ದಾವಣಗೆರೆ:
ಗೂಳಿಗೆ ಗೂಳಿಯೇ ಸರಿ ಸಾಟಿಯೇ ಹೊರತು ಕುರಿಯಲ್ಲ. ಹೀಗಾಗಿ ಗೂಳಿಯ ಎದುರು ಕುರಿ ಬಿಡುವ ಬದಲು, ಬಿಜೆಪಿ ಅಭ್ಯರ್ಥಿಗೆ ಪ್ರಬಲ ಪ್ರತಿಸ್ಪರ್ಧೆ ನೀಡಬೇಕಾದರೆ, ದಾವಣಗೆರೆ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಶಾಮನೂರು ಕುಟುಂಬದಿಂದಲೇ ಸ್ಪರ್ಧಿಸಬೇಕೆಂದು ಮಾಜಿ ಶಾಸಕ, ಜೆಡಿಎಸ್ ಮುಖಂಡ ಹೆಚ್.ಎಸ್.ಶಿವಶಂಕರ್ ಆಗ್ರಹಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೂಳಿ ಎದುರು ಗೂಳಿ ಇದ್ದರೆ ಮಾತ್ರ ಸರಿಸಮವಾಗಿ ಸೆಣಸಾಡಲು ಸಾಧ್ಯ. ಆದರೆ, ಗೂಳಿ ಎದುರು ಕುರಿಯನ್ನು ಬಿಟ್ಟರೇ ಗೆಲುವು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.
ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಅವರಿಗೆ ಪ್ರಬಲ ಪೈಪೋಟಿ ನೀಡುವ ಶಕ್ತಿ ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಮಾತ್ರ ಇದೆ. ಇವರಿಬ್ಬರ ಪೈಕಿ ಮೈತ್ರಿ ಅಭ್ಯರ್ಥಿಯಾಗಿ ಯಾರೇ ಕಣಕ್ಕಿಳಿದರೂ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಮತಗಳು ಸಮೀಕರಣಗೊಂಡು ಸುಲಭವಾಗಿ ಗೆಲುವು ಸಾಧಿಸಬಹುದು. ಆದ್ದರಿಂದ ಕ್ಷೇತ್ರದಿಂದ ಈ ಅಪ್ಪ-ಮಗರ ಪೈಕಿ ಒಬ್ಬರನ್ನು ಅಖಾಡಕ್ಕೆ ಕಾಂಗ್ರೆಸ್ ಹೈಕಮಾಂಡ್ ಇಳಿಸಬೇಕೆಂದು ಒತ್ತಾಯಿಸಿದರು.
ದಾವಣಗೆರೆ ಮತಕ್ಷೇತ್ರವು ಕಳೆದ 25 ವರ್ಷಗಳಿಂದಲೂ ವೀರಶೈವ-ಲಿಂಗಾಯತರ ಮತಕ್ಷೇತ್ರವೆಂದೇ ಗುರುತಿಸಲ್ಪಟ್ಟಿದೆ. ಇದಕ್ಕೆ ಪುಷ್ಟಿನೀಡುವಂತೆ ಇದೇ ಸಮುದಾಯ ನಾಯಕರೂ ಆಯ್ಕೆಯಾಗುತ್ತಾ ಬಂದಿದ್ದಾರೆ. ಹೀಗಾಗಿ ಈ ಬಾರಿ ಎಸ್.ಎಸ್.ಮಲ್ಲಿಕಾರ್ಜುನ್ ಅವರೇ ಸ್ಪರ್ಧಿಸಿದರೆ, ಗೂಳಿ ಎದುರು ಗೂಳಿ ನಿಂತತಾಗಲಿದೆ. ಅದನ್ನು ಬಿಟ್ಟು ಎದುರಾಳಿ ಗೂಳಿಯ ವಿರುದ್ಧ ಕುರಿಯನ್ನು ಬಿಟ್ಟು ಬಲಿಪಶು ಮಾಡಬಾರದು ಎಂದು ಸಲಹೆ ನೀಡಿದರು.
ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್‍ಗೆ ಇಂತಹ ಪರಿಸ್ಥಿತಿ ಎದುರಾಗಬಹುದೆಂಬುದಾಗಿ ಯಾರೂ ಸಹ ಊಹಿಸಿರಲಿಲ್ಲ. ಮೊದಲು ಶಾಮನೂರು ಶಿವಶಂಕರಪ್ಪ ಅವರಿಗೆ ಟೀಕೆಟ್ ನೀಡಲಾಯಿತು. ಅವರ ಬೇಡ ಎಂದ ನಂತರ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಯಿತು. ಈಗ ಅವರು ಕೆಲ ಷರತ್ತು ಹಾಕಿದ್ದಾರೆಂದು ಬೇರೆಯವರಿಗೆ ಟಿಕೆಟ್ ನೀಡಲು ಮುಂದಾಗಿರುವ ಕೆಪಿಸಿಸಿ ನಾಯಕರ ಕ್ರಮ ತರವಲ್ಲ. ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ, ಅವರ ಹಾಕಿದ ಕಂಡಿಷನ್‍ಗಳಿಗೆ ಒಪ್ಪಿ, ಅವರನ್ನೇ ಚುನಾವಣಾ ಕಣಕ್ಕೆ ಇಳಿಸಬೇಕೆಂದು ಆಗ್ರಹಿಸಿದರು.
ಚುನಾವಣೆಯ ನಾಮಪತ್ರ ಸಲ್ಲಿಸಲು ಇನ್ನೂ 48 ಗಂಟೆಗಳು ಮಾತ್ರ ಬಾಕಿ ಇದೆ. ಆದರೂ ಕಾಂಗ್ರೆಸ್ ಅಭ್ಯರ್ಥಿಯ ಅಯ್ಕೆ ಮಾಡದೆ ಗೊಂದಲ ಸೃಷ್ಟಿಸಲಾಗುತ್ತಿದೆ. ಇದರಿಂದ ಕಾಂಗ್ರೆಸ್ ಮಾತ್ರವಲ್ಲದೆ ಜೆಡಿಎಸ್ ಪಕ್ಷದ ಕಾರ್ಯಕರ್ತರಲ್ಲೂ ಗೊಂದಲ, ನಿರುತ್ಸಾಹ ಮೂಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಳೆದ ಮೂರು ಬಾರಿ ಸೋತಿರುವ ಕಾರಣಕ್ಕೆ ಈ ಬಾರಿಯೂ ಸೋಲುತ್ತೇನೆಂಬ ಹತಾಶ ಮನೋಭಾವನೆ, ಆತಂಕ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರಲ್ಲಿ ಮೂಡಿರಬಹುದು. ಆ ಆತಂಕದಿಂದ ಹೊರಬಂದು ಕಣಕ್ಕಿಳಿಯಬೇಕು. ಏಕೆಂದರೆ, ಈ ಬಾರಿ ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವುದರಿಂದ, ರಾಜ್ಯ ಸರಕಾರದ ಅಭಿವೃದ್ಧಿ ಕಾರ್ಯಗಳು, ಅಲ್ಪಸಂಖ್ಯಾತರ, ಜೆಡಿಎಸ್ ಮತಗಳು ಸುಲಭವಾಗಿ ಕಾಂಗ್ರೆಸ್‍ಗೆ ಬಂದು, ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವುವನ್ನು ನಿರೀಕ್ಷಿಸಬಹುದು ಎಂದರು.
ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಸ್ಪರ್ಧಿಸಲು ಇನ್ನೂ ಕಾಲ ಮಿಂಚಿಲ್ಲ. ಅವರನ್ನು ಜಿಲ್ಲಾ ಚುನಾವಣಾ ಉಸ್ತುವಾರಿಯನ್ನಾಗಿ ನೇಮಕ ಮಾಡಿದಾಕ್ಷಣ ಅವರು ಚುನಾವಣೆಗೆ ನಿಲ್ಲಬಾರದಂದೇನೂ ಇಲ್ಲ. ಬದಲಾವಣೆ ಮಾಡಬಹುದು. ಮಲ್ಲಿಕಾರ್ಜುನ್ ಹಾಗೂ ಕಾಂಗ್ರೆಸ್ ವರಿಷ್ಠ ಮಂಡಳಿಯವರು ಪಕ್ಷದ ಗೆಲುವಿಗೆ ಮನಸ್ಸು ಮಾಡಬೇಕೆಂದು ಸಲಹೆ ನೀಡಿದರು.
ಜೆಡಿಎಸ್ ಮುಖಂಡ ಜೆ.ಅಮಾನುಲ್ಲಾಖಾನ್ ಮಾತನಾಡಿ, ಜೆಡಿಎಸ್ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿಯ ಆಯ್ಕೆ ಸುಲಭವಾಗಿತ್ತು. ಸುಮಾರ 2.50 ಲಕ್ಷ ಅಲ್ಪಸಂಖ್ಯಾತರ ಮತಗಳು ದೊರಕಿ, ಸುಲಭವಾಗಿ ಗೆಲುವು ಸಾಧಿಸಬಹುದಿತ್ತು. ಆದರೆ ಅವರಲ್ಲಿನ ನಿರಾಶಕ್ತಿಯಿಂದಾಗಿ, ಸುಲಭ ಗೆಲುವು ಕಷ್ಟಕರವಾಗಲಿದೆ ಎಂದು ಅಭಿಪ್ರಾಯ ಪಟ್ಟರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ, ಓಂಕಾರಪ್ಪ, ಶೀಲಾ ಕುಮಾರ್, ನರಸಪ್ಪ, ಚಂದ್ರಣ್ಣ ಮತ್ತಿತರರು ಹಾಜರಿದ್ದರು.