ಗಾಲ್ಪ್ ಕ್ಲಬ್ ಇನ್ನು ಮುಂದೆ ಶಾಸಕರ ಕ್ಲಬ್ : ಹೆಚ್ ಡಿ ಆರ್

ಬೆಂಗಳೂರು

        ಕಾನೂನು ಉಲ್ಲಂಘಿಸಿ ನಡೆಯುತ್ತಿರುವ ರಾಜಧಾನಿಯ ಪ್ರತಿಷ್ಟಿತ ಗಾಲ್ಪ್ ಕ್ಲಬ್ ಅನ್ನು ಮರಳಿ ಸರ್ಕಾರದ ವಶಕ್ಕೆ ಪಡೆದು ಅದನ್ನು ಶಾಸಕರ ಕ್ಲಬ್ ಆಗಿ ಪರಿವರ್ತಿಸುವುದಾಗಿ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.

        ಇಂದಿಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಬಳಿ ಮಾತನಾಡಿದ ಅವರು, ಗಾಲ್ಪ್ ಕ್ಲಬ್ ಜಾಗ ಸರ್ಕಾರದ್ದು. ಅವರಿಗೆ ಜಾಗ ಕೊಡುವಾಗ ಹಾಕಿದ ಷರತ್ತುಗಳನ್ನು ಉಲ್ಲಂಘಿಸಿ ಅದನ್ನು ನಡೆಸುತ್ತಿದ್ದಾರೆ. ಹೀಗಾಗಿ ಅವರಿಗೆ ನೋಟೀಸ್ ನೀಡಲಾಗಿದ್ದು ಮತ್ತೆ ನೋಟೀಸ್ ನೀಡಿ ಅದನ್ನು ವಶಕ್ಕೆ ಪಡೆಯಲಾಗುವುದು ಎಂದರು.

         ಅಲ್ಲಿ ಬಾರ್ ನಡೆಸುವಂತಿಲ್ಲ, ಹೋಟೆಲ್ ನಡೆಸುವಂತಿಲ್ಲ, ಕಟ್ಟಡಗಳನ್ನು ನಿರ್ಮಿಸುವಂತಿಲ್ಲ.ಆದರೆ ಈ ಎಲ್ಲ ಷರತ್ತುಗಳನ್ನು ಗಾಲ್ಪ್ ಕ್ಲಬ್ ಉಲ್ಲಂಘಿಸುತ್ತಿದೆ.ಹೀಗಾಗಿ ಅಕ್ಟೋಬರ್ ತಿಂಗಳಲ್ಲೇ ಅದಕ್ಕೆ ನೋಟೀಸ್ ನೀಡಲಾಗಿದ್ದು ಈಗ ಮರಳಿ ನೋಟೀಸ್ ನೀಡುತ್ತೇವೆ.ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಇಲಾಖೆಯ ಕಾರ್ಯದರ್ಶಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುತ್ತೇವೆ ಎಂದರು.

        ಶಾಸಕರೂ ಜನರಿಗಾಗಿ ದುಡಿಯುವವರು,ಅವರಿಗೂ ನೆಮ್ಮದಿಯಿಂದ ಕಾಲ ಕಳೆಯಲು ಜಾಗಬೇಕು. ಹೀಗಾಗಿ ಗಾಲ್ಪ್ ಕ್ಲಬ್ ಅನ್ನು ವಶಕ್ಕೆ ಪಡೆದು ಅದನ್ನು ಶಾಸಕರ ಕ್ಲಬ್ ಆಗಿ ಪರಿವರ್ತನೆ ಮಾಡಲಾಗುವುದು, ಪತ್ರಕರ್ತರಿಗೂ ಅಲ್ಲಿ ಸದಸ್ಯತ್ವ ನೀಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.

        ಬ್ರಿಟಿಷರ ಕಾಲದಲ್ಲಿ ಗಾಲ್ಪ್ ಆಡಲೆಂದೇ ಅವರಿಗೆ ಆ ಜಾಗ ನೀಡಲಾಗಿತ್ತು.ಆದರೆ ಈಗ ಗಾಲ್ಪ್ ಜತೆಗೆ ಬಾರ್ ನಡೆಯುತ್ತಿದೆ, ಹೋಟೆಲ್ ನಡೆಯುತ್ತಿದೆ, ಅನಧಿಕೃತವಾಗಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ ಎಂದರು.

         ಈ ಕ್ಲಬ್ ನಲ್ಲಿ ಪ್ರಭಾವಿಗಳಿದ್ದಾರೆ, ಪ್ರಮುಖ ಅಧಿಕಾರಿಗಳು ಸದಸ್ಯರಾಗಿದ್ದಾರೆ. ಹೀಗಿರುವಾಗ ಗಾಲ್ಪ್ ಕ್ಲಬ್ ಅನ್ನು ತೆರವು ಮಾಡಿಸಲು ಸಾಧ್ಯವೇ? ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ರೇವಣ್ಣ, ಇಲಾಖೆಯನ್ನು ಹಲವು ವರ್ಷಗಳ ಕಾಲ ನಡೆಸಿ ಅನುಭವವಿರುವವನು. ಖಾಲಿ ಮಾಡಿಸಬೇಕು. ಮಾಡಿಸಿ ತೋರಿಸುತ್ತೇನೆ ಎಂದು ಹೇಳಿದರು.

ಜ.15 ರಿಂದ ಶುರು

          ಮೈಸೂರು-ಬೆಂಗಳೂರು ನಡುವಣ ದಶಪಥ ರಸ್ತೆಯ ಕಾಮಗಾರಿ ಕಾರ್ಯಕ್ಕೆ ಜನವರಿ ಹದಿನೈದರಂದು ಚಾಲನೆ ಸಿಗಲಿದೆ ಎಂದು ಇದೇ ಸಂದರ್ಭದಲ್ಲಿ ಅವರು ವಿವರಿಸಿದರು.

           ಈಗಾಗಲೇ ಯೋಜನೆಗೆ ಅಗತ್ಯವಾದ ಭೂಮಿಯ ಪೈಕಿ ಶೇಕಡಾ ಎಂಭತ್ತೈದರಷ್ಟನ್ನು ಸ್ವಾಧೀನಪಡಿಸಿಕೊಂಡು ಒದಗಿಸಲಾಗಿದೆ. ಹಾಗೆಯೇ ಇಂಧನ,ಅರಣ್ಯ ಇಲಾಖೆಗಳ ನಿರಾಕ್ಷೇಪಣಾ ಪತ್ರವನ್ನು ನೀಡಲಾಗಿದೆ ಎಂದರು.

          ಇತ್ತೀಚೆಗೆ ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರನ್ನು ಭೇಟಿ ಮಾಡಿದಾಗ ಈ ಕುರಿತು ವಿವರಿಸಲಾಗಿದೆ.ಹಾಗೆಯೇ ಮೈಸೂರು-ಮಡಿಕೇರಿ-ಮಾಣಿ ರಸ್ತೆಯನ್ನು ಇನ್ನೂರೈವತ್ತು ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಯೋಜನೆಯನ್ನು ತ್ವರಿತ ಗತಿಯಲ್ಲಿ ಜಾರಿಗೆ ತರಲು ಮನವಿ ಮಾಡಿಕೊಳ್ಳಲಾಗಿದೆ.

          ಚನ್ನರಾಯಪಟ್ಟಣ-ಮಡಿಕೇರಿ-ಮಾಕುಟ್ಟ ಮಾರ್ಗವಾಗಿ ಕಣ್ಣೂರು ವಿಮಾನ ನಿಲ್ದಾಣವನ್ನು ತಲುಪುವ ರಸ್ತೆಯ ಯೋಜನಾ ವರದಿಯನ್ನು ತಯಾರಿಸಲಾಗುತ್ತಿದ್ದು ಅದಕ್ಕೂ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದರು.

           ತಲಾ ನಾಲ್ಕು ಕೋಟಿ ರೂ ವೆಚ್ಚದಲ್ಲಿ ಒಂದು ಕಿಲೋಮೀಟರ್ ನಂತೆ ಒಟ್ಟು ನೂರಾ ಅರವತ್ತೆಂಟು ಕಿಲೋಮೀಟರು ರಸ್ತೆ ಈ ಯೋಜನೆಯಡಿ ನಿರ್ಮಾಣವಾಗಲಿದೆ ಎಂದು ಅವರು ಸ್ಪಷ್ಟ ಪಡಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap