ಪ್ರಮುಖ ದೇವಾಲಯಗಳಲ್ಲಿ ಗೋಶಾಲೆ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ..!

ಬೆಂಗಳೂರು

    ಮೈಸೂರಿನ ಚಾಮುಂಡೇಶ್ವರಿ ದೇವಾಲಯ,ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ದೇವಾಲಯ ಸೇರಿದಂತೆ ರಾಜ್ಯದ ಪ್ರಮಖ ಇಪ್ಪತ್ತೈದು ದೇವಾಲಯಗಳ ವ್ಯಾಪ್ತಿಯಲ್ಲಿ ಬೃಹತ್ ಗೋಶಾಲೆಗಳನ್ನು ನಿರ್ಮಿಸಲು ಸರ್ಕಾರ ನಿರ್ಧರಿಸಿದೆ.

    ಅದೇ ರೀತಿ ರಾಜ್ಯದ ಎಲ್ಲ ದೇವಾಲಯಗಳ ಆಸ್ತಿ ಸಂರಕ್ಷಿಸಲು ಮತ್ತು ಅಲ್ಲಿನ ಆದಾಯ ಸೋರಿಕೆಯನ್ನು ತಡೆಗಟ್ಟಲು ತೀರ್ಮಾನಿಸಿರುವ ಸರ್ಕಾರ ಈ ಕುರಿತು ವಿವರವಾದ ಪರಿಶೀಲನೆ ನಡೆಸಿ ಮುಂದಿನ ಮೂರು ತಿಂಗಳಲ್ಲಿ ವರದಿ ನೀಡುವಂತೆ ಹಿರಿಯ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಸೂಚನೆ ನೀಡಿದೆ.

     ವಿಧಾನಸೌಧದಲ್ಲಿಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಮುಜುರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಈ ಕುರಿತು ವಿವರ ನೀಡಿದರಲ್ಲದೆ,ಚಾಮುಂಡೇಶ್ವರಿ,ಶ್ರೀಕಂಠೇಶ್ವರ,ನಿಮಿಷಾಂಬ,ಕುಕ್ಕೆ ಸುಬ್ರಮಣ್ಯ ದೇವಾಲಯ ಸೇರಿದಂತೆ ರಾಜ್ಯದ ಇಪ್ಪತ್ತೈದು ದೇವಾಲಯಗಳ ವ್ಯಾಪ್ತಿಯಲ್ಲಿ ಬೃಹತ್ ಗೋಶಾಲೆ ಆರಂಭಿಸಲು ನಿರ್ಧರಿಸಲಾಗಿದೆ ಎಂದರು.

    ಗೋಶಾಲೆ ನಿರ್ಮಿಸಲು ಅನುಕೂಲವಾಗುವಂತೆ ಎ ದರ್ಜೆಯ ವ್ಯಾಪ್ತಿಗೆ ಬರುವ ದೇವಾಲಯಗಳ ಸುತ್ತ ಮುತ್ತ ಹತ್ತರಿಂದ ಹದಿನೈದು ಎಕರೆ ಭೂಮಿಯನ್ನು ಗುರುತಿಸಿ ಒದಗಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.ಹೀಗೆ ನಿರ್ಮಾಣವಾಗುವ ಗೋಶಾಲೆಗಳಲ್ಲಿ ನೂರರಿಂದ ಇನ್ನೂರು ಗೋವುಗಳನ್ನು ಸಾಕಲಾಗುವುದು.ಈ ಕಾರ್ಯಕ್ಕಾಗಿ ರಾಮಚಂದ್ರಾಪುರ ಮಠದ ಸ್ವಾಮೀಜಿಯವರ ಮಾರ್ಗದರ್ಶನ ಪಡೆಯಲಾಗುವುದು ಎಂದು ವಿವರ ನೀಡಿದರು.

     ಗೋಸಂರಕ್ಷಣೆ ವಿಷಯದಲ್ಲಿ ರಾಮಚಂದ್ರಾಪುರ ಮಠ ಅತ್ಯುತ್ತಮವಾಗಿ ಕೆಲಸ ಮಾಡಿದೆ.ಹೀಗಾಗಿ ಮಠದ ಸ್ವಾಮೀಜಿಯವರಿಂದ ಮಾರ್ಗದರ್ಶನ ಪಡೆದು ಈ ಇಪ್ಪತ್ತೈದು ಗೋಶಾಲೆಗಳನ್ನು ಮುನ್ನಡೆಸಲಾಗುವುದು ಎಂದು ಸ್ಪಷ್ಟ ಪಡಿಸಿದರು.ಇದೇ ರೀತಿ ಮುಜುರಾಯಿ ದೇವಾಲಯಗಳ ವ್ಯಾಪ್ತಿಯಲ್ಲಿರುವ ಒಟ್ಟು ಆಸ್ತಿಯ ಪ್ರಮಾಣ ಎಷ್ಟು?ಅನ್ನುವುದರ ವಿವರ ಪಡೆಯಬೇಕಿದೆ.ಯಾಕೆಂದರೆ ರಾಜ್ಯದ ಬಹುತೇಕ ಭಾಗಗಳಲ್ಲಿ ದೇವಾಲಯಗಳ ಆಸ್ತಿಯನ್ನು ಒತ್ತುವರಿ ಮಾಡಿದ ಕುರಿತು ದೂರುಗಳು ಬಂದಿವೆ.

    ಹೀಗಾಗಿ ಈ ಕುರಿತು ಸಮಗ್ರ ವಿವರ ಪಡೆದು ದೇವಾಲಯಗಳ ವ್ಯಾಪ್ತಿಯಲ್ಲಿನ ಆಸ್ತಿಯನ್ನು ಸಂರಕ್ಷಿಸಬೇಕಿದೆ.ರಾಜ್ಯದಲ್ಲಿ ಮೂವತ್ಮೂರು ಸಾವಿರಕ್ಕಿಂತ ಹೆಚ್ಚು ಮುಜುರಾಯಿ ದೇವಾಲಯಗಳಿದ್ದು ಇದರ ವ್ಯಾಪ್ತಿಯ ಆಸ್ತಿ,ಪಾಸ್ತಿಯ ಕುರಿತು ಸ್ಪಷ್ಟ ವಿವರ ಪಡೆಯಬೇಕಿದೆ.ಅದೇ ರೀತಿ ದೇವಾಲಯಗಳಲ್ಲಿ ಆದಾಯ ಸೋರಿಕೆಯಾಗುತ್ತಿರುವ ಕುರಿತು ಹಲವು ದೂರುಗಳು ಬಂದಿದ್ದು ಕೆಲ ದೇವಾಲಯಗಳಲ್ಲಿ ಹುಂಡಿಗೆ ಸಿಸಿ ಟಿವಿ ಇದೆ.ಕೆಲವು ಕಡೆ ಇಲ್ಲ.ಹೀಗಾಗಿ ದೇವಾಲಯಗಳ ಆಸ್ತಿ ಸಂರಕ್ಷಣೆ ಮತ್ತು ದೇವಾಲಯಗಳ ಆದಾಯ ಸೋರಿಕೆ ತಡೆಗಟ್ಟುವ ಕುರಿತು ಕ್ರಮ ಕೈಗೊಳ್ಳಬೇಕಿದೆ.

    ಇದೇ ಕಾರಣಕ್ಕಾಗಿ ಮುಜುರಾಯಿ ಇಲಾಖೆಯ ಆಯುಕ್ತರಾದ ರೋಹಿಣಿ ಸಿಂಧೂರಿ ಅವರಿಂದ ವರದಿ ಕೇಳಿದ್ದು ಮುಂದಿನ ಮೂರು ತಿಂಗಳಲ್ಲಿ ಈ ವರದಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ವಿವರ ನೀಡಿದರು.ರಾಜ್ಯದ ನೂರು ಪ್ರಮುಖ ದೇವಾಲಯಗಳಲ್ಲಿ ಸಪ್ತಪದಿ ಕಾರ್ಯಕ್ರಮದಡಿ ನಡೆಸಲುದ್ದೇಶಿಸಿರುವ ಸಪ್ತಪದಿ ಯೋಜನೆಯನ್ನು ಎರಡು ಹಂತಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.

    ಮೊದಲ ಹಂತದ ಸಾಮೂಹಿಕ ವಿವಾಹ ಕಾರ್ಯಕ್ರಮ ಏಪ್ರಿಲ್ 26 ರಂದು ನಡೆಯಲಿದ್ದು ಈ ಹಂತದಲ್ಲಿ ವಿವಾಹವಾಗಲಿಚ್ಚಿಸುವವರು ಅರ್ಜಿ ಸಲ್ಲಿಸಲು ಮಾರ್ಚ್ 27 ಕೊನೆಯ ದಿನವಾಗಿರುತ್ತದೆ ಎಂದು ವಿವರಿಸಿದರಲ್ಲದೆ,ಮೊದಲ ಹಂತದಲ್ಲಿ ವಿವಾಹವಾಗಲು 1218 ಮಂದಿ ಅರ್ಜಿಗಳನ್ನು ಪಡೆದಿದ್ದು ಇದರಲ್ಲಿ ಇನ್ನೂರು ಮಂದಿ ಈಗಾಗಲೇ ದಾಖಲೆ ಸಹಿತ ಅರ್ಜಿ ಸಲ್ಲಿಸಿದ್ದಾರೆ ಎಂದರು.ಎರಡನೇ ಹಂತದ ಸಾಮೂಹಿಕ ವಿವಾಹ ಕಾರ್ಯಕ್ರಮ ಮೇ 24 ರಂದು ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ವಿವಾಹವಾಗುವ ಪ್ರತಿ ಜೋಡಿಯ ಮೇಲೆ ಐವತ್ತೈದು ಸಾವಿರ ರೂಪಾಯಿ ಒದಗಿಸಲಾಗುವುದು ಎಂದು ಹೇಳಿದರು.

    ಪ್ರಮುಖ ದೇವಾಲಯಗಳ ವ್ಯಾಪ್ತಿಯಲ್ಲಿರುವ ಅಂಗಡಿ ಮುಂಗಟ್ಟುಗಳನ್ನು ಕಡಿಮೆ ಬೆಲೆಗೆ ಬಾಡಿಗೆಗೆ ನೀಡಲಾಗಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು,ಜೀವನೋಪಾಯಕ್ಕಾಗಿ ತೆಂಗಿನ ಕಾಯಿ,ಹಣ್ಣು,ಹೂವು ಮಾರುವವರನ್ನು ಹೊರತುಪಡಿಸಿ ಉಳಿದವರಿಗೆ ಮಾರುಕಟ್ಟೆ ದರದಲ್ಲಿ ಅಂಗಡಿಗಳನ್ನು ಬಾಡಿಗೆಗೆ ನೀಡಲು ಟೆಂಡರ್ ಕರೆಯಲಾಗುವುದು ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap