ್ರಸ್ತುತ ಪಡಿಸಲಿದ್ದಾರೆ. ಇದಕ್ಕೆ ವಸಂತ್ ಹಾಗೂ ರಾಜು ಯಾದವ್ ಸಂಗೀತ ಸಹ ಸಂಯೋಜನೆ ಮಾಡಿದ್ದಾರೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಸಾಹಿತಿ ಸಿರಿಗೆರೆ ನಾಗರಾಜ್, ಹಳೇ ವಿದ್ಯಾರ್ಥಿ ಸಂಘದ ಪ್ರತಿನಿಧಿ ಎಂ.ಪಿ. ನಾಗರಾಜ್ ಹಾಜರಿದ್ದರು.