ಶಿರಾ
ವಿದ್ಯಾರ್ಥಿಯೊಬ್ಬನಿಗೆ ಎರಡೂ ಕಣ್ಣುಗಳಿಲ್ಲ. ಕಣ್ಣು ಕಾಣದಿದ್ದರೂ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.80ರಷ್ಟು ಅಂಕಗಳಿಸಿ, ಕಡು ಬಡತನದಿಂದ ಮುಂದೆ ಓದಲು ಸಾಧ್ಯವಿಲ್ಲ ಎಂದಿದ್ದ ಡಿ.ಕೆ.ಕೋಟೇಶ್ ಎಂಬ ವಿದ್ಯಾರ್ಥಿಯ ಕಷ್ಟಕ್ಕೆ ಮರುಗಿದ ಡಾ.ರಾಜೇಶ್ ಎಂಬುವರು ಆರ್ಥಿಕ ನೆರವಿನ ಜೊತೆ 2 ವರ್ಷದ ಶಿಕ್ಷಣ ವೆಚ್ಚ ಭರಿಸುವ ಭರವಸೆಯನ್ನು ನೀಡಿದ್ದಾರೆ.
ಶಿರಾ ತಾಲ್ಲೂಕಿನ ದ್ವಾರನಕುಂಟೆಯ ಕಣ್ಣಿಲ್ಲದ ಅಂಧ ವಿದ್ಯಾರ್ಥಿ ಕೋಟೇಶ್ 2018-19ನೇ ಸಾಲಿನ 10ನೇ ತರಗತಿಯ ಪರೀಕ್ಷೆಯಲ್ಲಿ ಶೇ.80 ರಷ್ಟು ಅಂಕ ಗಳಿಸಿದ್ದಾನೆ. ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾದೊಡನೆ ಬಡ ವಿದ್ಯಾರ್ಥಿಯ ಮುಂದಿನ ಶೈಕ್ಷಣಿಕ ಭವಿಷ್ಯಕ್ಕೆ ಡಾ.ರಾಜೇಶ್ ಮುಂದಾಗಿದ್ದಾರೆ.
ಚಿತ್ರದುರ್ಗ ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ ಪುತ್ರ ಖ್ಯಾತ ವೈದ್ಯ ಡಾ.ಸಿ.ಎಂ.ರಾಜೇಶ್ ಗೌಡ ವಿದ್ಯಾರ್ಥಿಯ ನೆರವಿಗೆ ಮುಂದಾದ ದಾನಿಗಳಾಗಿದ್ದಾರೆ.
ಶಿರಾ ತಾಲ್ಲೂಕಿನ ದ್ವಾರನಕುಂಟೆ ಕಾಲನಿಯಲ್ಲಿರುವ ಡಿ.ಕೆ.ಕೋಟೇಶನ ಮನೆಗೆ ಬುಧವಾರ ಭೇಟಿ ನೀಡಿದ ಡಾ.ರಾಜೇಶ್, ಕೋಟೇಶನು ಮುಂದಿನ ಶಿಕ್ಷಣ ಪಡೆಯುವ ಬಗ್ಗೆ ಪೋಷಕರೊಂದಿಗೆ ಚರ್ಚಿಸಿದರು. ಆತನ ಪ್ರತಿಭೆಯನ್ನು ಕಂಡು ಸನ್ಮಾನವನ್ನೂ ಮಾಡಿದ ಅವರು, ಈ ಬಗ್ಗೆ ಮಾತನಾಡಿ, ಬಡತನ ಯಾರಿಗೂ ಶಾಶ್ವತವಲ್ಲ. ಜೊತೆಗೆ ಅಂಧತ್ವ ಸಾಧನೆಗೆ ಅಡ್ಡಿಯಾಗುವುದಿಲ್ಲ. ಓದಬೇಕೆಂಬ ಹಂಬಲ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪಿಸುತ್ತದೆ ಎಂದ ಅವರು, ಹುಟ್ಟಿನಿಂದ ಎರಡು ಕಣ್ಣು ಕಾಣದಿದ್ದರೂ ಸಹ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.80 ರಷ್ಟು ಅಂಕ ಪಡೆದಿರುವುದು ಮೆಚ್ಚುವಂತಾದ್ದು ಎಂದರು.
ಈ ಪ್ರತಿಭಾವಂತನ ಬದುಕಿನಲ್ಲಿ ಬೆಳಕು ಚೆಲ್ಲುವ ದೃಷ್ಟಿಯಿಂದ ಕೋಟೇಶ್ ಎಂತಹ ಪ್ರತಿಷ್ಠಿತ ಕಾಲೇಜ್‍ನಲ್ಲಿ ಪಿಯು ಶಿಕ್ಷಣ ಓದಲು ಮುಂದಾಗುತ್ತಾನೋ ಅಥವಾ ಇನ್ನಾವುದೇ ಶಿಕ್ಷಣ ಪಡೆಯಲು ಮುಂದಾದರೆ 2 ವರ್ಷದ ಶೈಕ್ಷಣಿಕ ಖರ್ಚನ್ನು ತಾವೇ ಭರಿಸುವುದಾಗಿ ಭರವಸೆ ನೀಡಿದರು.
ವೃತ್ತಿಯಲ್ಲಿ ವೈದ್ಯರಾದರೂ ಸಹ ಸಮಾಜದಲ್ಲಿನ ಬಡ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ತೋರುತ್ತಿರುವ ಡಾ.ಸಿ.ಎಂ.ರಾಜೇಶ್‍ಗೌಡ ಅವರ ಸೇವೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸಿದರು.ಮಾಜಿ ಜಿಪಂ ಸದಸ್ಯ ಪ್ರಕಾಶ್‍ಗೌಡ, ಮಾಜಿ ಸೈನಿಕ ಸಣ್ಣರಂಗಪ್ಪ, ಶಿಕ್ಷಕ ದ್ವಾರನಕುಂಟೆ ಲಕ್ಷ್ಮಣ್, ಮುಖಂಡರಾದ ಬಾಲೇಗೌಡ, ಬಿ.ಹೆಚ್.ಸುರೇಶ್, ಮೂಡಲಗಿರಿಯಪ್ಪ, ದೊಡ್ಮನೆ ರಂಗನಾಥ್, ಕರೇಕ್ಯಾತನಹಳ್ಳಿ ಮಹೇಂದ್ರ, ತಾವರೆಕೆರೆ ದೇವರಾಜು, ವರದಪುರ ರಾಮಣ್ಣ, ಚಂಗಾವರ ಮಾರಣ್ಣ, ರಘು, ದೇವರಾಜು ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ