ಬೆಂಗಳೂರು
ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿ ರಾಜ್ಯದ ಸರ್ಕಾರಿ ಆಸ್ಪತ್ರೆಗಳು ಲಾಭದಲ್ಲಿ ನಡೆಯುತ್ತಿದ್ದು ಈ ವರ್ಷ 500 ಕೋಟಿ ರೂಗಳ ಆದಾಯ ಗಳಿಸುವ ನಿರೀಕ್ಷೆ ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.
ವಿಕಾಸಸೌಧದಲ್ಲಿಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು ಈ ವಿಷಯ ತಿಳಿಸಿದರಲ್ಲದೆ,ಕಳೆದ ಮೂರು ತಿಂಗಳಲ್ಲಿ ಸರ್ಕಾರಿ ಆಸ್ಪತ್ರೆಗಳು ನೂರಾ ಎಂಟು ಕೋಟಿ ರೂ ಆದಾಯ ಗಳಿಸಿದ್ದು,ಈ ಪೈಕಿ ಹತ್ತೊಂಭತ್ತು ಆಸ್ಪತ್ರೆಗಳು ಒಂದು ಕೋಟಿ ರೂಗೂ ಮಿಕ್ಕು ಆದಾಯ ಗಳಿಸಿವೆ ಎಂದು ವಿವರ ನೀಡಿದರು.
ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆ,ಮೈಸೂರಿನ ಕೃಷ್ಣ ರಾಜೇಂದ್ರ ಆಸ್ಪತ್ರೆ,ಮಂಗಳೂರಿನ ವೆನ್ ಲಾಕ್ ಆಸ್ಪತ್ರೆ,ಮಂಡ್ಯದ ಮೆಡಿಕಲ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ಸೇರಿದಂತೆ ಒಟ್ಟು ಹತ್ತೊಂಭತ್ತು ಆಸ್ಪತ್ರೆಗಳು ಕೋಟಿ ರೂಗಳಿಗೂ ಮಿಕ್ಕು ಆದಾಯ ಗಳಿಸಿವೆ ಎಂದರು.
ಈ ಮುಂಚೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಪೈಕಿ ಮೂವತ್ತು ಆಸ್ಪತ್ರೆಗಳು ಮಾತ್ರ ಆದಾಯ ಗಳಿಸುತ್ತಿದ್ದವು.ಆದರೆ ಈಗ ಮಹಾನಗರಗಳಿಂದ ಹಿಡಿದು,ತಾಲ್ಲೂಕು ಆಸ್ಪತ್ರೆಗಳ ತನಕ ಎಲ್ಲ ಆಸ್ಪತ್ರೆಗಳು ಲಾಭದಾಯಕ ಸ್ಥಿತಿಯಲ್ಲಿವೆ ಎಂದರು.
ತಾಲ್ಲೂಕು ಮಟ್ಟದ ಆಸ್ಪತ್ರೆಗಳಿಗೆ ಎ.ಸಿ ಗಳು ಅಧ್ಯಕ್ಷರಾಗಿರುತ್ತಾರೆ,ಜಿಲ್ಲಾ ಮಟ್ಟದ ಆಸ್ಪತ್ರೆಗಳಿಗೆ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುತ್ತಾರೆ.ಇನ್ನು ಮುಂದೆ ಆಯಾ ಆಸ್ಪತ್ರೆಗಳು ಗಳಿಸುವ ಆದಾಯದಲ್ಲಿ ಶೇಕಡಾ ಐವತ್ತರಷ್ಟು ಹಣವನ್ನು ಔಷಧಿ ಮತ್ತಿತರ ಉಪಕರಣಗಳ ಖರೀದಿಗೆ ಕೊಡಲು ನಿರ್ಧರಿಸಲಾಗಿದೆ.
ಸನ್ನಿವೇಶಕ್ಕೆ ಅನುಗುಣವಾಗಿ ಇದರ ಪ್ರಮಾಣವನ್ನು ಶೇಕಡಾ ಎಂಭತ್ತರವರೆಗೆ ಏರಿಸುವ ಚಿಂತನೆ ಇದೆ.ಉಳಿದಂತೆ ಶೇಕಡಾ ಇಪ್ಪತ್ತರಷ್ಟು ಹಣವನ್ನು ಆಸ್ಪತ್ರೆಗಳು ಸರ್ಕಾರಕ್ಕೆ ನೀಡಬೇಕಾಗುತ್ತದೆ ಎಂದರು.
ಹೊರರೋಗಿಗಳ ವಿಭಾಗ ಇರಬಹುದು,ಒಳರೋಗಿಗಳ ವಿಭಾಗ ಇರಬಹುದು.ಒಟ್ಟಿನಲ್ಲಿ ರಾಜ್ಯದ 405 ಸರ್ಕಾರಿ ಆಸ್ಪತ್ರೆಗಳ ಪೈಕಿ ಬಹುತೇಕ ಆಸ್ಪತ್ರೆಗಳು ಆದಾಯ ಹೆಚ್ಚಳ ಮಾಡಿಕೊಂಡಿರುವುದರಿಂದ ಮುಂದಿನ ದಿನಗಳಲ್ಲಿ ಆರೋಗ್ಯದ ಸಮಸ್ಯೆ ಇರುವವರು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣ ಪಡೆಯುವ ಸಂಪ್ರದಾಯ ರದ್ದಾಗಬಹುದು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ತಾವು ಅಧಿಕಾರಕ್ಕೆ ಬಂದ ಮೇಲೆ ಸರ್ಕಾರಿ ಅಸ್ಪತ್ರೆಗಳಿಗೆ 619 ಮಂದಿ ವೈದ್ಯರನ್ನು ನೇಮಕ ಮಾಡಿರುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದ ಅವರು,ಸರ್ಕಾರಿ ಆಸ್ಪತ್ರೆಗಳಲ್ಲಿ ಹಲವು ಹುದ್ದೆಗಳು ಸೇರಿದಂತೆ ಒಟ್ಟು ಮೂವತ್ನಾಲ್ಕು ಸಾವಿರ ಮಂದಿ ಸಿಬ್ಬಂದಿಯ ಕೊರತೆ ಇದೆ ಎಂದು ವಿವರಿಸಿದರು.
ಖಾಸಗಿ ಆಸ್ಪತ್ರೆಗಳು ತಾವು ನೀಡುವ ಚಿಕಿತ್ಸೆಗೆ ಪಡೆಯುವ ಶುಲ್ಕದ ವಿವರವನ್ನು ಆಸ್ಪತ್ರೆಯ ಫಲಕದಲ್ಲಿ ಪ್ರಕಟಿಸಬೇಕು ಎಂದು ಕರ್ನಾಟಕ ಆರೋಗ್ಯ ಕಾಯ್ದೆಯಲ್ಲಿದ್ದು ಇದನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಬೇಸಿಗೆ ಶುರುವಾಗಿರುವುದರಿಂದ ರಾಜ್ಯದಲ್ಲಿ ಹಬ್ಬಬಹುದಾದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಔಷಧಗಳ ಕೊರತೆ ಇಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು,ಹಾಗೊಂದು ವೇಳೆ ಯಾವುದೇ ಆಸ್ಪತ್ರೆಯಲ್ಲಿ ಔಷಧಗಳ ಕೊರತೆ ಇದೆ ಎಂಬ ಮಾತು ಕೇಳಿ ಬಂದರೆ ಸಂಬಂಧಪಟ್ಟ ಜಿಲ್ಲಾ ಆರೋಗ್ಯಾಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.ಸುದ್ದಿಗೋಷ್ಟಿಯಲ್ಲಿ ಮದನ್ ಗೋಪಾಲ್,ಶಿವಕುಮಾರ್ ಸೇರಿದಂತೆ ಹಲ ಪ್ರಮುಖರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
