ಬೆಂಗಳೂರು
ತನ್ನ ಆಡಳಿತಾವಧಿಯ ಕೊನೆಯ ದಿನಗಳಲ್ಲಿ ಸಿದ್ಧರಾಮಯ್ಯ ಸರ್ಕಾರ ತರಾತುರಿಯಲ್ಲಿ ಹಲವು ಯೋಜನೆಗಳಿಗೆ ಮಂಜೂರಾತಿ ನೀಡಿದ್ದು ಅದಕ್ಕೆ ಹಣ ಒದಗಿಸಲಾಗದೆ, ತಮ್ಮ ಕನಸಿನಂತೆ ಸರ್ಕಾರನಡೆಸಲಾಗದೆ ಮುಖ್ಯಮಂತ್ರಿ ಕುಮಾರಸ್ವಾಮಿ ಕಂಗಾಲಾಗಿದ್ದು ಈ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರ ಹಿಟ್ ವಿಕೆಟ್ ಆಗುವ ಭೀತಿಯಲ್ಲಿದೆ ಎಂದು ಬಿಜೆಪಿಯ ಹಿರಿಯ ನಾಯಕ,ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಇಂದಿಲ್ಲಿಹೊಸ ಬಾಂಬ್ ಸಿಡಿಸಿದ್ದಾರೆ.
ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ತಮ್ಮ ಸರ್ಕಾರ ಜಾರಿಗೆ ತರಲು ನಿರ್ಧರಿಸಿದ ಯೋಜನೆಗಳಿಗೆ ಹಣ ಕೊಡಿ ಎಂದು ಸಿದ್ಧರಾಮಯ್ಯ ಒತ್ತಡ ಹೇರುತ್ತಿದ್ದಾರೆ.ಮತ್ತೊಂದು ಕಡೆ ತಮ್ಮ ಕನಸಿನಂತೆ ಸರ್ಕಾರ ನಡೆಸಲುಬಯಸಿರುವ ಕುಮಾರಸ್ವಾಮಿ ಅದಕ್ಕೆ ಪ್ರತಿರೋಧವೊಡ್ಡುತ್ತಿದ್ದಾರೆ.ಈ ಅಂಶವೇ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾಗಲಿದೆ ಎಂದು ವಿವರಿಸಿದರು.
ತಮಗಿರುವ ಮಾಹಿತಿಯಂತೆ ಸಮ್ಮಿಶ್ರ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದ್ದು ಈಗಾಗಲೇ ಬಾಂಡ್ ಗಳ ರೂಪದಲ್ಲಿ ಒಂದೂವರೆ ಸಾವಿರ ಕೋಟಿ ರೂ ಸಾಲ ಎತ್ತಿದೆ.ಮುಂದಿನ ದಿನಗಳಿಗೆ ಎಂದು ಎಪ್ಪತ್ತೊಂದು ಸಾವಿರಕೋಟಿ ರೂಗಳ ಸಾಲ ಮಾಡಲು ಮುಂದಾಗಿದೆ.
ಆ ಮೂಲಕ ರಾಜ್ಯದ ಮೇಲಿರುವ ಒಟ್ಟು ಸಾಲದ ಮೊತ್ತ ಮೂರು ಲಕ್ಷ ಕೋಟಿ ರೂಗಳನ್ನು ಮೀರಲಿದ್ದು ಇದೇ ರೀತಿ ಸಾಲ ಮಾಡುತ್ತಾ ಹೋದರೆ ಈ ಸರ್ಕಾರದ ಅವಧಿಯಲ್ಲಿ ಸಾಲದ ಪ್ರಮಾಣ ಐದು ಲಕ್ಷ ಕೋಟಿ ರೂಗಳನ್ನುತಲುಪಲಿದೆ.
ಹಾಗೆಯೇ ದುಡ್ಡು ಕೊಡಲಾಗದೆ ಬ್ರಿಟಿಷರಿಗೆ ಟಿಪ್ಪು ಸುಲ್ತಾನ್ ತನ್ನ ಮಕ್ಕಳನ್ನು ಒತ್ತೆಯಿಟ್ಟಂತೆ, ಸರ್ಕಾರ ಕೂಡಾ ರಾಜ್ಯವನ್ನು ಅಡ ಇಡುವ ಪರಿಸ್ಥಿತಿ ಬರಲಿದೆ ಎಂದು ಎಚ್ಚರಿಸಿದರು.
ಸಿದ್ಧರಾಮಯ್ಯ ಹಾಗೂ ಕುಮಾರಸ್ವಾಮಿ ನಡುವಣ ಈ ಸಂಘರ್ಷದಲ್ಲಿ ಸರ್ಕಾರ ಆರ್ಥಿಕವಾಗಿ ಕುಸಿದು ಹೋಗಿದ್ದು ಪರಿಣಾಮವಾಗಿ ಸರ್ಕಾರ ಪಾಶ್ರ್ವವಾಯು ಪೀಡಿತವಾಗಿದೆ.ಹೀಗೇ ಮುಂದುವರಿದರೆ ಅದು ಕೋಮಾಕ್ಕೆತಲುಪಲಿದೆ.ಹೀಗಾಗಿ ಕೋಮಾಕ್ಕೆ ಹೋಗುವ ಮುನ್ನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜ್ಯದ ಆರ್ಥಿಕ ಸ್ಥಿತಿಗತಿಯ ಬಗ್ಗೆ ರಾಜ್ಯದ ಜನರಿಗೆ ವಿವರ ನೀಡಬೇಕು.ಇದಕ್ಕಾಗಿ ಶ್ವೇತಪತ್ರ ಹೊರಡಿಸಬೇಕು ಎಂದುಆಗ್ರಹಿಸಿದರು.
ಅಂದ ಹಾಗೆ ಸಿದ್ಧರಾಮಯ್ಯ ಅವರ ಸರ್ಕಾರ ತನ್ನ ಕೊನೆಯ ದಿನಗಳಲ್ಲಿ ಎಷ್ಟು ಮೊತ್ತದ ಯೋಜನೆಗಳಿಗೆ ಅಂಗೀಕಾರ ನೀಡಿದೆ?ರಾಜ್ಯ ಸರ್ಕಾರ ನೌಕರರಿಗೆ ನೀಡಲಾಗುತ್ತಿರುವ ವೇತನದ ಪ್ರಮಾಣ ಎಷ್ಟು?ಪಿಂಚಣಿದಾರರಿಗೆನೀಡುತ್ತಿರುವ ನಿವೃತ್ತಿ ವೇತನದ ಪ್ರಮಾಣವೆಷ್ಟು?ರಾಜ್ಯ ಮಾಡಿರುವ ಸಾಲದ ಮೇಲಿನ ಅಸಲು-ಬಡ್ಡಿ ಕಟ್ಟಲು ಎಷ್ಟು ಹಣ ವಿನಿಯೋಗವಾಗುತ್ತಿದೆ?ಇದನ್ನು ಹೊರತುಪಡಿಸಿದರೆ ರಾಜ್ಯದ ಅಭಿವೃದ್ಧಿಗೆ ಖರ್ಚು ಮಾಡಲು ಎಷ್ಟುಹಣ ಉಳಿಯುತ್ತದೆ?ಎಂಬ ಕುರಿತು ಶ್ವೇತಪತ್ರದಲ್ಲಿ ಪೂರ್ಣ ಚಿತ್ರ ನೀಡಬೇಕು ಎಂದು ಹೇಳಿದರು.
ತಮಗಿರುವ ಮಾಹಿತಿಯಂತೆ ಸರ್ಕಾರಕ್ಕೆ ಬರುವ ಒಂದು ರೂ ಆದಾಯದ ಪೈಕಿ ಎಂಭತ್ತೆರಡು ಪೈಸೆಗಳಷ್ಟು ಹಣ ಇಂತಹ ವಿವಿಧ ಕಾರಣಗಳಿಗಾಗಿ ವಿನಿಯೋಗವಾಗುತ್ತಿದ್ದು ಕೇವಲ ಹನ್ನೆರಡು ಪೈಸೆಯಷ್ಟು ಹಣ ಮಾತ್ರಅಭಿವೃದ್ಧಿಗೆ ಲಭ್ಯವಾಗುತ್ತಿದೆ.ಇದು ಆತಂಕಕಾರಿ ವಿಷಯ ಎಂದರು.
ಈಗಾಗಲೇ ರಾಜ್ಯದ ನೂರಾ ಐವತ್ತಾರು ತಾಲ್ಲೂಕುಗಳು ಬರಪೀಡಿತ ಎಂದು ಸರ್ಕಾರವೇ ಹೇಳಿದೆ.ಆದರೆ ಬರಗಾಲ ಪರಿಹಾರಕ್ಕಾಗಿ ಶ್ರಮಿಸಬೇಕಾದ ಸರ್ಕಾರ ತಾನೇ ಖುದ್ದಾಗಿ ಬರಪೀಡಿತ ಸ್ಥಿತಿಯಲ್ಲಿದೆ.ಆದರೂಪರಿಸ್ಥಿತಿಯನ್ನು ಎದುರಿಸಲು ಇಡಬೇಕಾದ ಮಾರ್ಗೋಪಾಯಗಳ ಕುರಿತು ಯೋಚಿಸದೆ ಸರ್ಕಾರದ ಅಂಗಪಕ್ಷಗಳು ತಮ್ಮ ತಮ್ಮಲ್ಲೇ ಕಚ್ಚಾಡುತ್ತಿವೆ ಎಂದು ದೂರಿದರು.
ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಅಭಿವೃದ್ಧಿ ಬೇಕಿಲ್ಲ.ಸಿದ್ಧರಾಮಯ್ಯ ಅವರಿಗೆ ತಮ್ಮಿಚ್ಚೆಯಂತೆ ಸರ್ಕಾರ ನಡೆಯಬೇಕು ಎಂಬ ಇಚ್ಚೆಯಾದರೆ,ಆ ಪಕ್ಷದ ಹೈಕಮಾಂಡ್ ಗೆ ಮುಂದಿನ ಲೋಕಸಭಾ ಚುನಾವಣೆಯ ದೃಷ್ಟಿಯಿಂದಅನುಕೂಲ ಒದಗಿಸಲು ಈ ಸರ್ಕಾರ ಬೇಕು.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈ ವಿಷಯವನ್ನು ಅರ್ಥ ಮಾಡಿಕೊಂಡು ತಕ್ಷಣವೇ ಆ ಪಕ್ಷದೊಂದಿಗಿನ ಮೈತ್ರಿಯನ್ನು ಕಳಚಿಕೊಂಡು ಹೊರಬರಬೇಕು.ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಎದುರಾಗುವ ಅಪಾಯಗಳನ್ನು ಅವರು ತಮ್ಮ ತಲೆಯ ಮೇಲೇ ಹೊರಬೇಕಾಗುತ್ತದೆ ಎಂದರು.
ಇದುವರೆಗೆ ಶಾಲಾ ಮಕ್ಕಳಿಗೆ ನಮ್ಮ ರಾಜ್ಯದ ಮುಖ್ಯಮಂತ್ರಿ ಯಾರು?ಎಂದು ಪ್ರಶ್ನಿಸಿದರೆ ಭಿನ್ನ ಭಿನ್ನ ಉತ್ತರ ಬರುತ್ತಿತ್ತು.ಹೀಗಾಗಿ ನಮ್ಮ ಮಕ್ಕಳಿಗೆ ನಮ್ಮ ಮುಖ್ಯಮಂತ್ರಿ ಯಾರೆಂದೇ ಗೊತ್ತಿಲ್ಲ ಎಂದು ಹೇಳುವ ಸ್ಥಿತಿಇತ್ತು.ಆದರೆ ಈಗ ಮಕ್ಕಳಿಗಲ್ಲ,ಸರ್ಕಾರದಲ್ಲಿರುವ ಹಲವು ಮಂತ್ರಿಗಳಿಗೆ,ಶಾಸಕರಿಗೇ ಗೊತ್ತಿಲ್ಲ.
ಹೀಗಾಗಿಯೇ ಸಚಿವರಾದ ಪುಟ್ಟರಂಗಶೆಟ್ಟಿ,ಎಂ.ಟಿ.ಬಿ.ನಾಗರಾಜ್,ಎಸ್.ಟಿ.ಸೋಮಶೇಖರ್ ಸೇರಿದಂತೆ ಹಲವರು,ಸಿದ್ದರಾಮಯ್ಯ ಅವರೇ ನಮ್ಮ ಮುಖ್ಯಮಂತ್ರಿ ಎನ್ನುತ್ತಿದ್ದಾರೆ.ಇದು ವರ್ತಮಾನದ ದುರಂತ ಎಂದಅವರು,ವರ್ತಮಾನದ ಅರಿವೇ ಇಲ್ಲದವರು ನಾಡಿಗೆ ಒಳ್ಳೆಯ ಭವಿಷ್ಯ ತರಲು ಸಾಧ್ಯವೇ?ಎಂದು ಪ್ರಶ್ನಿಸಿದರು.
ಮಾತೆತ್ತಿದರೆ ಸರ್ಕಾರವನ್ನು ಬೀಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಹೇಳುವ ಬದಲು ತಮ್ಮ ಮಡಿಲಲ್ಲೇ ಅಡಗಿಸಿಕೊಂಡಿರುವ ಕೆಂಡವನ್ನು ಆರಿಸಿಕೊಳ್ಳಲು ಸಮ್ಮಿಶ್ರ ಸರ್ಕಾರದ ಅಂಗಪಕ್ಷಗಳು ಪ್ರಯತ್ನಿಸಿದ್ದಿದ್ದರೆ ಪರಿಸ್ಥಿತಿಇಷ್ಟೊಂದು ವಿಕೋಪಕ್ಕೆ ಹೋಗುತ್ತಿರಲಿಲ್ಲ ಎಂದು ಅವರು ಮಾರ್ಮಿಕವಾಗಿ ನುಡಿದರು.