ಬೆಂಗಳೂರು:
ಆರ್ಥಿಕ ದುಸ್ಥಿತಿಯಲ್ಲೂ ವೈದ್ಯರ ವೇತನ ಪರಿಷ್ಕರಿಸಲು ಸರಕಾರ ಒಪ್ಪಿದ್ದು, ಮುಷ್ಕರ ಕೈ ಬಿಡುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ವೈದ್ಯರಲ್ಲಿ ಮನವಿ ಮಾಡಿದರು.ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆ ಸಂಬಂಧ ಮುಷ್ಕರಕ್ಕೆ ಕರೆ ಕೊಟ್ಟಿದ್ದ ವೈದ್ಯಾಧಿಕಾರಿಗಳ ಸಂಘದ ಪದಾಧಿಕಾರಿಗಳೊಂದಿಗೆ ಮಂಗಳವಾರ ಸಭೆ ನಡೆಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ವೈದ್ಯರ ಬೇಡಿಕೆಯಾದ ವೇತನ ಪರಿಷ್ಕರಣೆ ಸಂಬಂಧ ನಡೆಸಿದ ಸಭೆ ಫಲಪ್ರದವಾಗಿದೆ. ವೈದ್ಯರು ಆರೋಗ್ಯ ಕ್ಷೇತ್ರದಲ್ಲಿ ವಸ್ತು ನಿಷ್ಠೆಯಿಂದ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಅವರಿಗೆ ನೈತಿಕ ಸ್ಪೂರ್ತಿ ಕೊಡುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿದ್ದೇವೆ.ಕಳೆದ ಆರು ತಿಂಗಳಲ್ಲಿ ಆರೋಗ್ಯ ಇಲಾಖೆಯ ಎಲ್ಲಾ ಪ್ರಸ್ತಾವನೆಗಳಿಗೂ ಮುಖ್ಯಮಂತ್ರಿಗಳು ಒಪ್ಪಿದ್ದಾರೆ. ಅದರಂತೆ ಈ ಬೇಡಿಕೆಯು ಈಡೇರಲಿದೆ. ಆರ್ಥಿಕ ಇತಿಮಿತಿಯಲ್ಲಿ ಹೆಚ್ಚು ಮಾಡಲು ಕ್ರಮ ಕೈಗೊಳ್ಳುತ್ತೇವೆ. ಈ ಸಂಬಂಧ ಆರ್ಥಿಕ ಇಲಾಖೆಗೆ ಪೂರ್ಣ ಮಾಹಿತಿ ನೀಡಿದ್ದೇವೆ ಎಂದರು.
ವೈದ್ಯರಿಗೆ 6 ವರ್ಷ, 13 ವರ್ಷ ಹಾಗೂ 20 ವರ್ಷ ಸೇವೆ ಆಧಾರದ ಮೇಲೆ ಮೂರು ಹಂತದ ಬಡ್ತಿ ಮತ್ತು ವೇತನ ಪರಿಷ್ಕರಣೆ ಆಗಬೇಕಿದೆ. ಈ ಬಗ್ಗೆ ಪದಾಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ. ಇದರಿಂದ ಸರಕಾರಕ್ಕೆ ಹೆಚ್ಚಿನ ಹೊರೆ ಬೀಳಲಿದೆ. ಆದರೂ ಸಹ ವೈದ್ಯರ ಬೇಡಿಕೆಗೆ ಮನ್ನಣೆ ನೀಡಲಿದ್ದೇವೆ ಎಂದರು.ಸಭೆಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು, ಉಪಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ , ವೈದ್ಯಾಧಿಕಾರಿಗಳ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ