ಬೆಂಗಳೂರು
ನಮ್ಮನ್ನು ಕಂಡ್ರೇ ಇಡೀ ಸರ್ಕಾರಕ್ಕೆ ಭಯವಾಗಿದ್ದು, ಅದಕ್ಕಾಗಿ ಆಡಳಿತಯಂತ್ರಕ್ಕೆ ಬೀಗ ಜಡಿದು ನಮ್ಮ ಮೇಲೆ ಚುನಾವಣೆ ಗೆಲ್ಲಲು ಕಾಂಗ್ರೆಸ್-ಜೆಡಿಎಸ್ ನಾಯಕರು ದಂಡೆತ್ತಿ ಬಂದಿದ್ದಾರೆ ಎಂದು ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಹೇಳಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮನ್ನು ಕಂಡರೆ ಈ ಸರ್ಕಾರಕ್ಕೆ ಭಯ. ಅದಕ್ಕೆ ಇಡೀ ಸರ್ಕಾರ ಬೀಗ ಹಾಕಿಕೊಂಡು ಬಳ್ಳಾರಿಗೆ ಬಂದಿಳಿದಿದೆ ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಮಗೆ ತೊಂದರೆ ಕೊಟ್ಟಿದ್ದು, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರದ ಸಹಾಯದಿಂದ 4 ವರ್ಷಗಳ ಕಾಲ ನಾನು ಜೈಲು ಸೇರುವಂತಾಯಿತು. ದಿನ ಬೆಳಗಾದರೆ ಅಸತ್ಯವನ್ನು ಹೇಳುವ ಉಗ್ರಪ್ಪ, ಶೋಧನಾ ಸಮಿತಿಯಿಂದ ಅಸತ್ಯ ವರದಿ ಕೊಟ್ಟರು. ಐದು ವರ್ಷ ಸರ್ಕಾರ ಇದ್ದಾಗ ಒಂದೂ ರೂಪಾಯಿ ವಸೂಲಿ ಮಾಡಲಿಲ್ಲ. 5 ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನನ್ನಿಂದ ಎಷ್ಟು ಹಣ ವಸೂಲಿ ಮಾಡಿದ್ದಾರೆಂದು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಸವಾಲೆಸೆದರು.
ಬಳ್ಳಾರಿಯನ್ನು ಗಣಿಗಾರಿಕೆ ಮೂಲಕ ಲೂಟಿ ಮಾಡಿದೆವು ಎಂದು ಜಲಸಂಪನ್ಮೂಲ ಸಚಿವರು [ಡಿ.ಕೆ. ಶಿವಕುಮಾರ್] ಆರೋಪಿಸಿ ಪ್ರಚಾರ ನಡೆಸಿದ್ದಾರೆ. ನಮ್ಮ ಅಧಿಕಾರ ಅವಧಿಯಲ್ಲಿ ಜಿಲ್ಲೆ ಯಾವ ಮಟ್ಟಿಗೆ ಅಭಿವೃದ್ಧಿಯಾಗಿದೆ ಎಂದು ಅಂಕಿ ಅಂಶ ಸಮೇತ ನಾವು ಚರ್ಚೆಗೆ ಬರಲು ಸಿದ್ಧ. ನೀವು ಸಿದ್ದರಿದ್ದೀರಿ ಎಂದು ಸಚಿವ ಡಿಕೆ ಶಿವಕುಮಾರ್‍ಗೆ ಸವಾಲೆಸೆದರು.
ಜಿಲ್ಲೆಗೆ 500 ಕೋಟಿ ಬಿಡುಗಡೆ ಮಾಡಿ ಪ್ರವಾಸಿ ತಾಣ ಅಭಿವೃದ್ಧಿ ಮಾಡಿದ್ದೇನೆ. ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿಸಿದ್ದೇವೆ. ಜಿಲ್ಲೆಯ ಜನ ಸದಾ ನಮ್ಮ ಮೇಲೆ ಆಶೀರ್ವಾದ ಮಾಡಿದ್ದಾರೆ ಎಂದು ಗುಡುಗಿದರು.
ಸಿದ್ದರಾಮಯ್ಯ ರಾಮುಲು ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುತ್ತಿರುವುದು ಅವರಿಗೆ ಶೋಭೆಯಲ್ಲ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬಳ್ಳಾರಿಯಲ್ಲಿ ಈಗಾಗಲೇ ಸತತ ಮೂರು ಬಾರಿ ಬಿಜೆಪಿ ಜಯಸಾಧಿಸಿದೆ. ರಾಮುಲು ಮೇಲಿನ ಅಭಿಮಾನದಿಂದ ಜನರು ನಮ್ಮನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ. ಅಲ್ಲಿನ ಜನ ನಮ್ಮನ್ನು ಮನೆ ಮಕ್ಕಳಂತೆ ಕಂಡು ಬಿಜೆಪಿ ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಸರ್ಕಾರದಲ್ಲಿ ನನಗೆ ರಕ್ಷಣೆ ಕೋರಿ ಮನವಿ ಮಾಡಿದ್ದೆ. ಆದರೆ, ನನಗೆ ರಕ್ಷಣೆ ಸಿಗಲಿಲ್ಲ. ಹೈದ್ರಾಬಾದ್ ನಲ್ಲಿ ವೈ ಕೆಟಗರಿ ನಾಯಕರಿಗೆ ಭದ್ರತೆ ನೀಡಿದರೂ, ಆದರೆ ಇಲ್ಲಿ ನಾನು ಬರವಣಿಗೆ ಮೂಲಕ ರಕ್ಷಣೆ ಕೋರಿ ಮನವಿ ಸಲ್ಲಿಸಿದರೂ ಸರ್ಕಾರ ನಿರ್ಲಕ್ಷ್ಯಸಿತು ಎಂದು ವಾಗ್ದಾಳಿ ನಡೆಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ