ಜೀವ-ಆಸ್ತಿ ಹಾನಿಗೆ ಅವಿವೇಕವೇ ಕಾರಣ

ದಾವಣಗೆರೆ:

     ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಮುಷ್ಕರ, ಪ್ರಾಣ ಕಳೆದುಕೊಳ್ಳುತ್ತಿರುವುದು, ಆಸ್ತಿ ಹಾನಿ ಆಗುತ್ತಿರುವುದಕ್ಕೆ ಮನುಷ್ಯ ವಿವೇಚನಾ ಶಕ್ತಿ ಕಳೆದುಕೊಂಡಿರುವುದೇ ಕಾರಣವಾಗಿದೆ ಎಂದು ಸಾಣೇಹಳ್ಳಿಯ ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿಶ್ಲೇಷಿಸಿದರು.

     ನಗರದ ಕುವೆಂಪು ಕನ್ನಡ ಭವನದಲ್ಲಿ ಬುಧವಾರ ನಡೆದ ಆಗಸ್ಟ್ 1ರಿಂದ 30ರ ವರೆಗೆ ಸಾಣೇಹಳ್ಳಿ ಶ್ರೀಗಳು ನಡೆಸಿದ ‘ನಮ್ಮ ನಡಿಗೆ ಮತ್ತೆ ಕಲ್ಯಾಣದೆಡೆಗೆ’ ಅಭಿಯಾನದಲ್ಲಿ 30 ಕಾರ್ಯಕ್ರಮಗಳಲ್ಲಿ ಶ್ರೀಗಳು ನೀಡಿದ ಆಶೀರ್ವಚನದ ಮುದ್ರಿತ ಕೃತಿ ‘ಕಲ್ಯಾಣದೆಡೆಗೆ’ ಲೋಕಾರ್ಪಣೆ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

     ಮನುಷ್ಯ ವಿವೇಚನ ಶಕ್ತಿ ಕಳೆದುಕೊಂಡಿರುವ ಕಾರಣದಿಂದಲೇ ಕಲ್ಲು ತೂರಾಟ, ಗುಂಡು ಹಾರಿಸುವಂತಹ ದುಷ್ಕøತ್ಯಗಳು ನಡೆಯುತ್ತಿವೆ. ವಿವೇಚನಾ ಶಕ್ತಿ ಇದ್ದಿದ್ದರೆ, ತಾಳ್ಮೆಯಿಂದ ವಿವೇಕದಿಂದ ಪ್ರಸ್ತುತ ಎದುರಾಗಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಿದ್ದರು ಎಂದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶದಲ್ಲಿ ಉಂಟಾಗಿರುವ ಸಮಸ್ಯೆಯ ಕುರಿತು ಪ್ರತಿಕ್ರಯಿಸಿದರು.

     ಶರಣರು ಲೋಕದ ಇಚ್ಛೆಯಂತೆ ನುಡಿದವರು, ನಡೆದವರಲ್ಲ. ಹಾಗಂತ ಲೋಕ ಬಿಟ್ಟವರಲ್ಲ, ಲೋಕದಲ್ಲಿ ಇದ್ದುಕೊಂಡೇ ತಮ್ಮ ಬದುಕು ಕಟ್ಟಿಕೊಳ್ಳುವುದರ ಜತೆಗೆ ಲೋಕದ ಬದುಕು ಕಟ್ಟಿದವರಾಗಿದ್ದಾರೆ ಎಂದು ಸ್ಮರಿಸಿದರು.ಕಾಯಕ ಜೀವಿಗಳಲ್ಲಿಯೇ ಪ್ರಾಮಾಣಿಕತೆ, ನಿಷ್ಠೆ ಹೆಚ್ಚಿರುತ್ತದೆ.

     ಆದರೆ, ಪದವಿ ಪಡೆದವರೆಲ್ಲರೂ ಮುಖವಾಡ ಹಾಕಿಕೊಂಡು ಬದುಕುತ್ತಿರುತ್ತಾರೆ. ಆದ್ದರಿಂದ ಮಕ್ಕಳಿಗೆ 12ನೇ ಶತಮಾನದ ಇತಿಹಾಸ ಕಲಿಸಿಕೊಡುವ ಮೂಲಕ ಅವರ ಬದುಕಿನಲ್ಲಿ ಬೆಳಕು ಮೂಡಿಸಬೇಕಾದ ಜವಾಬ್ದಾರಿ ಪೋಷಕರ ಮೇಲಿದೆ. ಆದರೆ, ಇಂದಿನ ಪೋಷಕರು ಬೆಳಕಿನ ಬದಲಾಗಿ ಮಕ್ಕಳನ್ನು ಕತ್ತಲಿಗೆ ತಳ್ಳುತ್ತಿರುವುದು ವಿಪರ್ಯಾಸ ಎಂದರು.

    30 ದಿನಗಳ ಕಾಲ ನಡೆದ ‘ನಮ್ಮ ನಡಿಗೆ ಮತ್ತೆ ಕಲ್ಯಾಣದೆಡೆ’ ಎಂಬ ಮಹಾಯಾನವು ತಮಗೆ ಸಂತೋಷದ ಜತೆಗೆ ದುಃಖವನ್ನು ತಂದದ್ದೂ ಇದೆ. ಅದರ ಜತೆಗೆ ಆತ್ಮವಿಶ್ವಾಸ, ಆತ್ಮಬಲವನ್ನು ತಂದು ಕೊಟ್ಟಿದೆ. ಆದ್ದರಿಂದಲೇ ಮನುಷ್ಯರನ್ನು ಮತ್ತೆ, ಮತ್ತೆ ಪ್ರೀತಿಸಲು ಸಾಧ್ಯವಾಗಿದೆ. ಏಕೆಂದರೆ, ಪ್ರೀತಿಯಿಂದ ಬೇಕಾದನ್ನು ಸಾಧಿಸಬಹುದು. ಆದರೆ, ದ್ವೇಷದಿಂದ ಏನನ್ನೂ ಸಾಧಿಸಲಾಗದು ಎಂದು ಸೂಚ್ಯವಾಗಿ ನುಡಿದರು.

     ಮನುಷ್ಯ ತನ್ನ ಅಂತರಂಗದಲ್ಲಿ ಬೆಳಕನ್ನು ಕಂಡುಕೊಳ್ಳದಿದ್ದರೆ, ಬದುಕಿನಲ್ಲಿ ಮತ್ತಷ್ಟು ಕತ್ತಲು ವಿಸ್ತಾರಗೊಳ್ಳುತ್ತಾ ಹೋಗುತ್ತದೆ. ಇಂದು ಲೋಕಾರ್ಪಣೆಗೊಂಡ ಕಲ್ಯಾಣದೆಡೆಗೆ ಕೃತಿಯಲ್ಲಿ ತಾವು ಸಂದರ್ಭಕ್ಕೆ ಅನುಗುಣವಾಗಿ, ಸಂದರ್ಭೋಚಿತವಾಗಿ ಆಡಿದ ವಾಕ್ಯಗಳೇ ಇವೆ ಹೊರತು, ಬೇರೆ ಏನನ್ನೂ ಸೇರಿಸಿಲ್ಲ ಎಂದು ಸ್ಪಷ್ಟಪಡಿಸಿದ ಶ್ರೀಗಳು, ಈ ಕೃತಿಯನ್ನು ಓದಿ ಓದುಗರು ಸ್ಪಷ್ಟ ಅಭಿಪ್ರಾಯವನ್ನು ಪತ್ರದ ಮೂಲಕ ಬರೆದುಕಳುಹಿಸಿ ಕೊಡಬಹುದು ಎಂದರು.

     ಕೃತಿ ಬಿಡುಗಡೆ ಮಾಡಿದ ಬೆಂಗಳೂರಿನ ಚಿಂತಕ ಡಾ.ಬಸವರಾಜ ಸಾದರ, ಸಾಣೇಹಳ್ಳಿ ಶ್ರೀಗಳು ಜಂಗಮ ಮೂರ್ತಿಗಳಾಗಿ ಇಡೀ ನಾಡಿನಾದ್ಯಂತ ಕಲ್ಯಾಣ ಕ್ರಾಂತಿಯ ವಿಚಾರಧಾರೆಯನ್ನು ಕೊಂಡೊಯ್ದು ವಿದ್ಯಾರ್ಥಿ-ಯುವಜನರಲ್ಲಿ ಪ್ರಶ್ನೆ ಕೇಳುವ ಮನೋಭಾವ ಬಿತ್ತಿದ ನಮ್ಮ ನಡಿಗೆ ಮತ್ತೆ ಕಲ್ಯಾಣದೆಡೆ ಅಭಿಯಾನವು ಸರ್ವಕಾಲ ಮತ್ತು ಸದಾ ಕಾಲಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ಪ್ರತಿಪಾದಿಸಿದರು.

    ಈ ನಮ್ಮ ನಡಿಗೆ ಮತ್ತೆ ಕಲ್ಯಾಣದೆಡೆಗೆ ಅಭಿಯಾನದಲ್ಲಿ ಶ್ರೀಗಳು ನೀಡಿದ ಸಂದೇಶ ವಾಣಿಯನ್ನು ಇಂದು ಬಿಡುಗಡೆಯಾದ ಕಲ್ಯಾಣದೆಡೆಗೆ ಕೃತಿಯ ಮೂಲಕ ತರಲಾಗಿದೆ. ಕಲ್ಯಾಣದೆಡೆಗೆ ಎಂಬ ಪದವೆ ಅತ್ಯಂತ ಅರ್ಥಗರ್ಭಿತವಾಗಿದ್ದು, ಈ ಕೃತಿಯನ್ನು ಶರಣ ಮತ್ತು ಬಸವ ಪರಂಪರೆ ಹೊಂದಿರುವ ಪ್ರತಿಯೊಬ್ಬರೂ ಓದಲೇಬೇಕಾಗಿದೆ ಎಂದರು.

     ಬಸವಣ್ಣನವರ ವಚನಗಳಲ್ಲಿ ಒಂದಿಷ್ಟು ಸಿಟ್ಟು, ಒಂದಿಷ್ಟು ಪ್ರೀತಿ ಇದ್ದರೂ ಕೊನೆಗೆ ಸಮನ್ವಯತೆಯ ಸಿದ್ಧಾಂತವನ್ನು ಅವು ಪ್ರತಿಪಾದಿಸಲಿವೆ. 12ನೇ ಶತಮಾನದಲ್ಲಿಯೇ ಬಸವಣ್ಣನವರು ಭಾರತೀಯ ಪರಂಪರೆಯಲ್ಲಿ ಇದ್ದ ಮೋಸ ಹಾಗೂ ವಂಚಕ ಗುಣವನ್ನು ಅನಾವರಣಗೊಳಿಸಿದ್ದರು. ಬಸವಾದಿ ಶರಣರು ನಡೆಸಿದ ಕಲ್ಯಾಣ ಕ್ರಾಂತಿಯು ಪ್ರಶ್ನೆ, ಪ್ರತಿಭಟನೆ, ನಿರಾಕರಣೆಗೆ ನಿಲ್ಲದೆ ಪರ್ಯಾಯ ವ್ಯವಸ್ಥೆಯನ್ನು ಸೂಚಿಸುತ್ತದೆ ಅದುವೇ ನಿಜವಾದ ಕ್ರಾಂತಿ ಎಂದು ವ್ಯಾಖ್ಯಾನಿಸಿದರು.

     ಫ್ರೆಂಚ್, ರಷ್ಯನ್ ಕ್ರಾಂತಿಯ ಬಗ್ಗೆ ಬೆಳಕು ಚೆಲ್ಲಿದ ಇತಿಹಾಸಕಾರರು ಇವುಗಳಿಗಿಂತ 900 ವರ್ಷಗಳ ಹಿಂದೆ ನಡೆದ ಕಲ್ಯಾಣ ಕ್ರಾಂತಿಯ ಬಗ್ಗೆ ಬೆಳಕು ಚೆಲ್ಲದಿರುವುದು ಅತ್ಯಂತ ವಿಪರ್ಯಾಸ. ಹೊರಗಿಡುವ ಸಂಸ್ಕøತಿಗೆ ಪ್ರತಿರೋಧ ಒಡ್ಡಿದ ಬಸವಣ್ಣನವರು ಎಲ್ಲರನ್ನು ಒಳಗೊಳ್ಳುವ ಸಂಸ್ಕೃತಿಯನ್ನು ಪ್ರತಿಪಾದಿಸಿದ್ದರು ಎಂದರು.

     ಯಾರ್ಯಾರೋ ಮತ ಯಾಚನೆಗಾಗಿ ನಡೆಸುವ ಯಾತ್ರೆ, ಜಾತ್ರೆಯ ಸಂದರ್ಭದಲ್ಲಿ ಸಾಣೇಹಳ್ಳಿ ಶ್ರೀಗಳು ನಡೆಸಿದ ನಮ್ಮ ನಡಿಗೆ ಮತ್ತೆ ಕಲ್ಯಾಣದೆಡೆಗೆ ಯಾತ್ರೆಯು ಫಲಪ್ರದವಾಗಿದ್ದು, ಈ ಯಾತ್ರೆಯು ರಾಷ್ಟ್ರ ವ್ಯಾಪಿ ವಿಸ್ತಾರಗೊಳ್ಳಬೇಕಿದೆ ಎಂದು ಆಶಯ ವ್ಯಕ್ತಪಡಿಸಿದ ಅವರು, ವರ್ತಮಾನದ ಎಲ್ಲಾ ಸಮಸ್ಯೆಗಳಿಗೆ ವಚನ ಕ್ರಾಂತಿಯಲ್ಲಿ ಉತ್ತರ ಸಿಗಲಿದೆ ಎಂದು ಹೇಳಿದರು.

      ಸಹಮತ ವೇದಿಕೆ ಗೌರವಾಧ್ಯಕ್ಷ ಎಚ್.ಕೆ.ರಾಮಚಂದ್ರಪ್ಪ ಮಾತನಾಡಿ, ಮತ್ತೆ ಕಲ್ಯಾಣ ಕ್ರಾಂತಿ ಆದೇ ಆಗುತ್ತೆ. ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ದೇಶದ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ, ಬಸವಣ್ಣನವರ ಚಿಂತನೆಯನ್ನು ಕಾಯ, ವಾಚಾ, ಮನಸ ಅನುಷ್ಠಾನಗೊಳಿಸದಿದ್ದರೆ, ದೇಶಕ್ಕೆ ಉಳಿಗಾಲವಿಲ್ಲ. ಗಂಡಾಂತರವೂ ತಪ್ಪಿದಲ್ಲ ಎಂದು ಸೂಚ್ಯವಾಗಿ ಎಚ್ಚರಿಸಿದರು.ಸಹಮತ ವೇದಿಕೆ ಅಧ್ಯಕ್ಷ ಡಾ.ಎಚ್.ಎಸ್.ಮಂಜುನಾಥ ಕುರ್ಕಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ದಾವಣಗೆರೆ ವಿವಿ ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ, ಮುದೇಗೌಡ್ರ ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap