ಸರ್ಕಾರಕ್ಕೆ ಅಸ್ಥಿರತೆ ಭೀತಿಯಿಲ್ಲ : ಕುಮಾರಸ್ವಾಮಿ

ಬೆಂಗಳೂರು

       ತಮ್ಮ ನೇತೃತ್ವದ ಸಮ್ಮಿಶ್ರ ಸರ್ಕಾರ ಬಂಡೆಯಂತೆ ಸುಭದ್ರವಾಗಿದ್ದು ಅದಕ್ಕೆ ಯಾವ ಅಸ್ಥಿರತೆಯ ಭೀತಿಯೂ ಇಲ್ಲ.ಹೀಗಾಗಿ ವಿಶ್ವಾಸ ಮತ ಯಾಚಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

       ನಗರದಲ್ಲಿಂದು ಮಾತನಾಡಿದ ಅವರು, ಕುಮಾರಸ್ವಾಮಿ ಬಜೆಟ್ ಮಂಡಿಸುವುದು ಅನುಮಾನ ಎಂದು ಬಿಜೆಪಿಯವರು ನೀಡುತ್ತಿರುವ ಹೇಳಿಕೆಗಳಿಗೆ ಅರ್ಥವೂ ಇಲ್ಲ.ಹೀಗಾಗಿ ಅದಕ್ಕೆ ಉತ್ತರ ನೀಡುವ ಅವಶ್ಯಕತೆಯೂ ಇಲ್ಲ ಎಂದರು.

       ಅವರ ಈ ರೀತಿಯ ಹೇಳಿಕೆಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಅವರು ಯಾವುದೋ ಲೋಕದಲ್ಲಿದ್ದಾರೆ. ಆ ಲೋಕದಲ್ಲಿಯೇ ಅವರು ವಿಹರಿಸಿಕೊಂಡಿರಲಿ.ವಿಹರಿಸಿಕೊಂಡು ನೆಮ್ಮದಿಯಾಗಿರಲಿ. ನಾನು ನನ್ನ ಪಾಡಿಗೆ ಕೆಲಸ ಮಾಡುತ್ತೇನೆ ಎಂದರು.

         ಸರ್ಕಾರ ಸುಭದ್ರವಾಗಿದ್ದು, ವಿಶ್ವಾಸ ಮತ ಯಾಚನೆ ಮಾಡುವ ಅಗತ್ಯವಿಲ್ಲ. ಬಿಜೆಪಿಯವರು ಒಳ್ಳೆಯ ಕೆಲಸಕ್ಕೆ ಅಡ್ಡಿಪಡಿಸುವ ಪ್ರಯತ್ನವಾಗಿದೆ. ಉತ್ತಮ ಬಜೆಟ್ ಮಂಡನೆ ಮಾಡಿ ಒಳ್ಳೆಯ ಆಡಳಿತ ನೀಡಬೇಕೆಂದು ನಾನು ಪ್ರಯತ್ನಿಸುತ್ತಿದ್ದೇನೆ.

        ರಥ ಎಳೆಯುವಾಗ ಯಡೆಮಟ್ಟೆಯನ್ನು ಕೊಟ್ಟು ಅಡ್ಡಹಾಕುವಂತೆ ಬಿಜೆಪಿಯವರು ಒಳ್ಳೆ ಕೆಲಸ ಮಾಡಲು ಹೊರಟಿರುವ ನಮಗೆ ಅಡ್ಡಿಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿಸಿದರು.

         ಕೆಲವು ಬಿಜೆಪಿ ನಾಯಕರ ಹೇಳಿಕೆಗಳು ಅದಕ್ಕೆ ಪೂರಕವಾಗಿವೆ. ಆದರೆ ಸರ್ಕಾರ ಬೀಳಿಸುವ ಅವರ ಯಾವುದೇ ಪ್ರಯತ್ನಗಳು ಫಲ ನೀಡುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.

         ಬಿಜೆಪಿ ನಾಯಕರ ಮಾತುಗಳಿಗೆ ನಾಳೆಯೇ ಪರದೆ ಬೀಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು,ಈ ಮೂಲಕ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಲಭಿಸಲಿವೆ. ಕಾಂಗ್ರೆಸ್ ಶಾಸಕರು ಹಾಜರಾಗುತ್ತಾರೋ ಇಲ್ಲವೋ, ಅತೃಪ್ತರು ಬರುತ್ತಾರೋ ಇಲ್ಲವೋ ಎಂಬೆಲ್ಲಾ ಗೊಂದಲಗಳು ನಿವಾರಣೆಯಾಗುತ್ತವೆ ಎಂದರು.ಮೂರ್ನಾಲ್ಕು ಶಾಸಕರನ್ನು ಪಂಚತಾರಾ ಹೋಟೆಲ್ಲಿನಲ್ಲಿ ಉಳಿಸಿ ಆ ಮೂಲಕ ಜನರಲ್ಲಿ ಗೊಂದಲ ಮೂಡಿಸಲು ಬಿಜೆಪಿ ಯತ್ನ ನಡೆಸುತ್ತಿದೆ.ಆದರೆ ಆಪರೇಷನ್ ಕಮಲ ಕಾರ್ಯಾಚರಣೆ ಅಟ್ಟರ್ ಪ್ಲಾಪ್ ಷೋ ಆಗುವುದನ್ನು ರಾಜ್ಯದ ಜನರೇ ಗಮನಿಸುತ್ತಾರೆ ಎಂದರು.

         ಈ ಹಿಂದೆ ನೂರಾ ಹತ್ತು ಸೀಟುಗಳನ್ನು ಗೆದ್ದಾಗ ಪರಿಸ್ಥಿತಿ ಬೇರೆ ಇತ್ತು.ಆದರೆ ಇವತ್ತಿನ ಸ್ಥಿತಿ ಬೇರೆ.ಆಪರೇಷನ್ ಮಾಡಲು ಅವರೇನಾದರೂ ಮುಂದೆ ಬಂದರೆ ತಾವೇ ಖುದ್ದಾಗಿ ಆಪರೇಷನ್‍ಗೆ ಒಳಗಾಗಬೇಕಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

        ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಸಿಎಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಅವರನ್ನು ಪ್ರತಿಭಟನಾ ಸ್ಥಳಕ್ಕೆ ತೆರಳಿ ಅವರ ಮನವಿಗಳನ್ನು ಸ್ವೀಕರಿಸಿದ್ದಾರೆ. ಅದರಲ್ಲಿ ಸಾಧುವಾದಂತಹ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap