ಬೆಂಗಳೂರು
ಸಮ್ಮಿಶ್ರ ಸರ್ಕಾರ ಎನ್ನುವ ಮರದಲ್ಲಿ ಕಾಂಗ್ರೆಸ್ ಎನ್ನುವ ಕಾಗೆ ಕೂತಮೇಲೆ ಕುಮಾರಸ್ವಾಮಿ ಎಂಬ ಕೊಂಬೆ ಮುರಿಯಲೇಬೇಕು ಎಂದು ಬಿಜೆಪಿ ಶಾಸಕ ಆರ್.ಅಶೋಕ್ ಮಾರ್ಮಿಕವಾಗಿ ಲೇವಡಿ ಮಾಡಿದ್ದಾರೆ.
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರಾಜೀನಾಮೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರು, ಎಷ್ಟು ದಿನಗಳು ಅಂತ ರಾಜೀನಾಮೆ ಕೊಡುತ್ತೇನೆ ಎಂದು ಹೇಳುತ್ತಲೇ ಇರುತ್ತಾರೆ. ಅವರು ಪದೇಪದೇ ರಾಜೀನಾಮೆ ಕೊಡುತ್ತೇನೆ ಎಂದು ಹೇಳುವ ಬದಲು ಒಂದು ಬಾರಿ ರಾಜೀನಾಮೆ ಕೊಟ್ಟು ಸರ್ಕಾರದಿಂದ ಹೊರಗೆ ಬರಬೇಕು. ಅವರೇ ಹೇಳಿರುವಂತೆ ಕುಮಾರಸ್ವಾಮಿ ಯವರದ್ದು ತಂತಿಯ ಮೇಲಿನ ನಡಿಗೆ ಎಂದು ತಿರುಗೇಟು ನೀಡಿದರು. ಕುಮಾರಸ್ವಾಮಿ ಅವರು ರಾಜೀನಾಮೆ ಕೊಟ್ಟು ಹೊರಬರುವುದನ್ನು ಕುಂತಿಪುತ್ರರಂತೆ ಬಿಜೆಪಿ ಕಾಯುತ್ತಿದೆ ಎಂದರು.
ಕಾಂಗ್ರೆಸ್ ಪಕ್ಷದ ನಾಯಕರು ದಿನನಿತ್ಯ ಕುಮಾರಸ್ವಾಮಿ ಅವರಿಗೆ ಕಿರುಕುಳಕೊಡುತ್ತಿದ್ದಾರೆ. ಮುಖ್ಯಮಂತ್ರಿಯವರ ಅಡಿ ಕೆಲಸ ಮಾಡಬೇಕಾದ ಸಚಿವರು, ಕುಮಾರಸ್ವಾಮಿ ಅವರ ಮಾತಿಗೆ ಯಾವುದೇ ಬೆಲೆ ಕೊಡುತ್ತಿಲ್ಲ. ಅವರೆಲ್ಲ ಸಿದ್ದರಾಮಯ್ಯ ಅವರೇ ತಮ್ಮ ಮುಖ್ಯಮಂತ್ರಿ ಎನ್ನುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಎನ್ನುವುದು ಕಳ್ಳ ಪೊಲೀಸ್ ಆಟದಂತಿದೆ ಎಂದು ಟೀಕಿಸಿದರು.
ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಅಶೋಕ್, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರದಲ್ಲಿ ಗೊಂದಲ ಹುಟ್ಟುಹಾಕುತ್ತಿದ್ದಾರೆ. ಲೋಕಸಭೆ ಚುನಾವಣೆವರೆಗೂ ಸಮ್ಮಿಶ್ರ ಸರ್ಕಾರ ಇರುವುದಕ್ಕೆ ಸಿದ್ದರಾಮಯ್ಯ ಬಿಡುವುದಿಲ್ಲ. ಸಿದ್ದರಾಮಯ್ಯ ಕುಮಾರಸ್ವಾಮಿ ಅವರನ್ನು ಗುಮಾಸ್ತರಂತೆ ನಡೆಸಿಕೊಳ್ಳುತ್ತಿದ್ದಾರೆ. ಸರ್ಕಾರ ಗೊಂದಲದ ಗೂಡಾಗಿದ್ದು, ಲೋಕಸಭೆ ಚುನಾವಣೆವರೆಗೂ ಸರ್ಕಾರವನ್ನು ಮುನ್ನಡೆಸಲು ಸಿದ್ದರಾಮಯ್ಯ ಬಿಡುವುದಿಲ್ಲ ಎಂದು ಅವರು ಭವಿಷ್ಯ ನುಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ