ವಿದ್ಯಾರ್ಥಿ ವೇತನಗಳ ಮೇಲೆ ಸರ್ಕಾರದ ಸರ್ಜಿಕಲ್ ಸ್ಟ್ರೈಕ್

ತುಮಕೂರು:

ವಿಶೇಷ ವರದಿ : ಯೋಗೇಶ್ ಮಲ್ಲೂರು

      ಬಡ ಮತ್ತು ಮಧ್ಯಮ ವರ್ಗದ ಸರ್ಕಾರಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಶೈಕ್ಷಣಿಕ ದಾರಿಗೆ ವಿದ್ಯಾರ್ಥಿ ವೇತನವೇ ಜೀವಾಳವಾಗಿದ್ದು, ಇಂದಿನ ಸರ್ಕಾರ ಅದನ್ನೇ ಮೊಟಕುಗೊಳಿಸಲು ಮುಂದಾಗಿರುವುದು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕನ್ನು ಕಸಿದುಕೊಂಡಂತಾಗಿದೆ. ಸರ್ಕಾರದ ಈ ನಿರ್ಧಾರದಿಂದ ರಾಜ್ಯದ 15 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಕತ್ತಲು ಕವಿಯುವ ಮುನ್ಸೂಚನೆ ಇದೆ

ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ರದ್ದತಿಗೆ ಸುತ್ತೋಲೆ :

     ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ಬಜೆಟ್‍ನಲ್ಲಿ ಹಣವಿಲ್ಲ, ಆಗಾಗಿ 2019-20ನೇ ಸಾಲಿನಲ್ಲಿ ವಿದ್ಯಾರ್ಥಿವೇತನ ಕ್ಕೆ ಹೊಸದಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳನ್ನು ಪರಿಗಣಿಸಲಾಗುವುದಿಲ್ಲ. ಎಂದು ಸರ್ಕಾರದ ಆದೇಶ ಹೊರಡಿಸಿದ್ದು ಈಗಾಗಲೇ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳು ವೇತನಕ್ಕೆ ಆನ್‍ಲೈನಲ್ಲಿ ಅರ್ಜಿ ಸಲ್ಲಿಸಿ ಸರ್ಕಾರದ ಈ ನಿರ್ಧಾರದಿಂದ ಆತಂಕ ಪಡುತ್ತಿದ್ದಾರೆ.

      ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತರು ಈ ಸಂಬಂಧವಾಗಿ ಸುತ್ತೋಲೆ ಹೊರಡಿಸಿದ್ದು, ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ಸುತ್ತೋಲೆ ಹೊರಬಿದ್ದಿರುವುದು ವಿದ್ಯಾರ್ಥಿಗಳ ಪಾಲಿನ ದುರಂತ ಸ್ಥಿತಿಯಾಗಿದೆ. ಸರ್ಕಾರ ಈ ಕೂಡಲೇ ಇದನ್ನು ರದ್ದುಪಡಿಸಿ ವಿದ್ಯಾರ್ಥಿ ವೇತನದ ಮುಂಜೂರಾತಿಗೆ ಕ್ರಮ ಕೈಗೊಂಡರೆ ಲಕ್ಷಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಬೆಳಕು ಚೆಲ್ಲಿದಂತಾಗುತ್ತದೆ.

ಸರ್ಕಾರ ಕಾಟಾಚಾರಕ್ಕೆ ದಿನಾಂಕ ವಿಳಂಬ :

     ಸರ್ಕಾರ ಜಾರಿಗೆ ತಂದ ಎಸ್.ಎಸ್.ಪಿ (Sಣಚಿಣe Sಛಿhoಟಚಿಡಿshiಠಿ Poಡಿಣಚಿಟ) ಮೂಲಕ ಆರು ಇಲಾಖೆಗಳ ಮೂಲಕ ವಿದ್ಯಾರ್ಥಿ ವೇತನದ ಅರ್ಜಿ ಆಹ್ವಾನಿಸಿದೆ ಆದರೆ ಅರ್ಜಿಗಳು ಮಾತ್ರ ಸಲ್ಲಿಕೆಯಾಗುತ್ತಿಲ್ಲ. ವಿದ್ಯಾರ್ಥಿ ವೇತನದ ಅಂತಿಮ ದಿನಾಂಕವನ್ನು ಸರ್ಕಾರ ಮೇಲ್ನೊಟಕ್ಕೆ ಡಿಸೆಂಬರ್ 31ಕ್ಕೆ ಎಂದು ವಿಳಂಬ ಮಾಡಿದ್ದರೂ, ಅರ್ಜಿ ಸ್ವೀಕೃತಗೊಳ್ಳದೆ ವಿದ್ಯಾರ್ಥಿಗಳು ಹತ್ತೂ ಹಲವು ಸಮಸ್ಯೆಗಳಿಂದ ಅರ್ಜಿ ಹಾಕಲು ಪರದಾಡುವಂತಾಗಿದೆ. ಈ ಹಿಂದೆ ಪರಿಶಿಷ್ಟ ಜಾತಿ, ಪಂಗಡ ಹಾಗೂ ಅಲ್ಪ ಸಂಖ್ಯಾತರ ಮೆಟ್ರಿಕ್ ನಂತರದ ಅರ್ಜಿಗಳನ್ನು ಆಧಾರ್ ನಂಬರ್‍ನೊಂದಿಗೆ ನೋದಾಯಿಸಬಹುದಾಗಿತ್ತು. ಆದರೆ 2019-20ರ ಸಾಲಿನ ವಿದ್ಯಾರ್ಥಿ ವೇತನದ ಅವಧಿ ವಿಳಂಬವಾಗಿದ್ದರೂ ವೆಬ್‍ಸೈಟ್‍ನಲ್ಲಿ ಅರ್ಜಿಗಳನ್ನು ಸಲ್ಲಿಸಲು ಆಗುತ್ತಿಲ್ಲ. ಸರ್ಕಾರ ಈ ಕಾಟಾಚಾರದ ವಿಳಂಬ ನೀತಿಗೆ ಓದುಗ ಮಂದಿ ಸಿಲುಕಿ ವ್ಯಥೆ ಪಡುವಂತಾಗಿದೆ.

ವಿದ್ಯಾರ್ಥಿಗಳು ಸೈಬರ್ ಸೆಂಟರ್‍ಗಳತ್ತ ಅಲೆದಾಟ :

     ಈಗಾಗಲೇ ಪದವಿ ವಿದ್ಯಾರ್ಥಿಗಳು ರಜೆಯಲ್ಲಿದ್ದರೂ ವಿದ್ಯಾರ್ಥಿ ವೇತನದ ಅರ್ಜಿ ಸಲ್ಲಿಸಲಿಕ್ಕಾಗಿ ಸೈಬರ್ ಸೆಂಟರ್‍ಗಳತ್ತ ಅಲೆದಾಡುವಂತಾಗಿದೆ. ಕಾಲೇಜುಗಳ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ತಮ್ಮ ಸ್ಕಾಲರ್ ಅರ್ಜಿಯನ್ನು ಹಾಕುವಂತೆ ಪೀಡಿಸುತ್ತಿರುವುದು ಒಂದೆಡೆಯಾದರೆ, ಇತ್ತ ವೆಬ್‍ಸೈಟ್‍ನಲ್ಲಿ ಅರ್ಜಿ ಸ್ವೀಕೃತವಾಗದಿರುವುದು ಮತ್ತೊಂದು ಸಮಸ್ಯೆಯಾಗಿದ್ದು ವಿದ್ಯಾರ್ಥಿಗಳಿಗೆ ಇದೊಂದು ರೀತಿಯ ತಲೆನೋವಾಗಿ ಪರಿಣಮಿಸಿದೆ. ಸೈಬರ್ ಸೆಂಟರ್‍ಗಳವರು ವಿದ್ಯಾರ್ಥಿಗಳ ಅರ್ಜಿ ದಾಖಲೆಗಳನ್ನು ಪಡೆದು ದಿನನಿತ್ಯ ಪ್ರಯತ್ನ ಪಡುತ್ತಿದ್ದಾರೆ, ಇಂದಿಗೂ ಅರ್ಜಿ ಸಲ್ಲಿಕೆಯಾಗದೆ ವಿದ್ಯಾರ್ಥಿಗಳು ಸೈಬರ್‍ಗಳತ್ತ ಬಂದು ಹೋಗುವ ಪ್ರಮೇಯ ಉಂಟಾಗಿದೆ.

     ಸರ್ಕಾರ ಅರ್ಜಿ ಸಲ್ಲಿಕೆ ದಿನಾಂಕವನ್ನು ಮುಂದೂಡುವುದಕ್ಕಿಂತ ಮೊದಲಿನಿಂದ ಇದುವರೆಗೂ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಒಂದು ಅರ್ಜಿಯೂ ಸ್ವೀಕೃತಗೊಂಡಿಲ್ಲಾ ಎಂಬುದು ವಿದ್ಯಾರ್ಥಿ ಸಮೂಹ ಅಳಲಾಗಿದೆ. ಮುಂದೂಡಿರುವ ದಿನಾಂಕ ದಿನೇ ದಿನೇ ಕ್ಷೀಣಿಸುತ್ತಾ ಬರುತ್ತಿದೆ. ಇನ್ನೂ ಒಂದು ಅರ್ಜಿ ಸಲ್ಲಿಕೆಯಾಗದ ಬಗ್ಗೆ ಸಂಬಂಧಪಟ್ಟ ಯಾವುದೇ ಇಲಾಖೆಗಳಲ್ಲಿ ಲಭ್ಯ ಮಾಹಿತಿ ದೊರಕುತ್ತಿಲ್ಲ.

ವಿದ್ಯಾಸಿರಿ ಯೋಜನೆಯಲ್ಲೂ ಹಲವು ತಿದ್ದುಪಡಿ -ವಿದ್ಯಾರ್ಥಿ ಸಮಸ್ಯೆಗಳು ಇಮ್ಮಡಿ :

    ಪ್ರಸ್ತುತ 2019-20ನೇ ಸಾಲಿನ ಬಿಇಡಿ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಗೆ ಅರ್ಜಿ ಸಲ್ಲಿಕೆ ಅವಕಾಶವನ್ನು ತಡೆ ಹಿಡಿಯಲಾಗಿದೆ. ಪದವಿಯಿಂದ ನೇರವಾಗಿ ಬಿಇಡಿ ಮಾಡುವ ವಿದ್ಯಾರ್ಥಿಗಳಿಗೂ ಹಾಗೂ ಸ್ನಾತಕೋತ್ತರ ಪದವಿ ಮುಗಿಸಿ ಪ್ರಸಕ್ತ ವರ್ಷದಲ್ಲಿ ಬಿಇಡಿ ಮಾಡುವ ವಿದ್ಯಾರ್ಥಿಗಳಿಗೂ ಅರ್ಜಿಗಳು ಸಲ್ಲಿಕೆಯಾಗುತ್ತಿಲ್ಲ. ಈ ಕುರಿತು ಪ್ರಶ್ನಿಸಿದರೆ ವಿದ್ಯಾರ್ಥಿಗಳೇ ತಪ್ಪಿತಸ್ಥರೆನ್ನುವಂತೆ ಸಮಜಾಯಿಷಿ ಹೇಳುತ್ತಾರೆ ಅಧಿಕಾರಿಗಳು.

    ಇದರಿಂದ ಪ್ರಸಕ್ತ ವರ್ಷದ ಬಿಇಡಿ ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕ ಪಾವತಿಯಲ್ಲಿ ಪೂರ್ಣ ಪ್ರಮಾಣದ ಹಣವನ್ನು ಭರಿಸುವಂತಾಗಿದ್ದು, ಅತ್ಯಂತ ಕಡು ಬಡ ವಿದ್ಯಾರ್ಥಿಗಳು ಪೂರ್ಣ ಪ್ರಮಾಣದ ಶುಲ್ಕುವನ್ನು ಭರಿಸಲಾಗದೆ ತತ್ತರಿಸುವಂತಾಗಿದೆ. ಕೂಡಲೇ ವಿದ್ಯಾಸಿರಿ ಯೋಜನೆಯನ್ನು ಯಥಾಸ್ಥಿತಿ ಚಾಲ್ತಿಗೊಳಿಸಿ ಅರ್ಜಿ ಸಲ್ಲಿಸಲು ದಿನಾಂಕ ನಿಗದಿ ಪಡಿಸಿ ಅರ್ಜಿಗಳನ್ನು ಪಡೆಯುವಂತಾಗಬೇಕು ಎನ್ನುವುದು ಬಿಇಡಿ ಮತ್ತು ಡಿಇಡಿ ವಿದ್ಯಾರ್ಥಿಗಳ ಒಕ್ಕೊರಲಿನ ಆಗ್ರಹವಾಗಿದೆ.

  ವಿದ್ಯಾಸಿರಿಗೆ ಅರ್ಜಿ ಸಲ್ಲಿಸಲು ದಿನಾಂಕ ಮುಗಿದುಹೋಗಿದೆ. ನಿಗದಿತ ಅವಧಿಯಲ್ಲಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದರೂ ವೆಬ್‍ಸೈಟ್‍ನಲ್ಲಿ ಅರ್ಜಿಗಳು ಸ್ವೀಕೃತಗೊಂಡಿಲ್ಲ, ಆದರೇ ಈಗಾಗಲೇ ದಿನಾಂಕ ಮುಗಿದಿದ್ದು ವಿದ್ಯಾರ್ಥಿಗಳು ಪೂರ್ಣ ಶುಲ್ಕ ಪಾವತಿಸುವ ಸಮಸ್ಯೆ ಎದುರಾಗಿದೆ.

ಈ ಸಮಸ್ಯೆಗಳಿಗೆ ಸರ್ಕಾರ ಮತ್ತು ಇಲಾಖೆಗಳೆ ಮೂಲ ಕಾರಣ :

   ಸರ್ಕಾರ ವಿದ್ಯಾಸಿರಿ ಯೋಜನೆಯಲ್ಲಿ ಇತ್ತೀಚೆಗೆ ಹಲವು ತಿದ್ದುಪಡಿಗಳನ್ನು ತಂದಿದ್ದು, ಪ್ರಸಕ್ತ ವರ್ಷದಲ್ಲಿ ಎಂಎಯಿಂದ ಬಿಇಡಿ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಪದವಿಯಿಂದ ನೇರವಾಗಿ ಬಿಇಡಿ ಮಾಡುತ್ತಿರುವವರು ಹಾಗೂ ಡಿಇಡಿ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ಒಬಿಸಿ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಯು ಸಫಲವಾಗುತ್ತಿಲ್ಲ. ಅರ್ಜಿಗಳು ಸ್ವೀಕೃತವಾಗುತ್ತಿಲ್ಲ. ಈ ಕುರಿತ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆಗಳು ಮುತುವರ್ಜಿ ವಹಿಸದೇ ಇರುವುದು ನೋವಿನ ಸಂಗತಿಯಾಗಿದ್ದು, ವಿದ್ಯಾರ್ಥಿಗಳ ಈ ಡೋಲಾಯಮಾನ ಸ್ಥಿತಿಗೆ ಸರ್ಕಾರವೇ ಮೂಲ ಕಾರಣವೆಂಬಂತಾಗಿದೆ. ಮತ್ತೂ ಸಂಬಂಧಪಟ್ಟ ಇಲಾಖೆಗಳು ಸಮಸ್ಯೆಯನ್ನು ಕಂಡೂ ಕಾಣದಂತೆ ಕಣ್ಮುಚ್ಚಿಕೊಂಡಿರುವುದು ಅಸಡ್ಡೆಯೇ ಸರಿ.

ಉಪ ಚುನಾವಣೆಯ ಬಿರುಸಿಗೆ ಕೇಳಿಸದ ವಿದ್ಯಾರ್ಥಿಗಳ ಮೊರೆ :

      ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ರೂಪಿಸುವ ವಿದ್ಯಾರ್ಥಿವೇತನಗಳಿಗೆ ಸರ್ಕಾರ ಮುಟ್ಟುಗೋಲು ಹಾಕಿಕೊಂಡು ರಾಜಕೀಯ ನಡೆಸುತ್ತಿದೆ. ಈ ವಿದ್ಯಾರ್ಥಿ ವೇತನಗಳೇ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರೆಸುವ ಶಕ್ತಿಯಾಗಿದ್ದು, ಸರ್ಕಾರ ಇದನ್ನೇ ಕಳೆಯಲು ಹೊರಟಿದೆ. ಇದೇ ಸಂದರ್ಭದಲ್ಲಿ ಉಪಚುನಾವಣೆ ಎದುರಾಗಿ ರಾಜಕೀಯ ನಾಯಕರುಗಳೆಲ್ಲಾ ಪ್ರಚಾರದ ಬಿರುಸಿನ ಬ್ಯುಸಿಯಾಗಿದ್ದು ವಿದ್ಯಾರ್ಥಿಗಳ ಮೋರೆ ಯಾರಿಗೂ ತಟ್ಟದಾಗಿದೆ.

   ಕಾಲೇಜುಗಳಲ್ಲಿ ಇ-ಪಾಸ್ ಮೂಲಕ ಹಿಂದುಳಿದ ವರ್ಗಗಳ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ. ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಹಾಸ್ಟೆಲ್‍ನಲ್ಲಿದ್ದರೂ ಸಹ ಎಸ್.ಎಸ್.ಪಿ ಮೂಲಕ ಮತ್ತೆ ಅರ್ಜಿ ಹಾಕಬೇಕಾದ ಅನಿರ್ವಾಯತೆ ಒದಗಿದೆ. ಅರ್ಜಿ ಸಲ್ಲಿಸುವಲ್ಲಿ ಸರ್ವರ್ ಸಮಸ್ಯೆಯಿಂದ ಬೇಸತ್ತಿರುವ ವಿದ್ಯಾರ್ಥಿ ಗಳಿಗೆ ಇನ್ನು, ಬ್ಯಾಂಕುಗಳಲ್ಲೂ ಹತ್ತೂ ಹಲವು ತೊಂದರೆಗಳು ಉಂಟಾಗುತ್ತಿವೆ. ಈ ರೀತಿಯ ವಿವಿಧ ಸಮಸ್ಯೆಗಳ ನಿವಾರಣೆಗೆ ಸಂಬಂಧಪಟ್ಟ ಇಲಾಖೆಗಳು ಹಾಗೂ ಅಲ್ಲಿನ ಅಧಿಕಾರಿಗಳು ಗಮನಿಸದ ಪರಿಣಾಮ ವಿದ್ಯಾರ್ಥಿಗಳು ಆತಂಕಕ್ಕೊಳಗಾಗಲು ಕಾರಣವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link