ತುಮಕೂರು:
ಅಖಿಲ ಭಾರತ 66ನೇ ಸಹಕಾರ ಸಪ್ತಾಹಕ್ಕೆ ಇಂದು ಚಾಲನೆ ನೀಡಲಾಗುತ್ತಿದ್ದು, ಇದಕ್ಕಾಗಿ ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನ ಸಜ್ಜುಗೊಂಡಿದೆ.ನವಭಾರತದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಧ್ಯೇಯದೊಂದಿಗೆ ರಾಜ್ಯ ಮಟ್ಟದ ಕಾರ್ಯಕ್ರಮ ಈ ಬಾರಿ ತುಮಕೂರಿನಲ್ಲಿ ನಡೆಯುತ್ತಿದ್ದು, ಈ ಸಪ್ತಾಹವನ್ನು ಇಂದು ಮಧ್ಯಾಹ್ನ 12.20ಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆ ವಹಿಸುವರು. ವಸತಿ ಸಚಿವ ವಿ.ಸೋಮಣ್ಣ ಸಹಕಾರ ಧ್ವಜಾರೋಹಣ ಮಾಡಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಸಹಕಾರ ಮಹಾ ಮಂಡಳದ ಕಾರ್ಯಚಟುವಟಿ ಕೆಗಳ ಕೈಪಿಡಿಯನ್ನು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಬಿಡುಗಡೆ ಮಾಡುವರು. ಸಹಕಾರಿ ಶಿರೋಮಣಿ ಪುಸ್ತಕ ಬಿಡುಗಡೆಯನ್ನು ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಎನ್.ಗಂಗಣ್ಣ ಬಿಡುಗಡೆ ಮಾಡುವರು.
ಸಂಸದ ಜಿ.ಎಸ್.ಬಸವರಾಜು, ಡಿ.ಕೆ.ಸುರೇಶ್, ಶಾಸಕರುಗಳಾದ ಡಾ.ಜಿ.ಪರಮೇಶ್ವರ್, ಎಸ್.ಆರ್.ಶ್ರೀನಿವಾಸ್, ಜಿ.ಬಿ.ಜ್ಯೋತಿಗಣೇಶ್, ಡಾ.ಹೆಚ್.ಡಿ.ರಂಗನಾಥ್, ಬಿ.ನಾಗೇಶ್ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ 10.30 ರಿಂದ ಸಮ್ಮೇಳನದ ಸಭಾಂಗಣದಲ್ಲಿ ಸುಗಮ ಸಂಗೀತ, 11.30 ರಿಂದ ದಿನದ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. 12 ಗಂಟೆಗೆ ಸಹಕಾರಿ ಧ್ವಜಾರೋಹಣ ನಡೆಯಲಿದ್ದು, 12.10ಕ್ಕೆ ವಸ್ತುಪ್ರದರ್ಶನ ಮಳಿಗೆಗಳ ಉದ್ಘಾಟನಾ ಕಾರ್ಯಕ್ರಮವಿದೆ.
ಇಡೀ ಕಾರ್ಯಕ್ರಮ ಸುಸೂತ್ರವಾಗಿ ನಡೆಯಲು ಕಳೆದೆರಡು ದಿನಗಳಿಂದ ವ್ಯಾಪಕ ಸಿದ್ಧತೆಗಳು ನಡೆದಿವೆ.ಯಶಸ್ವಿನಿ ಆರೋಗ್ಯ ಯೋಜನೆಯನ್ನು ಪುನರ್ ಆರಂಭಿಸುವಂತೆ, ಜಿಲ್ಲೆಯಲ್ಲಿ ಒಂದು ಮೆಘಾ ಹಾಲಿನ ಡೈರಿ ಸ್ಥಾಪಿಸುವಂತೆ ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಬೇಡಿಕೆ ಇಡುವ ನಿರೀಕ್ಷೆ ಇದ್ದು, ಮುಖ್ಯಮಂತ್ರಿಗಳು ಇದೇ ಸಮಾರಂಭದಲ್ಲಿ ಈ ಬೇಡಿಕೆ ಈಡೇರಿಸಲಿದ್ದಾರೆಯೇ ಎಂಬ ಕುತೂಹಲಗಳು ಗರಿಗೆದರಿವೆ. ಈ ಹಿಂದೆ ಜಾರಿಯಲ್ಲಿದ್ದ ಯಶಸ್ವಿನಿ ಯೋಜನೆ ರೈತರಿಗೆ ಸಹಕಾರಿಯಾಗಿತ್ತು. ಬೇರೊಂದು ಆರೋಗ್ಯ ಯೋಜನೆ ಜಾರಿಗೆ ತರುವ ಹೆಸರಿನಲ್ಲಿ ಅದನ್ನು ರದ್ದು ಮಾಡಲಾಗಿದ್ದು, ಹೊಸ ಯೋಜನೆ ಅನುಷ್ಠಾನಕ್ಕೆ ಬರಲಿಲ್ಲ. ಈ ಹಿನ್ನೆಲೆಯಲ್ಲಿ ಯಶಸ್ವಿನಿಯನ್ನೇ ಪುನರ್ ಆರಂಭಿಸುವಂತೆ ಕೆ.ಎನ್.ರಾಜಣ್ಣ ಸೇರಿದಂತೆ ಹಿರಿಯ ಸಹಕಾರಿಗಳು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ