ದಾವಣಗೆರೆ :
ಸಿರಿಗೆರೆಯ ತರಳಬಾಳು ಬೃಹನ್ಮಠದಿಂದ ಗೋಶಾಲೆ ಆರಂಭಿಸಲು ಸಂಕಲ್ಪ ಮಾಡಲಾಗಿದೆ ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಮಂಗಳವಾರ ತಾಲೂಕಿನ ಕಕ್ಕರಗೊಳ್ಳ ಗ್ರಾಮದ ಗಂಗನರಸಿ ರಸ್ತೆಯಲ್ಲಿ ನಿರ್ಮಿಸಿರುವ ಶ್ರೀಮಹೇಶ್ವರ ದೇವಸ್ಥಾನದ ಉದ್ಘಾಟನೆ, ನೂತನ ಗೋಪುರದ ಕಳಸಾರೋಹಣ ಹಾಗೂ ಧರ್ಮ ಜಾಗೃತಿ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಬರಗಾಲಕ್ಕೆ ನಾಡು ತುತ್ತಾಗಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ತಲೆ ದೋರಿದೆ. ಹೀಗಾಗಿ ಸುಮಾರು ಎರಡು ಸಾವಿರ ದನಕರುಗಳ ನಿರೀಕ್ಷೆಯೊಂದಿಗೆ ಶ್ರೀಮಠದಿಂದ ಗೋಶಾಲೆ ಆರಂಭಿಸಲು ಸಂಕಲ್ಪ ಮಾಡಲಾಗಿದೆ ಎಂದು ಹೇಳಿದರು.
ಶ್ರೀಮಠವು ಆರಂಭಿಸಲಿರುವ ಗೋಶಾಲೆಗೆ ಮೇವಿನ ಅವಶ್ಯಕತೆ ಇದ್ದು, ಈಗಾಗಲೇ ನಿಟ್ಟೂರು ಗ್ರಾಮಸ್ಥರು 15 ಟ್ರಾಕ್ಟರ್ ಭತ್ತದ ಹುಲ್ಲನ್ನು ಕಳುಹಿಸಿದ್ದಾರೆ. ಇದೇರೀತಿಯಲ್ಲಿ ಈ ಭಾಗದ ರೈತರು ಸಹ ಮೇವು ಸಂಗ್ರಹಿಸಿ ನೀಡಬೇಕೆಂದು ಕಿವಿಮಾತು ಹೇಳಿದರು.
ನೀರು ಹಾಗೂ ಬೆಳೆ ಸಮಸ್ಯೆಯ ಬಗ್ಗೆ ಈಗಾಗಲೇ ಕೃಷಿ ಸಚಿವರು ಹಾಗೂ ಅಧಿಕಾರಿಗಳ ಜತೆಗೆ ಸಮಾಲೋಚನಾ ಸಭೆ ನಡೆಸಲಾಗಿದ್ದು, ಈ ಸಭೆಯ ತೀರ್ಮಾನಗಳನ್ನು ಕಾರ್ಯರೂಪಕ್ಕೆ ತರಲು ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದ ಶ್ರೀಗಳು, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳಿಗೆ ವಿಶೇಷ ಅಧ್ಯಯನ ಅಧ್ಯಯನ ತಂಡ ಕಳುಹಿಸುವಂತೆ ಕೃಷಿ ಸಚಿವ ಶಿವಶಂಕರರೆಡ್ಡಿ ಅವರೊಂದಿಗೆ ಚರ್ಚಿಸಲಾಗಿದ್ದು, ಶಾಸಕ ರವೀಂದ್ರನಾಥ್ ಈ ತಂಡವನ್ನು ಕರೆತರಲು ಕಾರ್ಯಪ್ರವೃತರಾಗಬೇಕೆಂದು ಸಲಹೆ ನೀಡಿದರು.
ಜಗಳೂರಿನಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಬಗ್ಗೆ ಸರ್ಕಾರವನ್ನು ಒತ್ತಾಯಿಸಲಾಗಿತ್ತು. ಅದರಂತೆ ಸರ್ಕಾರವು ಜಗಳೂರು ತಾಲ್ಲೂಕಿನ 53 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 250 ಕೋಟಿ ರೂ. ವೆಚ್ಚದಲ್ಲಿ ಹಾಗೂ ಭರಮಸಾಗರದಿಂದ ಸಿರಿಗೆರೆವರೆಗಿನ ಕೆರೆಗಳಿಗೆ ನೀರು ತುಂಬಿಸಲು 250 ಕೋಟಿ ರೂ. ವೆಚ್ಚದ ಯೋಜನೆಗೆ ಮಂಜೂರಾತಿ ನೀಡಿದೆ ಎಂದರು.
ಇತ್ತೀಚೆಗೆ ನೇಪಾಳದಲ್ಲಿ ನಡೆದ ಏಷ್ಯಾ ಫ್ಯಾಸಿಫಿಕ್ ಶೇಂಗಸಭೆಗೆ ತಮ್ಮನ್ನು ಆಹ್ವಾನಿಸಲಾಗಿತ್ತು. ಈ ಸಭೆಯಲ್ಲಿ ಜಗತ್ತಿನಲ್ಲಿ ತಾಂಡವವಾಡುತ್ತಿರುವ ಅಶಾಂತಿಯನ್ನು ತಡೆಗಟ್ಟಿ, ವಿಶ್ವ ಶಾಂತಿ ಸ್ಥಾಪಿಸುವುದು ಹೇಗೆ ಎಂಬುದರ ಬಗ್ಗೆ ಚರ್ಚಿಸಲಾಯಿತು. ಈ ಸಮಸ್ಯೆ ಸಮಕಾಲೀನ ಸವಾಲು ಸಹ. ಭೂಮಿಯ ಮೇಲೆ ಪ್ರಕೃತಿ ವಿಕೋಪದಿಂದಾಗುವ ಹಾಗೂ ಮನುಷ್ಯನಿಂದಾಗುವ ಎರಡು ಸಮಸ್ಯೆಗಳಿವೆ. ಆದರೆ, ಕರ್ನಾಟಕದಲ್ಲಿ ನೀರಿನ ಸಮಸ್ಯೆ ಬಿಟ್ಟರೆ, ಉಳಿದ ಪ್ರಾಕೃತಿಕ ವಿಕೋಪಗಳು ಕಡಿಮೆ. ಆದರೆ, ಮನುಷ್ಯ ನಿರ್ಮಿತ ಕೌಟುಂಬಿಕ ಸಮಸ್ಯೆಗಳು ಇಡೀ ಜಗತ್ತಿನಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಂಪತ್ತು ಎಷ್ಟೇ ಇರಲಿ ಕುಟುಂಬದ ಸದಸ್ಯರು ನೆಮ್ಮದಿಯಿಂದ ಬದುಕಲು ಅಂತಃಕರಣ ಮತ್ತು ಆತ್ಮೀಯತೆಯ ಮಾತು ಅತ್ಯವಶ್ಯವಾಗಿದೆ. ಕುಟುಂಬದ ಸದಸ್ಯರ ಭಾವನೆಗಳನ್ನು ಅರಿತು, ಅವರ ಭಾವನೆಗಳಿಗೂ ಗೌರವಿಸುವ ಗುಣ ಮನುಷ್ಯನಲ್ಲಿರಬೇಕೆಂದು ಪ್ರತಿಪಾದಿಸಿದರು.
ಎಲ್ಲರ ಕುಟುಂಬದಲ್ಲೂ ಒಂದಿಲ್ಲೊಂದು ಸಮಸ್ಯೆ ಇದ್ದೇ ಇರುತ್ತದೆ. ಆದರೆ, ಸಂಸಾರದ ಆ ತಾಪತ್ರಯ ಎದುರಿಸುವ ಶಕ್ತಿ ನಿಮ್ಮಲ್ಲಿರಬೇಕು. ದೇವರ ಬಳಿ ನೀವು ಯಾವ ಕಷ್ಟವೂ ಕೊಡಬೇಡಪ್ಪ ಎಂಬುದಾಗಿ ಬೇಡುವ ಬದಲು, ದೇವರೇ ನನಗೆ ಎಷ್ಟಾದರೂ ಕಷ್ಟಕೊಡು. ಆದರೆ. ಅದನ್ನು ಎದುರಿಸುವ ಶಕ್ತಿ ಕೊಡು ಎಂಬುದಾಗಿ ಅರಿಕೆ ಮಾಡಿಕೊಳ್ಳಬೇಕು. ಏಕೆಂದರೆ, ಕಷ್ಟ ಮೆಟ್ಟಿನಿಂತ ಮೇಲೆ ಸಿಗುವ ಸುಖದ ಸವಿಯೇ ಬೇರೆ ಎಂದರು.
ಶಾಸಕ ಎಸ್.ಎ.ರವೀಂದ್ರನಾಥ್ ಮಾತನಾಡಿ, ಇತ್ತೀಚೆಗೆ ಹೊಸ ದೇವಸ್ಥಾನ ಕಟ್ಟುವ ಪರಂಪರೆ ಮುಂದುವರೆದಿರುವುದು ಸಂತೋಷದ ಸಂಗತಿ. ಈ ಭಾಗಕ್ಕೆ ಕಳೆದ ನಾಲ್ಕು ಬೆಳೆಗಳಿಂದ ನೀರು ಇಲ್ಲದಿದ್ದರೂ, ದೇವಸ್ಥಾನ ಕಟ್ಟುವ ಮನಸ್ಸು ಮಾಡಿರುವ ನಿಮ್ಮ ಕಾರ್ಯ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇಲ್ಲಿ ನಿರ್ಮಿಸಿರುವ ದೇವಸ್ಥಾನ ಊರಿನಿಂದ ಸುಮಾರು ದೂರವಿದೆ. ಹೀಗಾಗಿ ಇಲ್ಲಿ ಪೂಜೆ-ಪುನಸ್ಕಾರ ಸಲ್ಲಿಸಲು ಸ್ವಲ್ಪ ತೊಂದರೆಯಾಗಬಹುದು. ಆದರೆ, ದೇವರ ಬಗ್ಗೆ ನಿಮ್ಮಲ್ಲಿರುವ ಭಕ್ತಿ, ನಂಬಿಕೆಯಿಂದ ಈ ದೇವಸ್ಥಾನ ನಿಮಗೆ ದೂರ ಅನಿಸದಿರಬಹುದು ಎಂದರು.
ಮಾಜಿ ರಾಜ್ಯ ಸಭಾ ಸದಸ್ಯ, ಶ್ರೀಮದ್ ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಕೆ.ಆರ್.ಜಯದೇವಪ್ಪ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ದೇವಸ್ಥಾನಗಳ ನಿರ್ಮಾಣ ಹಾಗೂ ಹಳೇ ದೇವಸ್ಥಾನಗಳ ಜಿರ್ಣೋದ್ಧಾರ ಭರದಿಂದ ಸಾಗಿದೆ. ನಾಡಿಗೆ ಬರ ಬರಬಹುದು. ಆದರೆ, ಭಕ್ತರ ಮನಸ್ಸಿಗೆ ಬರ ಬರುವುದಿಲ್ಲ ಎಂಬುದಕ್ಕೆ ನೀವು ಇಲ್ಲಿ ನಿರ್ಮಿಸಿರುವ ದೇವಾಲಯವೇ ಸಾಕ್ಷಿ ಸಾಕ್ಷಿಯಾಗಿದೆ ಎಂದರು.
ದೇವರು ನಮ್ಮಿಂದ ಏನೂ ಬಯಿಸಲ್ಲ. ಆದರೆ, ನಾವೇ ದೇವರಿಗೆ ಹರಿಕೆಯ ರೂಪದಲ್ಲಿ ಲಂಚ ಕೊಡಲು ಮುಂದಾಗಿದ್ದೇವೆ. ಅಲ್ಲದೇ, ಹರಿಕೆ ತೀರಿಸುವ ಸಂದರ್ಭದಲ್ಲಿ ಮೌಲ್ಯ ಕಡಿಮೆ ಮಾಡಿಕೊಳ್ಳುವ ಮೂಲಕ ದೇವರಿಗೂ ವಂಚನೆ ಮಾಡುತ್ತಿದ್ದೇವೆಂದು ಸ್ವಾರಸ್ಯಕರವಾದ ಕಥೆಯೊಂದನ್ನು ಹೇಳಿ ಸಾಬೀತು ಪಡಿಸಿದ ಅವರು, ನೀವು ನಂಬಿದ ದೇವರು ಭಕ್ತರನ್ನು ಎಂದೂ ಕೈಬಿಡಲ್ಲ ಎಂದು ನುಡಿದರು.
ಮಹೇಶ್ವರ ಜಾತ್ರೆ ಆಚರಣೆಯ ಕುರಿತು ಪ್ರಾಂಶುಪಾಲ ಪ್ರೊ.ಬಾತಿ ಬಸವರಾಜ ಉಪನ್ಯಾಸ ನೀಡಿದರು. ಜಿ.ಪಂ. ಮಾಜಿ ಸದಸ್ಯ ಕೆ.ಜಿ.ಬಸವನಗೌಡ್ರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಲ್ಲಿಕಾರ್ಜುನ ಗೌಡ್ರು ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನ ನಿರ್ಮಾಣಗಾರ ರಮೇಶ್, ಶಿಲ್ಪಿ ಶ್ರೀಧರಾಚಾರಿ ಹಾಗೂ ಮಠದ ಕೆತ್ತನೆಕಾರರು ಮತ್ತು ಪುರೋಹಿತರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ