ಬೆಂಗಳೂರು
ಸಿಪಿಐ ಪಕ್ಷದ ಕಚೇರಿ ಆವರಣದಲ್ಲಿದ್ದ ಬೈಕ್‌ಗಳಿಗೆ ಮಂಗಳವಾರ ಮಧ್ಯರಾತ್ರಿ ಬೆಂಕಿ ಹಚ್ಚಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ
ಕಚೇರಿ ಆವರಣದಲ್ಲಿ ನಿಲ್ಲಿಸಿದ್ದ 6 ಬೈಕ್‌ಗಳು ಬೆಂಕಿಯಿಂದ ಅಲ್ಪ ಪ್ರಮಾಣದಲ್ಲಿ ಸುಟ್ಟು ಹೀಗಿವೆ ಕಚೇರಿ ಒಳಗೆ ಉಳಿದುಕೊಂಡಿದ್ದವರು ಬೆಂಕಿಯನ್ನು ನೋಡಿ ಕೂಡಲೇ ನಂದಿಸಿದ್ದರಿಂದ ಕಚೇರಿಗೆ ಬೆಂಕಿ ವ್ಯಾಪಿಸಲು ಸಾಧ್ಯವಾಗಿಲ್ಲ ಬೆಂಕಿಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಕಚೇರಿ ಆವರಣಕ್ಕೆ ಮಧ್ಯರಾತ್ರಿ 1ರ ವೇಳೆ ನುಗ್ಗಿರುವ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿ ಸಿಪಿಐ ಪ್ರತಿಭಟನೆ ನಡೆಸಿದ್ದರಿಂದ ಅಲ್ಲದೇ ಮುಖ್ಯಮಂತ್ರಿ ಯಡಿಯೂರಪ್ಪ ಕೇರಳ ಪ್ರವಾಸದ ವೇಳೆ ಪ್ರತಿಭಟನೆ ನಡೆಸಿದ ಕಾರಣಕ್ಕೆ ಈ ಕೃತ್ಯ ನಡೆದಿದೆ ಎಂದು ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಸತ್ಯಾನಂದ ಅವರು ಶಂಕೆ ವ್ಯಕ್ತಪಡಿಸಿದ್ದಾರೆ.
ಬೆಂಕಿ ಹಚ್ಚಿರುವ ಕುರಿತು ಸತ್ಯಾನಂದ ಅವರು ವೈಯಾಲಿಕಾವಲ್ ಪೊಲೀಸ್ ಠಾಣೆಗೆ ದೂರು ನೀಡಿ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದಾರೆ.ಕಚೇರಿ ಮುಂದೆ ನಿಲ್ಲಿಸಲಾಗಿದ್ದ ಆರು ಬೈಕ್‌ಗಳು ಬೆಂಕಿಗಾಹುತಿಯಾಗಿವೆ. ಕಚೇರಿ ಬಾಗಿಲಿಗೂ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು ಪೆಟ್ರೋಲ್ ಬಾಂಬ್ ಎಸೆದು ಈ ಕೃತ್ಯ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.ಕೃತ್ಯದ ಕುರಿತು ಮಾಹಿತಿ ನೀಡಿದ ಡಿಸಿಪಿ ಚೇತನ್ ಸಿಂಗ್ ರಾಥೋರ್ ಸಿಪಿಐ ಕಛೇರಿ ಆವರಣದಲ್ಲಿದ್ದ ಆರು ಬೈಕ್ ಗಳಿಗೆ ಬೆಂಕಿ ಇಡಲಾಗಿದೆ. ಪೆಟ್ರೋಲ್ ಹಾಕಿ ಬೆಂಕಿ ಇಟ್ಟಿದ್ದಾರೆ. ಯಾರೋ ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಕೃತ್ಯ ಎಸಗಿ ಪರಾರಿಯಾಗಿದ್ದಾರೆ ಎಂದರು.
ವೈಯಾಲಿಕಾವಲ್ ಪೊಲೀಸರು ದೂರು ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.ಯಾರು ಯಾವ ಕಾರಣಕ್ಕೆ ಮಾಡಿದ್ದಾರೆ ಎನ್ನುವುದು ತನಿಖೆಯಲ್ಲಿ ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
