ಹರಪನಹಳ್ಳಿ,
ಕ್ರಿಯಾ ಯೋಜನೆಯಲ್ಲಿ ಇರುವ ಪ್ರಕಾರ ಕೆರೆಗೆ ನದಿ ನೀರು ತುಂಬಿಸುವ ಬದಲು ಗೋಕಟ್ಟೆಗೆ ನದಿ ನೀರು ತುಂಬಿಸಲು ಮುಂದಾದ ಗುತ್ತಿದಾರರ ಪ್ರಯತ್ನವನ್ನು ತಡೆಯುವಲ್ಲಿ ರೈತ ಸಂಘದವರು ಯಶಸ್ವಿಯಾದ ಘಟನೆ ಪಟ್ಟಣದಲ್ಲಿ ಮಂಗಳವಾರ ಜರುಗಿತು.
ತಾಲೂಕಿನ 50 ಕೆರೆಗಳಿಗೆ ಗಡಿ ಭಾಗದಲ್ಲಿ ಹರಿದಿರುವ ತುಂಗಭದ್ರ ನದಿಯಿಂದ ನೀರು ತುಂಬಿಸುವ ಯೋಜನೆ 227 ಕೋಟಿ ರು.ಗಳಿಗೆ ಸರ್ಕಾರದಿಂದ ಅನುಮೋದನೆ ಗೊಂಡು, ಎಲ್ ಅಂಡ ಟಿ ಕಂಪನಿಯವರಿಗೆ ಕಾಮಗಾರಿ ಕೈಗೊಳ್ಳಲು ಟೆಂಡರ ಸಹ ಆಗಿದೆ.
ಕರ್ನಾಟಕ ನೀರಾವರಿ ನಿಗಮ ನಿಯಮಿತದ ಉಸ್ತುವಾರಿಯಲ್ಲಿ ಕಾಮಗಾರಿಗೆ ಸರ್ವೆ ಕಾರ್ಯ ನಡೆದಿದೆ, ಅದರಲ್ಲಿ ಅರಸನಾಳು ಗ್ರಾಮದ ಕೆರೆ ಸಹ ಒಂದಾಗಿದೆ. ಆದರೆ ಎಲ್ ಅಂಡ ಟಿ ಕಂಪನಿಯ ಕೆಲವರು ಅರಸನಾಳು ಗ್ರಾಮದಲ್ಲಿ ಕೆರೆಗೆ ಬದಲು ಗೋ ಕಟ್ಟೆ ಗೆ ನದಿ ನೀರು ಹರಿಸಲು ಸರ್ವೆ ಮಾಡಿದ್ದಾರೆ.
ಇದನ್ನು ಅರಿತ ಈ ಭಾಗದ ಜಿಲ್ಲಾ ರೈತ ಸಂಘದ ( ಹುಚ್ಚವನಹಳ್ಳಿ ಮಂಜುನಾಥ ಬಣ) ಅಧ್ಯಕ್ಷ ಸಿದ್ದಪ್ಪ ಇತರ ರೈತರು ಸೇರಿ ತಹಶೀಲ್ದಾರ ನಾಗವೇಣಿ ಯವರಿಗೆ ಗುತ್ತಿಗೆದಾರರನ್ನು, ನೀರಾವರಿ ಅಧಿಕಾರಿಗಳನ್ನು ಕರೆಸಿ ಚರ್ಚಿಸಿ ನಮಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಮನವಿ ಮಾಡಿದ್ದರು.
ಆ ಪ್ರಕಾರ ಮಂಗಳವಾರ ಇಲ್ಲಿಯ ಮಿನಿವಿಧಾನ ಸೌಧದಲ್ಲಿ ತಹಶೀಲ್ದಾರ ನಾಗವೇಣಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಂಗಪ್ಪ, ಎಲ್ ಅಂಡ ಟಿ ಕಂಪನಿಯ ಯೋಜನಾ ವ್ಯವಸ್ಥಾಪಕ ಶರ್ಮ , ರೈತ ಸಂಘದ ಅಧ್ಯಕ್ಷ ಸಿದ್ದಪ್ಪ, ಅರಸನಾಳು ಗ್ರಾಮದ ಮುಖಂಡರಾದ ಗಿರಿರಾಜರೆಡ್ಡಿ, ಭೀಮರೆಡ್ಡಿ, ಶ್ರೀಕಾಂತರೆಡ್ಡಿ ಇತರರು ಪಾಲ್ಗೊಂಡಿದ್ದರು.
ಎಇಇ ಗಂಗಪ್ಪ ಮಾತನಾಡಿ 50 ಕೆರೆಗಳ ನದಿ ನೀರು ಯೋಜನೆಯಲ್ಲಿ ಅರಸನಾಳು ಕೆರೆ ಇದ್ದು, ಯೋಜನೆ ಪ್ರಕಾರ ಅಲ್ಲಿಯ ಕೆರೆಗೆ ನದಿ ನೀರು ತುಂಬಿಸುವ ಕಾಮಗಾರಿ ಆಗಬೇಕು, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದರು.
ಭೀಮರೆಡ್ಡಿ ಅವರು ಹೆಚ್ಚುವರಿ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆ ಪಡೆಯಬೇಕು ಎಂದು ಸಲಹೆ ನೀಡಿದಾಗ ರೈತ ಸಂಘದ ಅಧ್ಯಕ್ಷ ಸಿದ್ದಪ್ಪ ಸೇರಿ ಅನೇಕರು ವಿರೋಧಿಸಿ, ಮೊದಲಿನ ಕ್ರಿಯಾ ಯೋಜನೆ ಪ್ರಕಾರ ಕೆರೆಗೆ ನದಿ ನೀರು ತುಂಬಿಸುವ ಕಾಮಗಾರಿ ಆಗಬೇಕು ಎಂದು ಪಟ್ಟು ಹಿಡಿದರು.
ಸುದೀರ್ಘ ಚರ್ಚೆ ನಡೆದು ಅಂತಿಮವಾಗಿ ನದಿಯಿಂದ ಅರಸನಾಳು ಕೆರೆಗೆ ಯೋಜನೆ ಪ್ರಕಾರ ನೀರು ತುಂಬಿಸುವ ಕಾಮಗಾರಿ ಯನ್ನು ಬುಧವಾರದಿಂದಲೇ ಆರಂಭ ಮಾಡಬೇಕು ಎಂದು ತೀರ್ಮಾನ ಕೈಗೊಳ್ಳಲಾಯಿತು. ರೈತ ಸಂಘದ ತಾಲೂಕು ಅಧ್ಯಕ್ಷ ದ್ಯಾಮಜ್ಜಿ ಹನುಮಂತಪ್ಪ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ