ಬೆಂಗಳೂರು
ವಿದೇಶದಲ್ಲಿ ತಲೆಮರೆಸಿಕೊಂಡಿರುವ ಸ್ವಯಂ ಘೋಷಿತ ದೇವಮಾನವ ಬಿಡದಿಯ ನಿತ್ಯಾನಂದ ಆಶ್ರಮದ ನಿತ್ಯಾನಂದ ಸ್ವಾಮಿಯ ಬಂಧನ ಸನ್ನಿಹಿತವಾಗಿದೆ.ಪರಾರಿಯಾಗಿರುವ ನಿತ್ಯಾನಂತನ ಬಂಧನಕ್ಕೆ ಅಗತ್ಯ ಪ್ರಕ್ರಿಯೆ ಆರಂಭಿಸುವಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ತುರ್ತು ಪತ್ರ ರವಾನೆ ಮಾಡಿದೆ.
ನಿತ್ಯಾನಂದನ ವಿರುದ್ಧ ದೂರು ನೀಡಿದ್ದ ಮಹಿಳೆಯು ಬರೆದ ಪತ್ರವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ನಿತ್ಯಾನಂದನ ಬಂಧನಕ್ಕೆ ಅಸ್ತು ಎಂದಿದ್ದಾರೆ.ನೆರೆರಾಜ್ಯ ತಮಿಳುನಾಡಿನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಸಂಗೀತಾ ತಾಯಿಯಿಂದಲೂ ಪತ್ರ ರವಾನೆಯಾಗಿತ್ತು. ಅಷ್ಟೇ ಅಲ್ಲದೆ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಸಂಗೀತಾ ತಾಯಿ ಜಾನ್ಸಿ ಅವರು ಪತ್ರ ಬರೆದಿದ್ದರು. ಕಳೆದ ತಿಂಗಳು ಈ ಎರಡೂ ಪತ್ರಗಳು ಕೇಂದ್ರ ಗೃಹ ಸಚಿವರ ಕೈಸೇರಿದ್ದವು.
ಪತ್ರಗಳು ಕೈ ಸೇರಿದ ಬಳಿಕ ಪ್ರಕ್ರಿಯೆ ಪ್ರಾರಂಭಿಸಿದ ಕೇಂದ್ರ ಗೃಹ ಇಲಾಖೆ ನಿತ್ಯಾನಂದನ ಬಂಧನಕ್ಕೆ ಅಗತ್ಯ ಪ್ರಕ್ರಿಯೆ ಆರಂಭಿಸಲು ಸೂಚಿಸಿದೆ. ರಾಜ್ಯ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಕೇಂದ್ರ ಸರ್ಕಾರದಿಂದ ಪತ್ರ ಬರೆದಿದ್ದು, ತನಿಖಾ ಎಜೆನ್ಸಿ ಹಾಗೂ ಸರ್ಕಾರದಿಂದ ಅಗತ್ಯ ದಾಖಲೆ ಸಲ್ಲಿಸಲು ಪತ್ರದಲ್ಲಿ ಸೂಚಸಿದ್ದಾರೆ.
ತಮಿಳುನಾಡಿನ ಸಂಗೀತಾ ಅನುಮಾಸ್ಪದ ಸಾವು ಪ್ರಕರಣದಲ್ಲೂ ನಿತ್ಯಾ ಆರೋಪಿಯಾಗಿದ್ದಾನೆ. ಈ ಪ್ರಕರಣವನ್ನ ಸಿಬಿಐ ವಹಿಸುವಂತೆ ಸಂಗೀತಾ ತಾಯಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಈಗಾಗಲೇ ನಿತ್ಯಾ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಕೂಡ ಜಾರಿ ಮಾಡಲಾಗಿದೆ. ವಿದೇಶದಲ್ಲಿ ತಲೆಮರೆಸಿಕೊಂಡಿರುವ ನಿತ್ಯಾನಂದನಿಗೆ ಶಾಕ್ ಕೊಡಲು ಕೇಂದ್ರ ಸರ್ಕಾರ ಕೂಡ ಸಿದ್ಧತೆ ನಡೆಸಿದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.
ಮತ್ತೊಂದು ದೇಶದಲ್ಲಿರುವ ಅಪರಾಧಿ ಅಥವಾ ಆರೋಪಿಯ ಪತ್ತೆಗಾಗಿ ಮತ್ತು ಕುಟುಂಬದ, ವ್ಯವಹಾರ ವಿವಿರಣೆ ಪಡೆಯುದಕ್ಕಾಗಿ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲಾಗುತ್ತದೆ. ಈ ನೋಟಿಸ್ ಹೊರಡಿಸಿದಾಗ ಆರೋಪಿಗೆ ಆಶ್ರಯ ನೀಡಿದ ದೇಶ ಆತನನ್ನು ಬಂಧಿಸಲ್ಲ. ಆದರೆ ಆರೋಪಿ ಅಥವಾ ಅಪರಾಧಿಯ ಕುರಿತು ವಿವರಣೆ ನೀಡುತ್ತದೆ.
