ಗೋಶಾಲೆ ತೆರೆಯಲು ರೈತ ಸಂಘ ಒತ್ತಾಯ

ದಾವಣಗೆರೆ:

  ಬರಗಾಲದ ಹಿನ್ನೆಲೆಯಲ್ಲಿ ಗೋವುಗಳಿಗೆ ಮೇವು ಹಾಗೂ ನೀರು ಇಲ್ಲದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಆನಗೋಡು ಹೋಬಳಿ ವ್ಯಾಪ್ತಿಯ ಗ್ರಾಮ ಪಂಚಾಯತಿಗಳಲ್ಲಿ ಗೋಶಾಲೆ ತೆರೆಯಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ)ಯ ಕಾರ್ಯಕರ್ತರು ಶನಿವಾರ ಆನಗೋಡು ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.

   ತಾಲೂಕಿನ ಆನಗೋಡು ಗ್ರಾಮದ ನಾಡ ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತ ಸಂಘದ ಕಾರ್ಯಕರ್ತರು ಬರ ನಿರ್ವಹಣೆಗೆ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಉಪ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

   ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಎಂ.ಸಿ.ಕೃಷ್ಣಮೂರ್ತಿ, ಬರಗಾಲವು ಈ ವರ್ಷವೂ ಮುಂದುವರೆದಿರುವ ಕಾರಣ ಆನಗೋಡು ಹೋಬಳಿ ವ್ಯಾಪ್ತಿಯಲ್ಲಿ ಜಾನುವಾರುಗಳು ನೀರು, ಮೇವು ಇಲ್ಲದೇ ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮೊದಲೆ ಮಳೆ-ಬೆಳೆ ಇಲ್ಲದೇ ಸಂಕಷ್ಟದಲ್ಲಿರುವ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಅಳಲು ತೋಡಿಕೊಂಡರು.

    ಜಾನುವಾರುಗಳಿಗೆ ಮೇವು ಹಾಗೂ ನೀರು ಒದಗಿಸುವುದು ಇಂದಿನ ಜರೂರತ್ತಾಗಿದೆ. ಆದರೆ, ಅಧಿಕಾರಿಗಳು ಜಾನುವಾರುಗಳಿಗೆ ಮೇವು ಪೂರೈಸದೇ, ನಿರ್ಲಕ್ಷ್ಯ ವಹಿಸಿದ್ದಾರೆ. ಅಧಿಕಾರಿಗಳು ಹೀಗೆಯೇ ನಿರ್ಲಕ್ಷ್ಯ ವಹಿಸಿದರೆ, ರೈತ ತಾನು ಸಾಕಿರುವ ಜಾನುವಾರುಗಳಿಗೆ ಮೇವು ಇಲ್ಲದ ಕಾರಣ ದನಕರುಗಳನ್ನು ಕಸಾಯಿಖಾನೆಗಳಿಗೆ ತಳ್ಳುವ ಪರಿಸ್ಥಿತಿ ನಿರ್ಮಾಣವಾದರೂ ಆಶ್ಚರ್ಯ ಪಡಬೇಕಿಲ್ಲ. ಇದು ತಪ್ಪಬೇಕಾದರೆ, ಗೋಶಾಲೆ ತೆರೆಯುವುದು ಅತ್ಯವಶ್ಯವಾಗಿದೆ. ಆದ್ದರಿಂದ ಅಧಿಕಾರಿಗಳು ಜಾನುವಾರುಗಳ ಹಾಗೂ ರೈತರ ಸಂಕಷ್ಟ ಅರಿತು ಆನಗೋಡು ಹೋಬಳಿಯ ವ್ಯಾಪ್ತಿಯ ಪ್ರತಿ ಗ್ರಾಮ ಪಂಚಾಯತ್‍ಗಳಲ್ಲೂ ಗೋಶಾಲೆ ತೆರೆಯಬೇಕೆಂದು ಆಗ್ರಹಿಸಿದರು.

      ಪ್ರತಿಭಟನೆಯಲ್ಲಿ ಸಂಘಟನೆಯ ಕೆಂಚಮ್ಮನಹಳ್ಳಿ ಹನುಮಂತಪ್ಪ, ಮುಡೇನಹಳ್ಳಿ ಹನುಮಂತಪ್ಪ, ಗುಡಾಳ್ ಸೈಕಲ್ ರಾಜಪ್ಪ, ಗುಮ್ಮನೂರು ರುದ್ರೇಶ, ಕರಪ್ಪನಹಟ್ಟಿ ವೆಂಕಟೇಶ, ಗೊಲ್ಲರಹಟ್ಟಿ ಚನ್ನಪ್ಪ, ತುಂಬಿಗೆರೆ ವಿಜಯಪ್ಪ, ಕೆರೇನಹಳ್ಳಿ ಅಂಜಿನಪ್ಪ, ಸಿದ್ಧನೂರು ರಾಜಪ್ಪ, ನರಸೀಪುರ ಹನುಮಂತಪ್ಪ, ಹುಣಸೇಕಟ್ಟೆ ಶಂಕರಪ್ಪ, ಮಂಡಲೂರು ಶಿವಣ್ಣ, ನೀರ್ಥಡಿ ಬಸವರಾಜಪ್ಪ, ಹೆಬ್ಬಾಳ್ ವಿಜಯಣ್ಣ, ಬಡಾವಣೆ ಕಿರಣ್, ಹಾಲುವರ್ತಿ ಕೃಷ್ಣಮೂರತಿ, ಕಾಟಿಹಳ್ಳಿ ರುದ್ರೇಶ, ಶಿವಪುರ ರುದ್ರಾನಾಯ್ಕ, ರುದ್ರನಕಟ್ಟೆ ಹಾಲಪ್ಪ, ಆನಗೋಡು ಕುಬೇರಪ್ಪ, ಜಿ.ವೆಂಕಟೇಶ, ಕೆಂಚಮ್ಮನಹಳ್ಳಿ ಆರ್.ಅಂಜಿನಪ್ಪ, ಕೆ.ಆರ್.ರಾಜಪ್ಪ, ಹನುಮಂತಪ್ಪ, ಡಿ.ಟಿ.ವಿಜಯಕುಮಾರ, ಬಸವರಾಜಪ್ಪ ಮತ್ತಿತರರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link