ಕೊರಟಗೆರೆ
ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ಸನ್ನಿಧಿಯಲ್ಲಿ ಕಳೆದ 4 ವರ್ಷಗಳ ಹಿಂದೆ ಟ್ರಸ್ಟ್‍ನಿಂದ ಜಿಲ್ಲಾಡಳಿತಕ್ಕೆ ಅಧಿಕಾರ ಹಸ್ತಾಂತರವಾಯಿತು. ಆಗಿನಿಂದಲೂ ಕೇವಲ ದೇವಾಲಯದ ಧಾರ್ಮಿಕ ಚಟುವಟಿಕೆಗಳನ್ನು ಹೊರತು ಪಡಿಸಿ ಯಾವುದೇಅಭಿವೃದ್ದಿ ಕೆಲಸಗಳನ್ನು ಕೈಗೆತ್ತಿಕೊಳ್ಳದ ಜಿಲ್ಲಾಡಳಿತ ಇತ್ತೀಚೆಗೆ 6.5 ಕೋಟಿ ರೂ. ವೆಚ್ಚದ ದಾಸೋಹ ಭವನ ಕಟ್ಟಡಕ್ಕೆ 2.5 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿ ಕಾಮಗಾರಿ ಕೈಗೆತ್ತಿಕೊಂಡಿರುವುದು ಭಕ್ತರಲ್ಲಿ ದೇವಾಲಯ ಅಭಿವೃದ್ದಿ ಕನಸು ಚಿಗುರೊಡೆಯತೊಡಗಿದೆ.
ರಾಜ್ಯದ ಎ ಗ್ರೇಡ್ ಶ್ರೇಣಿಯ ದೇವಾಲಯಗಳಾದ ಕೊಲ್ಲೂರು, ಮುರುಡೇಶ್ವರ, ಕಟೀಲ್, ಮಲೈ ಮಹದೇಶ್ವರ, ಶೃಂಗೇರಿ, ಕುಕ್ಕೆ ಸುಬ್ರಹ್ಮಣ್ಯದಂತಹ ಪ್ರಸಿದ್ದ ದೇವಾಲಯಗಳ ಸಾಲಿನಲ್ಲಿರುವ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ಸನ್ನಿಧಿಯಲ್ಲಿ ವರ್ಷಕ್ಕೆ 5 ಕೋಟಿಗೂ ಹೆಚ್ಚು ಹಣ ಸಂಗ್ರಹವಾಗುತ್ತಿದೆ. ಮುಜರಾಯಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಹಣ ಕೇವಲ ದೇವಾಲಯದ ಖಾತೆಗೆ ಜಮಾ ಮಾಡಿ ಅಭಿವೃದ್ದಿ ಕೈಚೆಲ್ಲಿ ಕುಳಿತಿದ್ದ ಕಂದಾಯ ಇಲಾಖೆ ಇತ್ತೀಚೆಗೆ 2.5 ಕೋಟಿ ರೂ. ಹಣ ಬಿಡುಗಡೆಗೊಳಿಸಿ ದಾಸೋಹ ಭವನ ಪುನರ್ ಪ್ರಾರಂಭಿಸಿರುವುದು ಭಕ್ತರಲ್ಲಿ ಸಂತಸ ಮೂಡಿದಂತಾಗಿದೆ.
ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ಸನ್ನಿಧಿಗೆ ರಾಜ್ಯ ಸೇರಿದಂತೆ ಅಂತರ್‍ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಬರುವ ಹಿನ್ನೆಲೆಯಲ್ಲಿ, ಧರ್ಮಸ್ಥಳದ ಮಾದರಿಯಲ್ಲಿ 250 ಹಾಗೂ 150 ಅಡಿಯ ವಿಸ್ತೀರ್ಣವುಳ್ಳ ಸುಸಜ್ಜಿತವಾದ ಎರಡು ಹಂತಸ್ತಿನ ದಾಸೋಹ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಧರ್ಮಸ್ಥಳದಲ್ಲಿ 1200 ಭಕ್ತರು ಒಂದು ಬಾರಿ ಕೂತು ಊಟ ಮಾಡುವ ಸೌಕರ್ಯವಿದ್ದರೆ, ಇಲ್ಲಿ ನಿರ್ಮಿಸುತ್ತಿರುವ ದಾಸೋಹಾಲಯದಲ್ಲಿ 1500 ಜನ ಒಂದೇ ಬಾರಿ ಕೂತು ಊಟ ಮಡುವಂತಹ ಸೌಕರ್ಯವಿರುತ್ತದೆ.
ಅಡುಗೆ ಮನೆ, ಉಗ್ರಾಣ, ಲಾಡು ತಯಾರಿಕಾ ಕೊಠಡಿ, ಅಕ್ಕಿ ದಾಸ್ತಾನು ಕೊಠಡಿ ಹೀಗೆ ಹತ್ತು ಹಲವು ಸೌಕರ್ಯವಿರುವ ಬೃಹದಾಕಾರದ ದಾಸೋಹ ಭವನದ ಎರಡನೆ ಹಂತದ ಕೆಲಸ ಪ್ರಾರಂಭವಾಗಿದ್ದು, ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿ ಪ್ರಾರಂಭವಾಗಿದೆ. ಇದು ಅತ್ಯುತ್ತಮ ದಾಸೋಹವಾಗಲೆಂಬುದು ಭಕ್ತಾದಿಗಳ ಆಶಯವಾಗಿದೆ.
ಕಳೆದ 4 ವರ್ಷಗಳ ಹಿಂದೆ ಟ್ರಸ್ಟ್‍ನ ಶೀಥಲ ಸಮರ ಸ್ಪೋಟಗೊಂಡು ಟ್ರಸ್ಟ್ ಅಧ್ಯಕ್ಷರು ಹಾಗೂ ಧರ್ಮದರ್ಶಿಗಳ ನಡುವೆ ಕಿತ್ತಾಟವಾಗಿ ಇಬ್ಬಾಗದಿಂದ ಎರಡೂ ಕಡೆಯ ಸದಸ್ಯರು ಕೋರ್ಟ್ ಮೆಟ್ಟಿಲೇರಿದ ನಂತರ ರಾಜಿ ಸಂಧಾನವಾದರೂ ಪ್ರಯೋಜನವಾಗಿರಲಿಲ್ಲ. ಪರಿಸ್ಥಿತಿ ತೀವ್ರತೆ ಅರಿತ ಸರ್ಕಾರ ಗೊರವನಹಳ್ಳಿ ಮಹಾಲಕ್ಷ್ಮಿದೇವಾಲಯದ ಆಡಳಿತವನ್ನು ಸರ್ಕಾರಕ್ಕೆ ವಹಿಸಿತು.
ಕೋರ್ಟ್‍ನಲ್ಲಿ ಇತ್ಯರ್ಥವಾಗುವವರೆಗೂ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಜಿಲ್ಲಾಡಳಿತದ ವಶಕ್ಕೆ ಕೊಟ್ಟು ಆದೇಶ ಹೊರಡಿಸಿದಾಗಿನಿಂದಲೂ ಜಿಲ್ಲಾಡಳಿತ ಕೇವಲ ಧಾರ್ಮಿಕ ಕೆಲಸಗಳಿಗಷ್ಟೆ ಒತ್ತು ಕೊಟ್ಟು, ಕ್ಷೇತ್ರದ ಅಭಿವೃದ್ದಿಗೆ ಎಳ್ಳು ನೀರು ಬಿಟ್ಟಿತ್ತು. ಈಗ ಅಭಿವೃದ್ದಿಯತ್ತ ಮುಖ ಮಾಡಿರುವುದು ಸ್ಥಳೀಯ ಭಕ್ತರಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ಸನ್ನಿಧಿ ರಾಜ್ಯ ಹಾಗೂ ಅಂತರ್‍ರಾಜ್ಯ ಭಕ್ತರನ್ನು ಹೊಂದಿದ್ದು, ಶುಕ್ರವಾರ, ಮಂಗಳವಾರ, ಭಾನುವಾರ ಹಾಗೂ ರಜಾದಿನಗಳು ಹಬ್ಬ, ಹರಿದಿನಗಳಲ್ಲಿ ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಾರೆ. ಕಮಲಮ್ಮನವರು ಲಕ್ಷ್ಮಿಯನ್ನು ಪೂಜಿಸುವುದರಿಂದ ಪ್ರಾರಂಭಗೊಂಡು, ಅವರ ಮಗ ಪ್ರಸನ್ನಕುಮಾರ್, ಹತ್ತಾರು ಅರ್ಚಕರು ದೇವಿಯನ್ನು ಪೂಜಿಸುವ ಹಂತ ತಲುಪುವವರೆಗೂ ಟ್ರಸ್ಟ್ ಬಹಳ ಅಚ್ಚುಕಟ್ಟಾಗಿ ಕ್ಷೇತ್ರದ ಅಭಿವೃದ್ದಿ ಹಾಗೂ ದೇವಾಲಯ ಅಭಿವೃದ್ದಿಗೆ ಹೆ ಚ್ಚು ಒತ್ತು ನೀಡುತ್ತಾ ಬಂದಿತ್ತು.
ಬಹಳ ದೊಡ್ಡ ಧಾರ್ಮಿಕ ಕ್ಷೇತ್ರವಾಗಿಸುವಲ್ಲಿ ಟ್ರಸ್ಟ್‍ನ ಪಾತ್ರಅಮೋಘವಾಗಿತ್ತು. ಟ್ರಸ್ಟ್‍ನ ಕೆಲವೊಂದು ಧಾರ್ಮಿಕ ಚಟುವಟಿಕೆಗಳು ಕ್ಷೇತ್ರದ ಅತ್ಯದ್ಭುತ ಬೆಳವಣಿಗೆಗೆ ಕಾರಣವಾಗಿ ಒಂದು ದೊಡ್ಡ ಧಾರ್ಮಿಕ ಕ್ಷೇತ್ರವಾಗಿದೆ ಎಂಬುದು ಕಟು ಸತ್ಯವಾಗಿದೆ.
ಇಷ್ಟೆಲ್ಲದರ ನಡುವೆ ಧಾರ್ಮಿಕಕ್ಷೇತ್ರ ಬೆಳೆದು, ಆರ್ಥಿಕ ಸಂಪನ್ಮೂಲ ಕ್ರೋಡೀಕರಣವಾದಂತೆಲ್ಲಾ, ಕ್ಷೇತ್ರದ ಅಭಿವೃದ್ದಿ ಕೇವಲ 5-6 ವರ್ಷಗಳಲ್ಲಿ ದ್ವಿಗುಣಗೊಂಡು ಬರುವ ಭಕ್ತಾದಿಗಳಿಗೆ ಸಕಲ ಸೌಲಭ್ಯ ನೀಡುವುದರ ಜೊತೆ ಅನೇಕ ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಸಾಮಾಜಿಕ ಕೆಲಸಗಳು ಟ್ರಸ್ಟನಿಂದ ನಡೆದು, ರಾಜ್ಯ, ಅಂತರ್‍ರಾಜ್ಯ ಭಕ್ತರಲ್ಲಿ ನಂಬಿಕೆ ಮೂಡಿ ಕೋಟ್ಯಂತರ ಹಣ ಹರಿದು ಬಂದಿತು.
ಆದಾಯ ಹೆಚ್ಚಿದಂತೆಲ್ಲಾ ಟ್ರಸ್ಟ್‍ನಲ್ಲಿಯೇ ಭಿನ್ನಾಭಿಪ್ರಾಯಗಳು ಮೂಡಿ, ಟ್ರಸ್ಟ್ ಇಬ್ಬಾಗವಾಗಿ ಕೋರ್ಟ್‍ನ ಮೆಟ್ಟಿಲೇರಿದ ಬಳಿಕ ಜಿಲ್ಲಾಡಳಿತಕ್ಕೆ ಅಧಿಕಾರ ಹಸ್ತಾಂತರವಾಗಿತ್ತು. ಗೊರವನಹಳ್ಳಿ ಮಹಾಲಕ್ಷ್ಮಿ ಸನ್ನಿಧಿ ಜಿಲ್ಲಾಡಳಿತ ವಹಿಸಿಕೊಂಡ ಪ್ರಾರಂಭದ ಹಂತದಲ್ಲಿ ಭಕ್ತಾದಿಗಳ ಬರುವಿಕೆಯಲ್ಲೂ ಗಣನೀಯ ಮಟ್ಟದಲ್ಲಿ ಕಳೆಗುಂದಿ, ಇತ್ತೀಚೆಗೆ ಕಳೆದ ಒಂದು ವರ್ಷದಿಂದ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿದೆ.
ಹಳ್ಳ ಹಿಡಿದ ಪಾಲಿಟೆಕ್ನಿಕ್;-
ಟ್ರಸ್ಟ್ ಕಾಲದಲ್ಲಿ ಪ್ರಾರಂಭವಾದ ಪಾಲಿಟೆಕ್ನಿಕ್ ಕಾಲೇಜ್ ಪ್ರಾರಂಭದ ಹಂತದಲ್ಲಿ ರಾಜ್ಯ ಮಟ್ಟದ ಸುದ್ದಿ ರಾಜ್ಯದ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು ಗೊರವನಹಳ್ಳಿ ಮಹಾಲಕ್ಷ್ಮಿ ಸನ್ನಿಧಿಯ ಪಾಲಿಟೆಕ್ನಕ್ ಕಾಲ್ಭೆಜ್‍ಗೆ ದಾಖಲಾಗಲು ಮುಗಿಬಿದ್ದು, ದಾಖಲಾತಿಗಳಾಗಿ ಅಲ್ಲಿನ ವಸತಿ ನಿಲಯದಲ್ಲಿಯೆ ವಿದ್ಯಾಭ್ಯಾಸ ಮಾಡಿದ ಬಹಳಷ್ಟು ವಿದ್ಯಾರ್ಥಿಗಳು ಇಂದು ದೇವಿಗೆ ದೇಣಿಗೆ ನೀಡುವ ದಾನಿಗಳಾಗಿದ್ದಾರೆ. ಇವೆಲ್ಲದರ ನಡುವೆ ಜಿಲ್ಲಾಡಳಿತಕ್ಕೆ ಬಂದ ಕೆಲವೆ ದಿನಗಳಲ್ಲಿ ಪಾಲಿಟೆಕ್ನಿಕ್‍ಗೆ ಮಂಕು ಬಡಿದು ಕೇವಲ 4 ವರ್ಷದಲ್ಲಿ ವಿದ್ಯಾರ್ಥಿಗಳ ದಾಖಲಾತಿಯಿಲ್ಲದೆ ತಾಂತ್ರಿಕ ಕಾಲೇಜ್ ಮುಚ್ಚುವ ಹಂತ ತಲುಪಿದೆ. ಈಗ ಕೆಲವು ಸ್ಥಳಿಯ ಮುಖಂಡರು ನಮ್ಮ ತಾಲ್ಲೂಕಿನಲ್ಲಿರುವ ತಾಂತ್ರಿಕ ಕಾಲೇಜನ್ನು ಮುಚ್ಚಿದರೆ ಮತ್ತೆ ಈ ಅವಕಾಶ ಸಿಗದು ಎಂದು ಡಿಸಿಎಂ ಪರಮೇಶ್ವರ್‍ರವರಿಗೆ ಕಾಲೇಜ್ ಮುಚ್ಚದಂತೆ ತಡೆ ತಂದರಾದರೂ, ವಿದ್ಯಾರ್ಥಿ ನಿಲಯದ ಅವ್ಯವಸ್ಥೆ, ಕಾಲೇಜಿನ ಶಿಕ್ಷಕರ ಕೊರತೆಯಿಂದ ದಾಖಲಾತಿಗಳಿಲ್ಲದೆ ಮುಚ್ಚುವ ಅನಿವಾರ್ಯತೆ ಒದಗಿರುವುದು ದುರ್ದೈವ ಎನ್ನುವಂತಾಗಿದೆ.
ಸಾಮೂಹಿಕ ವಿವಾಹಗಳಿಲ್ಲ-
ಟ್ರಸ್ಟ್‍ನ ಅವಧಿಯಲ್ಲಿ ಪ್ರತಿ ವರ್ಷ ಕ್ಷೇತ್ರದಲ್ಲಿ ನೂರಾರು ಜೋಡಿಗಳಿಗೆ ಉಚಿತ ಸಾಮೂಹಿಕ ವಿವಾಹ ಇಟ್ಟುಕೊಂಡು, ಉಚಿತವಾಗಿ ವರನಿಗೆ ರೇಷ್ಮೆ ಶಲ್ಯ, ಪಂಚೆ, ಶರ್ಟ್ ನೀಡಿದರೆ, ವಧುವಿಗೆ ರೇಷ್ಮೆ ಸೀರೆ, 5 ಗ್ರಾಂ ಬಂಗಾರದ ತಾಳಿ ಕೊಟ್ಟು ಸಾವಿರಾರು ಭಕ್ತಾದಿಗಳ ಸಂಗಮದಲ್ಲಿ ದಾಂಪತ್ಯದ ಸಪ್ತಪದಿ ತುಳಿಯುತ್ತಿದ್ದ ಕ್ಷೇತ್ರದಲ್ಲಿ ಜಿಲ್ಲಾಡಳಿತಕ್ಕೆ ಹಸ್ತಾಂತರವಾದ ಬಳಿಕ ಈ ಕಾರ್ಯಕ್ರಮಕ್ಕೆ ಎಳ್ಳು ನೀರು ಬಿಟ್ಟಂತಾಯಿತು. ಇಷ್ಟೆಲ್ಲ ಧಾರ್ಮಿಕ ಚಟುವಟಿಕೆಗಳಿಗೆ ಟ್ರಸ್ಟ್ ದಾನಿಗಳನ್ನು ಹೊಂದಿಸಿ ದೇವಾಲಯಗಳ ಧಾರ್ಮಿಕ ಕೆಲಸಗಳನ್ನು ಕೈಗೊಳ್ಳುತ್ತಿದ್ದರು. ಈಗ ಎಲ್ಲಾ ಧಾರ್ಮಿಕ ಚಟುವಟಿಕೆಗಳಿಗೂ ಜಿಲ್ಲಾಡಳಿತ ಬ್ರೇಕ್ ಹಾಕಿ ಕೇವಲ ಪೂಜೆ ಪುರಸ್ಕಾರಗಳಿಗಷ್ಟೆ ಸೀಮಿತವಾಗಿದೆ.
ಸರ್ಕಾರಕ್ಕಿಂತ ಮುಂಚಿತವಾಗಿಯೇ ದಾಸೋಹ;-
ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ಟ್ರಸ್ಟ್ ಕಳೆದ 15-20 ವರ್ಷಗಳ ಹಿಂದೆಯೆ ಸರ್ಕಾರ ಶಾಲೆಗಳಿಗೆ ಬಿಸಿಯೂಟ ಕಲ್ಪಿಸುವುದಕ್ಕಿಂತ ಮುಂಚಿತವಾಗಿಯೆ ಗೊರವನಹಳ್ಳಿ ಟ್ರಸ್ಟಿನಿಂದ ಮಧ್ಯಾಹ್ನ ದಾಸೋಹ ವ್ಯವಸ್ಥೆಯನ್ನು ಶಾಲಾ ಸಾವಿರಾರು ವಿದ್ಯಾರ್ಥಿಗಳಿಗೆ ಸರ್ಕಾರಿ, ಅನುದಾನಿತ, ಅನುದಾನ ರಹಿತ ಮಾಡಲಾಗುತ್ತಿತ್ತು. ಈಗ ಪ್ರಸಕ್ತ ಸನ್ನಿವೇಶದಲ್ಲಿ ಹೊರ ಶಾಲೆಗಳಿರಲಿ ತಮ್ಮ ವಿದ್ಯಾರ್ಥಿ ನಿಲಯದಲ್ಲೂ ಊಟಕ್ಕಾಗಿ ಪರದಾಡುವ ಪರಿಸ್ಥಿತಿ ವಿದ್ಯಾರ್ಥಿಗಳಿಗೆ ಒದಗಿದ್ದು, ಅಲ್ಲಿನ ವಿದ್ಯಾರ್ಥಿಗಳು ಸಾರ್ವಜನಿಕ ದಾಸೋಹಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಉಚಿತ ಪಠ್ಯ ಪುಸ್ತಕ-ಸಮವಸ್ತ್ರಕ್ಕೂ ಕೊಕ್ಕೆ;-
1 ನೇ ತರಗತಿಯಿಂದ 40 ಪ್ರೌಢಶಾಲೆ, 12 ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ 12 ನೋಟ್‍ಗಳನ್ನು ಬುಕ್ ಪ್ರತಿವರ್ಷ ಟ್ರಸ್ಟ್‍ನಿಂದ ನೀಡಲಾಗುತ್ತಿತ್ತು. ಆದರೆ ಈಗ ಜಿಲ್ಲಾಡಳಿತದಿಂದ ಇದಕ್ಕೂ ಕೊಕ್ಕೆ ಬಿದ್ದು, ಈ ಧರ್ಮಕಾರ್ಯವು ನಿಂತು ಹೋಗಿದೆ.
ಟ್ರಸ್ಟ್‍ನ ಅಭಿವೃದ್ದಿಗೂ ಜಿಲ್ಲಾಡಳಿತದ ಕೆಲಸಕ್ಕೂ ತಾಳೆ ಹಾಕಿದರೆ 100 ಕ್ಕೆ ಶೇ. 50 ರಷ್ಟು ಸಹ ಜಿಲ್ಲಾಡಳಿತ ಅಭಿವೃದ್ದಿಯ ಬಗ್ಗೆ ಗಮನ ಹರಿಸದಿರುವುದು ಬೇಸರಕ್ಕೆ ಕಾರಣವಾಗಿದೆ. ಜಿಲ್ಲಾಡಳಿತ ಇನ್ನಾದರೂ ಧಾರ್ಮಿಕ ಕ್ಷೇತ್ರದ ಅಭಿವೃದ್ದಿಯ ಕಡೆ ಗಮನ ಹರಿಸಿ, ಗೊರವನಹಳ್ಳಿ ಮಹಾಲಕ್ಷ್ಮಿ ಸನ್ನಿಧಿಯ ಚಟುವಟಿಕೆಗಳಿಗೆ ಚಾಲನೆ ನೀಡಿ ಮತ್ತೆ ಗೊರವನಹಳ್ಳಿ ಮಹಾಲಕ್ಷ್ಮಿ ಸನ್ನಿಧಿಯ ಗತ ವೈಭವವನ್ನು ಮರಳಿ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.