ಮೈತ್ರಿ ಸರ್ಕಾರವನ್ನು ರಾಜ್ಯಪಾಲರು ತಕ್ಷಣ ವಜಾಗೊಳಿಸಬೇಕು : ಆರ್ ಅಶೋಕ್

ಬೆಂಗಳೂರು

    ಅಲ್ಪ ಮತಕ್ಕೆ ಕುಸಿದಿರುವ ಮೈತ್ರಿ ಸರ್ಕಾರವನ್ನು ರಾಜ್ಯಪಾಲರು ತಕ್ಷಣ ವಜಾಗೊಳಿಸಬೇಕು ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಆರ್ ಅಶೋಕ್ ಒತ್ತಾಯಿಸಿದ್ದಾರೆ.

    ಡಾಲರ್ಸ್ ಕಾಲೋನಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಮೇಲೆ ಶಾಸಕರಿಗೆ ಹಾಗೂ ಸಚಿವ ಸಂಪುಟದ ಸಚಿವರಿಗೂ ವಿಶ್ವಾಸ ಇಲ್ಲದಂತಾಗಿದೆ.ಇಂತಹ ಬೆಳವಣಿಗೆ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಮೇರಿಕಾದಿಂದ ರಾಜ್ಯಕ್ಕೆ ಆಗಮಿಸಿದ ಬಳಿಕ ರಾಜ್ಯಪಾಲರ ಬಳಿ ತೆರಳಿ ರಾಜೀನಾಮೆ ನೀಡುತ್ತಾರೆ ಎಂದು ನಿರೀಕ್ಷಿಸಿದ್ದೆವು.

    ಶಾಸಕರು ಸಚಿವರು ರಾಜೀನಾಮೆ ನೀಡಿದ ಬಳಿಕವೂ ಮುಖ್ಯಮಂತ್ರಿಯಾಗಿ ಮುಂದುವರೆದಿರುವುದು ಅವರಿಗೆ ಶೋಭೆ ತರುವುದಿಲ್ಲ. ಅವರಿಗೆ ಮಾನ ಮರ್ಯಾದೆ ಇದ್ದರೆ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮನೆಗೆ ಹೋಗಬೇಕು ಎಂದು ಅವರು ಆಗ್ರಹಿಸಿದರು.

    ಮೈತ್ರಿ ಸರ್ಕಾರದಲ್ಲಿ ಶಾಸಕರ ಮೇಲೂ ದೌರ್ಜನ್ಯ ಎಸಗುತ್ತಿದ್ದು ಇದು ಹೆಚ್ಚು ದಿನ ನಡೆಯುವುದಿಲ್ಲ. ಎಚ್ಎಎಲ್ ನಲ್ಲಿ ಶಾಸಕ ಎಚ್ ನಾಗೇಶ್ ಅವರನ್ನು ತಡೆಯುವ ಕೆಲಸ ಮಾಡಲಾಗಿದೆ.ಪೊಲೀಸ್ ಅಧಿಕಾರಿಗಳನ್ನು ಬಳಸಿಕೊಂಡು ಗೇಟ್ ನಲ್ಲಿ ಅಡ್ಡಗಟ್ಟುವುದು ,ಬಲವಂತವಾಗಿ ಹಿಡಿದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಸಾಮಾನ್ಯ ಜನರು ಕೂಡಾ ಹೀಗೆ ವರ್ತಿಸುವುದಿಲ್ಲ. ಮೊನ್ನೆ ಸಚಿವ ಡಿಕೆ ಶಿವಕುಮಾರ್ ಅವರು ಸ್ಪೀಕರ್ ಕಚೇರಿಗೆ ನುಗ್ಗಿ ಶಾಸಕರ ರಾಜೀನಾಮೆ ಪತ್ರವನ್ನು ಕಸಿದುಕೊಂಡು ಹರಿದು ಹಾಕಿದ್ದಾರೆ. ತೀವ್ರ ಭದ್ರತೆ ಇರುವ ವಿಮಾನ ನಿಲ್ದಾಣದಲ್ಲೂ ದೌರ್ಜನ್ಯ,ಗೂಂಡಾಗಿರಿ ನಡೆಸಿದ್ದಾರೆ ಎಂದು ಅವರು ಆರೋಪಿಸಿದರು.

     ಮೈತ್ರಿ ಸರ್ಕಾರಕ್ಕೆ ಮ್ಯಾಜಿಕ್ ನಂಬರ್ ಕೂಡ ಇಲ್ಲ, ಕೆರೆಯ ಏರಿ ಒಡೆದು ನೀರು ಹೊರಗೆ ಹೋದಂತೆ ನಿಮ್ಮ ಶಾಸಕರು ನಿರ್ಗಮಿಸಿದ್ದಾರೆ, ಆದರೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಶಾಸಕರಿಗೆ ಮೋಸ ಮಾಡಿ ಅಧಿಕಾರಕ್ಕೆ ಅಂಟಿ ಕೊಂಡು ಕುಳಿತಿದ್ದಾರೆ. ತಕ್ಷಣವೇ ನಿಮ್ಮಸ್ಥಾನಕ್ಕೆ ರಾಜೀನಾಮೆ ನೀಡಿ ಗೌರವ ಉಳಿಸಿಕೊಳ್ಳಿ ಎಂದು ಆರ್ ಅಶೋಕ್ ಒತ್ತಾಯ ಮಾಡಿದರು.

     ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರಂತಹ ನಾಯಕರು ರಾಜ್ಯಪಾಲರ ಬಗ್ಗೆ ಯಾವುದೇ ಮಾಹಿತಿ ಇಲ್ಲದೇ ಮಾತನಾಡುವುದು ಶೋಭೆ ತರುವುದಿಲ್ಲ, ಶಾಸಕರು ರಾಜ್ಯಪಾಲರನ್ನು ಕದ್ದುಮುಚ್ಚಿ ಭೇಟಿ ಮಾಡಿಲ್ಲ, ಸಾರ್ವಜನಿಕವಾಗಿ ಭೇಟಿ ಮಾಡಿದ್ದಾರೆ. ರಾಜ್ಯಪಾಲರ ಕಚೇರಿಗೆ ಶಾಸಕರು ತೆರಳಿದಾಗ ಅವರನ್ನು ಸೌಜನ್ಯದಿಂದ ಮಾತನಾಡಿಸಿ ಕಾಫಿ ಕೊಡುವುದು ಸಂಪ್ರದಾಯ.ಅದನ್ನು ಅವರು ಪಾಲಿಸಿದ್ದರೆ, ಸಂಪ್ರದಾಯ ಪಾಲಿಸಿದನ್ನು ನೋಡಿ ಇವರಿಗೆ ಉರಿಯುತ್ತದೆ.

     ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ರಾಜ್ಯಪಾಲರ ಕಚೇರಿಯನ್ನು ಕಾಂಗ್ರೆಸ್ ಹೇಗೆ ದುರ್ಬಳಕೆ ಮಾಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ.ಅವರ ಚಾಳಿಯನ್ನು ನಾವು ಮುಂದುವರೆಸುವುದಿಲ್ಲ ಎಂದು ಪರಮೇಶ್ವರ್ ವಿರುದ್ಧ ಆರ್ ಅಶೋಕ್ ಬೇಸರ ವ್ಯಕ್ತಪಡಿಸಿದರು.ಸಚಿವ ಸ್ಥಾನಕ್ಕೆಎಚ್ ನಾಗೇಶ್ ರಾಜೀನಾಮೆ ನೀಡಿರುವುದು ತಮಗೆ ತಿಳಿದಿಲ್ಲ.ಈ ಬೆಳವಣಿಗೆಗಳಿಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ ಎಂದು ಆರ್ ಅಶೋಕ್ ಸ್ಪಷ್ಟಪಡಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap