ಬೆಂಗಳೂರು
ತಮ್ಮ ಮನೆಯ ಕಸವನ್ನು ಮನೆಯಲ್ಲಿಯೇ ಸಂಸ್ಕರಿಸಿ ಗೊಬ್ಬರ ಮಾಡುವ ಹೊಸ ಟಾಸ್ಕ್‍ನ್ನು ಸರ್ಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಸರ್ಕಾರಿ ನೌಕರರಿಗೆ ನೀಡಿದೆ.ಇನ್ನು ಮುಂದೆ ನೌಕರರು, ಅಧಿಕಾರಿಗಳು ತಮ್ಮ ಮನೆಯ ಕಸವನ್ನು ಮನೆಯಲ್ಲಿಯೇ ಗೊಬ್ಬರವನ್ನಾಗಿ ಮಾಡಬೇಕು. ಈ ರೀತಿಯ ಸುತ್ತೋಲೆಯೊಂದನ್ನು ಸರ್ಕಾರ ಹೊರಡಿಸಿದೆ.
ಸರ್ಕಾರಿ ಕಚೇರಿಗಳಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯವನ್ನು ಆಯಾ ಕಚೇರಿಯಲ್ಲೇ ಸಂಸ್ಕರಿಸಿ ಗೊಬ್ಬರ ಮಾಡಬೇಕು. ಉಳಿದಂತೆ ಒಣ ಕಸ ಹಾಗೂ ಇ-ತ್ಯಾಜ್ಯಗಳನ್ನು ಬಿಬಿಎಂಪಿ ವಾಹನಗಳಿಗೆ ನೀಡಬೇಕು.ಜೊತೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ವಾಸವಾಗಿರುವ ಸರ್ಕಾರಿ ನೌಕರರು, ಅಧಿಕಾರಿಗಳು ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯವನ್ನು ತಮ್ಮ ಮನೆಯಲ್ಲೇ ಸಂಸ್ಕರಿಸಿ ಗೊಬ್ಬರ ಮಾಡಬೇಕೆಂದು ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಲಕ್ಷ್ಮಿಸಾಗರ್ ಆದೇಶ ನೀಡಿದ್ದಾರೆ.
ಈ ಆದೇಶವನ್ನು ಪಾಲಿಸಿರುವ ಬಗ್ಗೆ ಸರ್ಕಾರಕ್ಕೆ ವರದಿ ನೀಡಬೇಕೆಂದು ಬಿಬಿಎಂಪಿಗೆ ಸೂಚನೆಯನ್ನು ಕೊಟ್ಟಿದ್ದಾರೆ. ಕಡ್ಡಾಯವಾಗಿ ಹಸಿ ತ್ಯಾಜ್ಯ, ಒಣ ತ್ಯಾಜ್ಯವನ್ನು ವಿಂಗಡಿಸಿ ಸಂಗ್ರಹಿಸಲು ಮೂರು ಬಗೆಯ ಡಸ್ಟ್ ಬಿನ್‍ಗಳನ್ನು ಇಡಲು ಕ್ರಮ ಕೈಗೊಳ್ಳುವುದು, ಎಲ್ಲಾ ಕಚೇರಿಗಳಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಹಾಗೂ ಬಳಸಿ ಬಿಸಾಡುವಂತಹ ವಸ್ತುಗಳನ್ನು ಸಂಪೂರ್ಣವಾಗಿ ನಿಷೇಧಿಸುವುದು,
ಎಲ್ಲಾ ಕಚೇರಿಗಳಲ್ಲಿ ಉತ್ಪತ್ತಿಯಾಗುವ ಪುನರ್ ಬಳಕೆಯಾಗುವ ವಸ್ತುಗಳನ್ನು ಮರು ಬಳಕೆ ಮಾಡಿಕೊಳ್ಳಲು ನೋಂದಾಯಿತ ಪುನರ್ ಬಳಕೆದಾರರೊಂದಿಗೆ ನೋಂದಣಿ ಮಾಡಿಕೊಳ್ಳುವುದು, ಬಿಬಿಎಂಪಿ ವ್ಯಾಪ್ತಿಗೆ ಬರುವ ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ, ಸಿಬ್ಬಂದಿಗಳು ಹಣ್ಣು ಮತ್ತು ತರಕಾರಿ ಇತ್ಯಾದಿಗಳ ಖರೀದಿಯಲ್ಲಿ ಬಟ್ಟೆ, ನಾರು, ಉಣ್ಣೆ ಚೀಲಗಳನ್ನು ಬಳಸಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
